ಬೆಳಗಾಗುವುದೊರಳಗೆ, ಸುದ್ದಿ ಕಾಳ್ಗಿಚ್ಚಿನಂತೇ ಎಲ್ಲೆಡೆ ಹರಡಿತ್ತು. ಈಗ ತನಿಖೆ ಶುರುವಾಯಿತು. ತನಿಖೆಯಲ್ಲಿ ಹೊರಬಿದ್ದ ವರದಿ ನಿಜಕ್ಕೂ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಕೆಲಸ ಮಾಡಿದವನೊಬ್ಬ ದೊಡ್ಡ ರಾಜಕೀಯ ವಶೀಲಿ ಇರುವ ಮನುಷ್ಯ. ಅಲ್ಲಿಯ ತನಕವೂ ಸುತ್ತೂರಿನವರ ಕಣ್ಣಲ್ಲಿ ಆತ ಪ್ರತ್ಯಕ್ಷ ದೇವರಾಗಿದ್ದ. ಬಡವರ ಪಾಲಿನ ಕಾಮಧೇನು ಎಂದೆಲ್ಲ ಹೆಸರು ಗಳಿಸಿದ್ದ ಆತ, ಮಾಡುತ್ತಿದ್ದ ಈ ಕಳ್ಳತನದ ಕೆಲಸ ಜಗಜ್ಜಾಹೀರಾದ ದಿನ ಎಲ್ಲರೂ ಆತನನ್ನು ಮನಸಾರೆ ಶಪಿಸಿದ್ದರು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಕೊನೆಯ ಕಂತು
ಹಿಂದಿನ ಅಧ್ಯಾಯಗಳಲ್ಲಿ, ಈ ಉನ್ನತ ಹುದ್ದೆಗಳಲ್ಲಿರುವ ಸರ್ಕಾರಿ ನೌಕರರು ಭ್ರಷ್ಟರಾಗಿದ್ದಾಗ, ಸಮಾಜದ, ದೇಶದ ಹಿತಾಸಕ್ತಿಗಳು ಹೇಗೆ ಮೂಲೆಗುಂಪಾಗಿ ಬಿಡುತ್ತವೆ ಎಂಬುದನ್ನು ತಿಳಿದುಕೊಂಡಂತಾಯಿತು… ಹಾಗಂತ ಎಲ್ಲ ಅಧಿಕಾರಿಗಳೂ ಭ್ರಷ್ಟರೇ ಇರುತ್ತಾರೆ ಅಂತ ತಿಳಿಯ ಬೇಡಿ. ತುಂಬ ಕರ್ತವ್ಯ ನಿಷ್ಠರಾದ ಪ್ರಾಮಾಣಿಕ ಅಧಿಕಾರಿಗಳು ಅನೇಕರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಆದರೆ, ಆ ಕರ್ತವ್ಯ ನಿಭಾಯಿಸುವಲ್ಲಿ ಅವರು ಪಡುವ ಶ್ರಮ, ತೆತ್ತ ಬೆಲೆ ಲೆಕ್ಕ ಹಾಕುವುದೇ ಕಷ್ಟ. ಅಂದು ನಾವು ಕಂಡ, ಅಂಥ ಒಬ್ಬ ನಿಷ್ಠ ಅಧಿಕಾರಿಯ ಕುರಿತು ನಿಮಗೆ ಹೇಳಲೇ ಬೇಕು.
ಈಗ ನಾನು ಹೇಳ ಹೊರಟಿರುವುದು ಸುಮಾರು ೮೦ ರ ದಶಕದ ಕಥೆ. ಒಬ್ಬ ನಿಷ್ಠಾವಂತ ಅರಣ್ಯಾಧಿಕಾರಿ, ನಮ್ಮ ಉತ್ತರ ಕನ್ನಡದ ಅರಣ್ಯ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದರು. ಮೂಲ ಇಲ್ಲಿಯವರೇ ಆದ ಅವರಿಗೆ, ಎಲ್ಲರ ‘ನರನಾಡಿ’ ಗೊತ್ತುಂಟು ಎಂದು ಎಲ್ಲರೂ ಹೆಮ್ಮೆಯಿಂದ ಮಾತಾಡಿಕೊಳ್ಳುತ್ತಿದ್ದರು.
