ವಾಡೆಯ ಮಂದಿಗೆ ವಿಧಿ ಕಾಡಾಟವೆಂದು ತಿಳಿದು ಅದನ್ನು ಹೋಗಲಾಡಿಸಲು ಕೈಗೊಳ್ಳುವ ಮಾಟ ಮಂತ್ರಗಳು ರಂಗಪ್ಪನ ಕೊರಳಿಗೆ ಉರುಲಾಗುತ್ತದೆ. ವಾಡೆಯ ಕಾಡಾಟಗಳನ್ನು ಓಡಿಸಲು ಬರುವ ‘ಹೂಲಗೇರಿಯ ಅಜ್ಜ’ನ ಮೇಲೆ ರಂಗಪ್ಪನಿಗೆ ನಂಬಿಕೆ ಇರಲಿಲ್ಲ. ಆದರೂ ಹೂಲಗೇರಿ ಅಜ್ಜನನ್ನು ಕರೆಯಿಸಿ ಪೂಜೆ ಮಾಡಿಸಿಯೇ ಬಿಡುತ್ತಾರೆ. ಅದರ ಅಂಗವಾಗಿ ರಂಗಪ್ಪನಿಗೆ ಒಂದು ಬಿಳಿ ಎಕ್ಕಿಗಿಡದ ಗೂಟವನ್ನು ಮಂತ್ರಿಸಿಕೊಟ್ಟು ಅದನ್ನು ಸುಡುಗಾಡಿನಲ್ಲಿ ರಾತ್ರಿ ಹೊತ್ತು ಜಡಿದು ಬರಲು ಕಳಿಸುತ್ತಾರೆ. ರಂಗಪ್ಪ ಹೋದವನು ಮರಳಿ ಬರುವುದಿಲ್ಲ. ರಂಗಪ್ಪನ ಹೆಣ ಮಾತ್ರ ಸಿಗುತ್ತದೆ. ಇಲ್ಲಿಂದ ಕುಸುಮಿ ಒಂಟಿಯಾಗುತ್ತಾಳೆ ಮಕ್ಕಳೂ ಆಗಿರುವುದಿಲ್ಲ. ಆದರೂ ಕುಸುಮಿಗೆ ವಾಡೆಯಿಂದ ಉಪಜೀವನಕ್ಕೆ ಸಿಗುತ್ತದೆ.
ಸೋಮು ರೆಡ್ಡಿ ಅವರ  ‘ಕಂದೀಲು’ ಕಾದಂಬರಿಯ ಕುರಿತು  ಡಾ.ಅಮರೇಶ ನುಗಡೋಣಿಯವರ ಲೇಖನ

 

ಸೋಮು ರೆಡ್ಡಿಯವರು ವೃತ್ತಿಯಿಂದ ಪೋಲಿಸ್ ಕೆಲಸದಲ್ಲಿದ್ದಾರೆ. ಅವರ ಹವ್ಯಾಸಗಳು ಹಲವು. ಕತೆ, ಕಾದಂಬರಿ, ನಾಟಕ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಸಾಂಸ್ಕೃತಿಕವಾಗಿ ಭಿನ್ನ ಭಿನ್ನ ವೇದಿಕೆಗಳಲ್ಲಿ ಜನೋಪಯೋಗಿ ಕೆಲಸ ಮಾಡಿಕೊಂಡಿದ್ದಾರೆ. ಉತ್ಸಾಹಿ ಯುವಕರು.

‘ಕಂದಿಲು’ ಸೋಮು ರೆಡ್ಡಿಯವರ ಕಾದಂಬರಿ ಗಮನಾರ್ಹವಾಗಿದೆ. ಜಾಗತೀಕರಣದ ಸಂದರ್ಭದಲ್ಲಿರುವ ಸಮಾಜ ; ತನ್ನ ಚಹರೆಯನ್ನು ಬದಲಿಸಿಕೊಳ್ಳುತ್ತಿದೆ. ಕಳೆದ ಮೂರು ದಶಕಗಳಿಂದಂತೂ ಸಮಾಜ ವೇಗವಾಗಿ ಬೆಳೆಯುತ್ತಿದೆ. ಹೊಸ ರೂಪವನ್ನು ಹೊತ್ತು.