ಅಷ್ಟು ದಟ್ಟವಾಗಿದ್ದ ನಮ್ಮ ಕಾಡನ್ನು, ಒಳಗಿಂದ ಒಳಗೇ ನುಣ್ಣಗೆ ಮಾಡುತ್ತಿದ್ದ ಮರಗಳ್ಳರನ್ನು ಹಿಡಿದು ಹೆಡೆಮುರಿಗೆ ಕಟ್ಟುವ ಶಪಥ ಹೊತ್ತೇ ನಿಂತಿದ್ದ ಅವರು, ಅಂಥವರ ಪಾಲಿಗೆ ಸಿಂಹ ಸ್ವಪ್ನವಾಗಿದ್ದರು.
ಇದು ಅನೇಕ ಸಮಾಜ ಘಾತಕ ಶಕ್ತಿಗಳಿಗೆ ನುಂಗಲಾರದ ತುತ್ತಾಗಿತ್ತು. ಆದರೆ, ಒಮ್ಮೆ ಕದ್ದು ರುಚಿ ಹಚ್ಚಿಕೊಂಡ ಕೈ ಸುಮ್ಮನಿರುವುದಾದರೂ ಹೇಗೆ? ಅಂತೂ ಒಂದಷ್ಟು ತಿಂಗಳು ತೆರೆಯ ಮರೆಯಲ್ಲೇ ಕುಟಿಲ ತಂತ್ರ ಹೆಣೆದ ಖದೀಮರ ಗುಂಪೊಂದು, ಅಧಿಕಾರಿಯ ಕಣ್ಣಿಗೆ ಮಣ್ಣೆರೆಚಿ, ದಟ್ಟ ಕಾಡ ಮಧ್ಯದಲ್ಲಿ ಒಂದಷ್ಟು ಮರಗಳ ಹನನಕಾರ್ಯ ಕೈಗೊಂಡೇ ಬಿಟ್ಟಿತ್ತು. ಆ ಸುದ್ದಿ ಅಧಿಕಾರಿಯ ಕಿವಿಗೆ ಮುಟ್ಟುವಷ್ಟರಲ್ಲಿ ಬೆಲೆ ಬಾಳುವ ಮರಗಳು ಕಳ್ಳದಾರಿಯಲ್ಲಿ ಹೊರಹೋಗಲು ಸಿದ್ಧವಾಗಿ ನಿಂತಾಗಿತ್ತು. ಅದೇ ದಿನದ ಮಧ್ಯರಾತ್ರಿಯಲ್ಲಿ ಮರಗಳನ್ನು ಹೊತ್ತ ಲಾರಿ ಕಾಡಿನಿಂದ ಹೊರಬಿದ್ದು, ಗಮ್ಯಸ್ಥಾನ ಸೇರುವ ಮುಹೂರ್ತ ಫಿಕ್ಸ್ ಮಾಡಿದ ಸುದ್ದಿ ಅದು ಹೇಗೋ ಆ ಅಧಿಕಾರಿಯ ಕಿವಿ ತಲುಪಿಯೇ ಬಿಟ್ಟಿತ್ತು.