(ಸೋಮು ರೆಡ್ಡಿ )

ಈ ತಲೆಮಾರಿನವರಿಗೆ ಕನ್ನಡತನ; ಕನ್ನಡತನದ ದೇಶಿಯತೆಯ ಕಲ್ಪನೆ ಇಲ್ಲದಂತಾಗಿದೆ. ಯಾವಾಗಲೂ ಸಂಸ್ಕೃತಿ ರಚನೆಗೊಳ್ಳುತ್ತಿರುತ್ತದೆಯೇ ಹೊರತು, ಸಿದ್ದರೂಪದಲ್ಲಿ ಇರುವುದಿಲ್ಲ. ಈ ಕಾದಂಬರಿಯಲ್ಲಿ ಕಂದೀಲು ಹಿಡಿಯುವ ಸ್ವರೂಪವನ್ನು ಕಟ್ಟಿಕೊಟ್ಟಿದೆ. ವಾಡೆ, ದೇಸಾಯಿ, ದೇಶಗತಿ ಆಳ್ವಿಕೆ ಇರುವ ಕಡೆ ಈ ಕಂದೀಲು ಹಿಡಿಯುವ ವೃತ್ತಿ ಇತ್ತೆಂದು ಕಾಣುತ್ತದೆ. ಉತ್ತರ ಕರ್ನಾಟಕದ ಎಲ್ಲ ಕಡೆ ಇರಲಿಲ್ಲವೆಂದು ತೋರುತ್ತದೆ. ಕಂದೀಲು ಬೆಳಕು ಹಿಡಿಯುವ ವೃತ್ತಿ ಇತ್ತೆಂದು ಕಂದೀಲು ಕಾದಂಬರಿಯಿಂದ ಮಾತ್ರ ತಿಳಿಯುತ್ತದೆ. ಬಾಗಲಕೋಟೆ, ಬಿಜಾಪೂರ, ಬೆಳಗಾವಿ ಈ ಜಿಲ್ಲೆಗಳಿಂದ ಸಾಹಿತ್ಯ ಪ್ರಕಟವಾಗಿದೆ. ಹಲವು ನೆಲೆಯ ಲೇಖಕರು ಇಲ್ಲಿಂದು ಬರೆದು ಕನ್ನಡ ಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ.

‘ನಿಸರ್ಗ’, ‘ದೀಪ ಹೊತ್ತಿತು’, ‘ಗ್ರಾಮಾಯಣ’, ‘ತೇರು’, ‘ಕೃಷ್ಣೆ ಹರಿದಳು’ ‘ಶಿಖರ ಸೂರ್ಯ’ ‘ತಾಯಿ ಸಾಹೇಬ’ ‘ಹಳ್ಳ ಬಂತು ಹಳ್ಳ’ ಮುಂತಾದ ಕಾದಂಬರಿಗಳು ಈ ಪ್ರಾಂತ್ಯದಿಂದ ಬಂದಿವೆ. ಬಸವರಾಜ ಕಟ್ಟಿಮನಿ, ಕೃಷ್ಣಮೂರ್ತಿ ಪುರಾಣಿಕ, ಆನಂದ ಕಂದ ಮುಂತಾದ ಹಿರಿಯ ಲೇಖಕರು ಇಲ್ಲಿದ್ದವರೇ. ಚರಿತ್ರೆ, ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳು ವಿಶಿಷ್ಟವಾಗಿವೆ. ಜಾಗತೀಕರಣ ಸಂದರ್ಭದಲ್ಲಿ ಈ ಅನನ್ಯತೆ ಉಳಿದುಕೊಂಡಿದೆ. ಇದನ್ನು ರಚಿಸಿಕೊಡಲು ಕವಿ, ಕಲಾವಿದ, ಸಾಹಿತಿ ಹುಟ್ಟಬೇಕು. ಹಿಂದಿನ ಬಾಳ್ವೆಯನ್ನು ಕಟ್ಟಿಕೊಡುವ ಸಾಮಾರ್ಥ್ಯ ಕತೆ ಕಾದಂಬರಿ ಪ್ರಕಾರಕ್ಕಿದೆ. ಈ ಪ್ರಕಾರದಲ್ಲಿ ಬರೆಯುವ ಯುವ ಸಾಹಿತಿಗಳು ರೂಪಗೊಂಡರು. ಹಳೆಯದೆಲ್ಲಾ ಮುನ್ನೆಲೆಗೆ ಬಂದು ಹೊಸ ರೂಪದಲ್ಲಿ ನಿಲ್ಲುತ್ತದೆ. ಕಂದೀಲು ಕಾದಂಬರಿ ಈ ದೃಷ್ಠಿಯಿಂದ ವಿಶೇಷವಾದದ್ದು ಎಂದು ಹೇಳಬಹುದು.