ಆ ರಾತ್ರಿ, ಆ ಅಧಿಕಾರಿ ಒಬ್ಬಂಟಿಯಾಗಿ ಆ ಕಳ್ಳರನ್ನು ಮಾಲು ಸಮೇತ ಹಿಡಿಯುವ ಪಣ ತೊಟ್ಟು ರಸ್ತೆಯಲ್ಲಿ ಕಾದು ಕುಳಿತಿದ್ದ. ಒಂದು ಬೆಳಕಿನ ಕಿಡಿಯೂ ಇರದ ಆ ನಿರ್ಜನ ಕಾಡು ರಸ್ತೆಯಲ್ಲಿ ಅಂಥ ದುಷ್ಟರನ್ನು ಮಟ್ಟ ಹಾಕಲು ಸಿದ್ಧನಾಗಿದ್ದ ಆ ಅಧಿಕಾರಿ ಎಂಥ ಎದೆಗಾರನಿರಬೇಕು! ಆತನ ಕತೃತ್ವ ಶಕ್ತಿ ಎಂಥದಿರಬೇಕು!! ಮಧ್ಯರಾತ್ರಿ ದಾಟಿಯಾಗಿತ್ತು. ಆಗ ಕಾಡು ಸೀಳಿಕೊಂಡು ಹೊರಬಿದ್ದು ರಸ್ತೆಗಿಳಿಯಿತು ಆ ಲಾರಿ!! ಈಗ ಅಧಿಕಾರಿ ಚುರುಕಾಗಿ, ಕೈಲಿದ್ದ ಬ್ಯಾಟರಿ ಛಕ್ಕನೆ ಬೆಳಗಿಸಿ, ಲಾರಿಯನ್ನು ನಿಲ್ಲಲು ಸೂಚಿಸಿದರು. ಮೊದಲು, ಅವರು ಅರ್ಥವಾಗದೇ ನಿಂತಿರಬೇಕು. ಕೊನೆಗೆ, ತಕ್ಷಣ ಅವರ ಗುರುತಾಗಿ ಗಾಬರಿಯಿಂದ ಹೊರಡಲು ಮೊದಲಾಗಿದ್ದಾರೆ. ಆದರೆ ಅಧಿಕಾರಿ ನಡು ರಸ್ತೆಯಲ್ಲಿ ನಿಂತು ಅದನ್ನು ಅಡ್ಡಗಟ್ಟಿದ್ದಾನೆ. ಖಳರೂ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ. ಆತ ಕೊನೆಗೂ ಮಣಿಯದಾದಾಗ, ಚಾಲಕನಿಗೆ ಹುಕುಂ ನೀಡಿದ ಕಳ್ಳರು, ಅವನ ಮೇಲೇ ಲಾರಿ ಹರಿಸಿಕೊಂಡು ಪರಾರಿಯಾಗಿದ್ದಾರೆ. ಮಧ್ಯರಾತ್ರಿಯಲ್ಲೂ ಕರ್ತವ್ಯ ನಿಷ್ಠೆ ತೋರಿದ ತಪ್ಪಿಗೆ ಆ ಅಧಿಕಾರಿಯನ್ನು ಈ ರೀತಿಯಾಗಿ ಬರ್ಭರವಾಗಿ ಹತ್ಯೆ ಮಾಡಲಾಯಿತು.
ಬೆಳಗಾಗುವುದೊರಳಗೆ, ಸುದ್ದಿ ಕಾಳ್ಗಿಚ್ಚಿನಂತೇ ಎಲ್ಲೆಡೆ ಹರಡಿತ್ತು. ಈಗ ತನಿಖೆ ಶುರುವಾಯಿತು. ತನಿಖೆಯಲ್ಲಿ ಹೊರಬಿದ್ದ ವರದಿ ನಿಜಕ್ಕೂ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಕೆಲಸ ಮಾಡಿದವನೊಬ್ಬ ದೊಡ್ಡ ರಾಜಕೀಯ ವಶೀಲಿ ಇರುವ ಮನುಷ್ಯ. ಅಲ್ಲಿಯ ತನಕವೂ ಸುತ್ತೂರಿನವರ ಕಣ್ಣಲ್ಲಿ ಆತ ಪ್ರತ್ಯಕ್ಷ ದೇವರಾಗಿದ್ದ. ಬಡವರ ಪಾಲಿನ ಕಾಮಧೇನು ಎಂದೆಲ್ಲ ಹೆಸರು ಗಳಿಸಿದ್ದ ಆತ, ಮಾಡುತ್ತಿದ್ದ ಈ ಕಳ್ಳತನದ ಕೆಲಸ ಜಗಜ್ಜಾಹೀರಾದ ದಿನ ಎಲ್ಲರೂ ಆತನನ್ನು ಮನಸಾರೆ ಶಪಿಸಿದ್ದರು.
ಆದರೆ, ಆತ ಅಷ್ಟು ಸುಲಭಕ್ಕೆ ಕಾನೂನಿನ ಕೈಗೆ ಸಿಕ್ಕಾನೆಯೆ? ಅವನ ಪರವಾಗಿ ಪ್ರಭಲ ರಾಜಕೀಯ ಶಕ್ತಿ ಕೆಲಸ ಮಾಡತೊಡಗಿತ್ತು. ಅದು ಕೊಲೆಯಲ್ಲ, ಅಪಘಾತ. ಯಾವುದೋ ಅಪರಿಚಿತನ ವಾಹನದಡಿ ಸಿಕ್ಕು ಆತ ಮರಣಿಸಿದ್ದಾನೆ ಎಂಬ ಉದ್ದುದ್ದ ಹೇಳಿಕೆಗಳು ಎಲ್ಲೆಡೆ ಹರಿದಾಡಿ, ಆತನ ನಿರಪರಾಧಿತ್ವ ಸಾಬಿತಾಗುವ ಹಂತ ತಲುಪಿತ್ತು.ಅದೇ ವೇಳೆಯಲ್ಲಿ, ಆ ಅಧಿಕಾರಿಯ ಹೆಂಡತಿ ತುಂಬು ಗರ್ಭಿಣಿ. ಹಳ್ಳಿಯಲ್ಲಿರುವ ತವರು ಮನೆಗೆ ಹೆರೆಗೆಗೆಂದು ಹೋಗಿದ್ದವಳು. ಅವಳ ಗೋಳು ನೋಡಿದ ಹೆಂಗಳೆಯರೆಲ್ಲ ಮರುಗಿದರು. ಅಷ್ಟೇ ಅಲ್ಲ ಅದೇ ಮರುಕ, ಅವಳ ಗಂಡನನ್ನು ಕೊಲೆಗೈದ ದುಷ್ಟರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಿಡಿಯಾಯಿತು. ಅವನು ಇನ್ನೇನು ಖುಲಾಸೆಗೊಂಡು ಬಿಡುತ್ತಾನೆ ಎಂಬ ಸುದ್ದಿ ಎಲ್ಲರನ್ನೂ ಕೆರಳಿಸಿತ್ತು. ಆಗ ಸೇರಿತು ನಾರಿವೃಂದ ನೋಡಿ!! ಪ್ರತಿ ಹಳ್ಳಿ, ಹಳ್ಳಿಗೆ ಆ ಹೆಣ್ಣುಮಗಳ ಗೋಳಿನ ಕಥೆಯನ್ನು ಮುಟ್ಟಿಸಲಾಯಿತು. ಆ ಖಳರನ್ನು ಜೈಲಿಗಟ್ಟುವ ಶಪಥ ಕೈಗೊಳ್ಳಲಾಯಿತು. ನಮ್ಮ ಉತ್ತರ ಕನ್ನಡದ “ಹಳ್ಳಿಮಡ್ಡು” ಎನ್ನಿಸಿಕೊಂಡಿದ್ದ ಗ್ರಹಿಣಿಯರೆಲ್ಲಾ ಉಟ್ಟ ಸೀರೆಯಲ್ಲೇ ಮನೆಯಿಂದ ಹೊರಬಂದು ಸಾವಿರ, ಸಾವಿರ ಸಂಖ್ಯೆಯಲ್ಲಿ ಶಿರಸಿಯಲ್ಲಿ ಒಟ್ಟುಗೂಡಿ, ಆ ದುಷ್ಟರಿಗೆ ಶಿಕ್ಷೆಯಾಗಬೇಕೆಂದು ಕೂಗುತ್ತ, ಪೇಟೆಯ ಬೀದಿ ಬೀದಿ ತಿರುಗಿ ಸಂಚಲನ ಮೂಡಿಸಿದ್ದರು.
ನಾರಿ ಶಕ್ತಿಯೆದುರು ಆಡಳಿತದ ಮಂದಿ ತಲೆಬಾಗಲೇ ಬೇಕಾಯ್ತು. ಕೇಸು ದಾಖಲಾಯಿತು. ಮುಂದೊಂದಿಷ್ಟು ತಿಂಗಳಲ್ಲಿ ಇದರಲ್ಲಿ ಭಾಗಿಯಾದ ಒಂದೇ ಕುಟುಂಬದ ಮೂವರು ಆಜೀವ ಕಾರಾಗ್ರಹ ಶಿಕ್ಷೆ ಪಡೆದು ಒಳಹೋದರು. ನ್ಯಾಯ ಗೆದ್ದಿತು ಜನ ಸಮಾಧಾನದಿಂದ ಉಸಿರಾಡಿದರು. ಏನು ಮಾಡಿದರೂ ಹೋದ ಜೀವ ಬಂದೀತೆ? ಆದರೆ, ಇದೊಂದು ವೀರ ಮರಣ ಎಂಬುದಂತೂ ಸುಳ್ಳಲ್ಲವಲ್ಲಾ. ಇವತ್ತು ಜಗತ್ತಿನಲ್ಲಿ ಮಳೆ, ಬೆಳೆ ಇದೆ, ನಾವುಗಳೆಲ್ಲಾ ಸುಸೂತ್ರ ಬದುಕಿದ್ದೇವೆ ಎಂದರೆ, ಇಂಥವರ ಪುಣ್ಯದಿಂದಲೇ ಅನ್ನಿಸುತ್ತದೆ.

ಉಪ ಸಂವಾರ
ನನ್ನ ಬಾಲ್ಯದ ಸುಂದರ ಮಲೆನಾಡಿನ ಚಿತ್ರಣವನ್ನು ಇಲ್ಲಿಯ ತನಕ ಸುಮಾರು ೨೧ ಕಂತುಗಳ ಮೂಲಕ ಕಟ್ಟಿಕೊಟ್ಟಿದ್ದಾಯಿತು. ಇದರ ಮೂಲಕ ನನ್ನ ನೆನಪುಗಳೂ ಮರು ಜೀವ ಪಡೆದುಕೊಂಡು, ಬದುಕು ಮತ್ತಷ್ಟು ಸಹ್ಯವಾಯಿತು. ಜೊತೆಗೆ, ನಮ್ಮ ಸುಂದರ ಬಾಲ್ಯದ ಬಗ್ಗೆ ಹೆಮ್ಮೆಯೂ ಮೂಡಿತು. ಈ ಹಿಂತಿರುಗಿ ನೋಡುವಿಕೆ, ನಮ್ಮ ಬದುಕಲ್ಲಿ ಹೊಸ ಉತ್ಸಾಹ ಹೊಮ್ಮಿಸುವುದಂತೂ ಸುಳ್ಳಲ್ಲ.
ಕನಸು ಎಷ್ಟೊತ್ತು ಕಾಣಲು ಸಾಧ್ಯ? ಮತ್ತೆ ವಾಸ್ತವಕ್ಕೆ ಬರಲೇ ಬೇಕಲ್ಲವೇ. ಆ ಕನಸಿನಿಂದ ಮರಳಿದ ನಂತರ ಕಾಣುವ ವಾಸ್ತವ ನಿಜಕ್ಕೂ ಬೇಸರ ಮೂಡಿಸಿ ಬಿಡುತ್ತದೆ. ಆದರೆ, ಸತ್ಯದ ಸ್ವೀಕಾರ ಅನಿವಾರ್ಯ ಕೂಡಾ.
ಅಂದಿನ ಆ ಬಾಲ್ಯದ ನನ್ನ ಮಲೆನಾಡು ಇಂದು ಸಂಪೂರ್ಣ ಬದಲಾಗಿದೆ. ಹಳ್ಳಿಗರೆಲ್ಲ ಪಟ್ಟಣದತ್ತ ದೌಡಾಯಿಸಿದ ಪರಿಣಾಮವಾಗಿ, ತುಂಬು ಹಳ್ಳಿಗಳೆಲ್ಲ ಬರಿದಾಗುತ್ತ ಹೊರಟಿವೆ. ಮೊದಲಿನ ಪ್ರಾಕೃತಿಕ ಶೈಲಿಯ ಮನೆಗಳೆಲ್ಲ ಎಂದೋ ಮರೆಯಾಗಿವೆ. ಸಿಮೆಂಟನ್ನು ಹೊದ್ದು ನಿಂತು, ತಂಪಾದ ನುಣುಪು ಕಲ್ಲುಗಳನ್ನು ಹಾಸಿಕೊಂಡು ಪಟ್ಟಣವನ್ನೂ ನಾಚಿಸುವ ಕಾಂಕ್ರೀಟ್ ಕಾಡುಗಳಾಗಿವೆ. ಬಾವಿಗಳ ಹೊಟ್ಟೆ ಬಗೆದು, ಪಂಪ್ ಅಳವಡಿಸಿ, ಎಲ್ಲೆಡೆ ಕಿವಿ ತಿರುಪಿಸಿಕೊಳ್ಳುವ ಕೊಳಾಯಿಗಳನ್ನು ನಿಲ್ಲಿಸಲಾಗಿದೆ. ಸೇದುವ ರಾಟೆಗಳೆಲ್ಲ ತುಕ್ಕು ಹಿಡಿದು ಮೂಲೆ ಸೇರಿ ಯಾವುದೋ ಕಾಲವಾಗಿದೆ. ಎಲ್ಲೆಡೆ ನೆಟ್ವರ್ಕ್ ಲಭ್ಯ. ಹಾಗಾಗಿ ಎಲ್ಲರ ಕೈಲೂ ಕೆಲಸ ಗೇಡಿ ಮೊಬೈಲ್. ಮನೆಯ ಹಿತ್ತಲಲ್ಲಿ ಹಿಡಿ ಸೊಪ್ಪು, ಮುಷ್ಟಿ ತರಕಾರಿಗಳನ್ನೂ ಬೆಳೆದು ಕೊಳ್ಳಲಾರದ ಆಲಸಿ ಹೆಣ್ಣು ಮಕ್ಕಳು ವಾರದ ಸಂತೆಗೆ ಶಿರಸಿ ಪೇಟೆಗೆ ಗಂಡನ ಜೊತೆ ಮೋಟಾರ್ ಸೈಕಲ್ಲಿನಲ್ಲೋ ಕಾರು ಗಾಡಿಯಲ್ಲೋ ಜಿಗಿದಾಡುತ್ತ ಹೊರಡುತ್ತಾರೆ. ಒಂದು ದಿನ ರುಬ್ಬಿದ ದೋಸೆ ಹಿಟ್ಟು ಮೂರು ದಿನ ಫ್ರಿಜ್‌ನಲ್ಲಿ ಇಟ್ಟು ತಿನ್ನುತ್ತ, ಇಷ್ಟಗಲ ಟಿ.ವಿಯಲ್ಲಿ ಮನೆ ಹಾಳು ಧಾರಾವಾಹಿ ನೋಡುತ್ತ ಕಾಲಕ್ಷೇಪ ಮಾಡುತ್ತಿದ್ದಾರೆ. ಸಾಲದಿದ್ದರೆ, ಆ ಮೊಬೈಲ್ ಒತ್ತಿ, “ಅತ್ತಿಗೆ ಊಟಾ ಆತನೆ? ನೆರಮನೇದು ಯಂತಾ ಸುದ್ದಿ?” ಎಂಬಿತ್ಯಾದಿ ಗಾಸಿಪ್ ಮಾಡುತ್ತ, ಕೆಲವು ಇನ್ನೂ ಸುಧಾರಿತ ಮಂದಿ ರೀಲ್‌ಗಳನ್ನು ನೋಡುತ್ತ, ಮೈ ತುಂಬ ರೋಗ ಹೊತ್ತು ಕುಳಿತಿದ್ದಾರೆ.
ಗಂಡಸರೋ ದಿನ ಬೆಳಗಾದರೆ ಗಾಡಿ ಹತ್ತಿ ಪೇಟೆ ತಿರುಗುತ್ತ, ಸಾಂಪ್ರದಾಯಿಕ ಕವಳ (ಎಲೆ ಅಡಿಕೆ) ಬಿಟ್ಟು ಪಾನ್ ಪರಾಗ್ ಜಗಿಯುತ್ತ, ಅಡಿಕೆ ಮಾರಿದ ದುಡ್ಡಲ್ಲಿ ದರ್ಬಾರು ಹಾರಿಸುತ್ತ ಮಜವಾಗಿ ಇದ್ದಾರೆ. ಬುದ್ಧಿ ಬಂದಾಗಿನಿಂದ ಒಂದು ಕಲ್ಲಿ ದರಕಾಗಲೀ, ಒಂದು ಹೊರೆ ಸೊಪ್ಪಾಗಲೀ ತಂದು ತೋಟಕ್ಕೋ ಗದ್ದೆಗೋ ಹೊತ್ತು ತಂದು ಹಾಕಲೇ ಇಲ್ಲ. ಮನೆಯ ಕಸ ಮುಸುರೆಯಿಂದ, ತೋಟ ಗದ್ದೆಯ ಕೆಲಸದ ವರೆಗೂ ಎಲ್ಲವೂ ಆಳುಗಳಿಂದಲೇ ಸಾಗಬೇಕು. ಮಕ್ಕಳೆಲ್ಲ ಸಿಟಿಯಲ್ಲಿ, ಇವರೆಲ್ಲ ಅವರ ಧ್ಯಾನದಲ್ಲಿ. ಆ ಸಿಟಿಯಲ್ಲಿ ತಿರುಗಿ ಮಜಾ ಹೊಡೆಯುವ ಗುಂಗಿನಲ್ಲಿ…

ಅದಕ್ಕೆ ಸರಿಯಾಗಿ, ನಮ್ಮ ಹಳ್ಳಿಗಳಲ್ಲಿ ಕಾಡು ಪ್ರಾಣಿಗಳ ಉಪಟಳವೂ ಅತೀ ಆಗಿದೆ. ಬೆಳೆದ ಬೆಳೆಯ ಅರ್ಧ ಕೂಡಾ ಕೈಗೆ ಸಿಗದಷ್ಟು ಚಿಂತಾ ಜನಕ ಸ್ಥಿತಿ ಅಲ್ಲಿಯದಾಗಿದೆ. ಒಂದೆಡೆ, ಆಧುನಿಕ ಕೃಷಿಯಲ್ಲಿ (ರಾಸಾಯನಿಕ ಬಳಸಿ) ಹೆಚ್ಚು ಹೆಚ್ಚು ಬೆಳೆದು, ಅತಿ ದುಡ್ಡು ಗಳಿಸುವ ಸ್ವಾರ್ಥ ಸಾಧನೆಯತ್ತ ಸಾಗುತ್ತಿರುವ ರೈತರು. ಇನ್ನೊಂದೆಡೆ, ಅವರು ಬೆಳೆದದ್ದನ್ನು ಪೂರಾ ಕೈ ವಶ ಮಾಡಿಕೊಂಡು ಅವರನ್ನೇ ಓಡಿಸಲು ಹೊಂಚುತ್ತಿರುವ ಕಾಡು ಪ್ರಾಣಿಗಳು. ಇವೆಲ್ಲದರ ನಡುವೆ, ನಮ್ಮ ಬಾಲ್ಯದ ಎಲ್ಲ ಕುರುಹುಗಳನ್ನೂ ಕಳೆದುಕೊಂಡು, ನಮ್ಮನ್ನು ತನ್ನತ್ತ ಸೆಳೆಯುವಲ್ಲಿ ಸೋತು ಅನಾಥವಾಗಿದೆ. ಈಗ ಎಲ್ಲವೂ ನೆನಪುಗಳು…. ಬರೀ ನೆನಪುಗಳು …ಅಷ್ಟೇ…
ಮುಗಿಯಿತು…

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.