ಕಂದೀಲು ಕಾದಂಬರಿಯಲ್ಲಿ ಕುಸುಮಿ-ರಂಗಪ್ಪ, ಮಗ ಪ್ರಮೋದ ಇವರ ಕತೆ, ಅನಂತ ದೇಸಾಯಿಯ ವಾಡೆ ಕತೆ, ಊರವರ ಕತೆ ಈ ಮೂರು ಕತೆಗಳು ಅಂತರ್ ಸಂಬಂಧ ಹೊಂದಿವೆ. ಪ್ರಧಾನವಾಗಿ ಕುಸುಮಿಯ ಕತೆ ಎದ್ದು ಕಾಣುತ್ತದೆ. ವಾಡೆ ಪರಿಸರದಲ್ಲಿ ರಾತ್ರಿ ಕಂದೀಲು ಹಿಡಿದು ಬೆಳಕು ಮೂಡಿಸುತ್ತ ತಿರುಗಾಡುವ ರಂಗಪ್ಪನ ವೃತ್ತಿಯೇ ಕಂದೀಲು ಹಿಡಿಯುವ ಕುಲಕಸುಬು ದಲಿತರು ಈ ಕಸುಬನ್ನು ಹೊಂದಿದ್ದರೆಂಬುದು ವಿಶೇಷ. ವಾಡೆಗೆ ಬೆಳಕನ್ನು ರಾತ್ರಿಯಲ್ಲಿ ನೀಡುವುದರ ಜೊತೆಗೆ ಊರಲ್ಲಿ ಕಾರಣಕತೆಗಳಿಗೂ ಬೆಳಕನ್ನು ಹಿಡಿಯುವ ಪದ್ಧತಿಯೂ ಇತ್ತು.

ಹಿಂದಿನ ಬಾಳ್ವೆಯನ್ನು ಕಟ್ಟಿಕೊಡುವ ಸಾಮಾರ್ಥ್ಯ ಕತೆ ಕಾದಂಬರಿ ಪ್ರಕಾರಕ್ಕಿದೆ. ಈ ಪ್ರಕಾರದಲ್ಲಿ ಬರೆಯುವ ಯುವ ಸಾಹಿತಿಗಳು ರೂಪಗೊಂಡರು. ಹಳೆಯದೆಲ್ಲಾ ಮುನ್ನೆಲೆಗೆ ಬಂದು ಹೊಸ ರೂಪದಲ್ಲಿ ನಿಲ್ಲುತ್ತದೆ.

ಕಾದಂಬರಿ ಶುರುವಾಗುವುದೇ ಒಂದು ಕನಸ್ಸಿನ ಮೂಲಕ. ಕನಸ್ಸು ಕುಸುಮಿಗೆ ಬೀಳುತ್ತದೆ. ಭಯಾನಕ ಕನಸ್ಸು ಕಂಡ ಕುಸುಮಿ ಎಚ್ಚರಗೊಳ್ಳುತ್ತಾಳೆ. ಅದು ಸಾವಿನ ಬಳಿ ಹೋಗುವಂಥ ಕನಸ್ಸು. ಅದು ಕಾದಂಬರಿಯಲ್ಲಿ ಸಾಂಕೇತಿಕವಾಗಿ ನಿಲ್ಲುತ್ತದೆ. ‘ಕೆರಕಲಮಟ್ಟಿಯ ಅನಂತ ದೇಸಾಯಿಯಿಂದ ದಕ್ಕಬೇಕಾದ ಹಳ್ಳದ ಸೀಮೆಯ ಹೊಲ ಸಿಗುತ್ತದೋ ಇಲ್ಲವೋ? ಕಂದೀಲು ಹಿಡಿಯುವ ಕುಲಕಸಬು ಮುಂದುವರೆಯುವುದೋ ಇಲ್ಲವೋ? ಎದೆಯೆತ್ತರಕ್ಕೆ ಬೆಳೆದು ನಿಂತ ಮಗ ಪ್ರಮೋದನ ಬದುಕು ಭವಿಷ್ಯದಲ್ಲಾದರೂ ಉಜ್ವಲವಾಗತ್ತದೆಯೋ ಇಲ್ಲವೋ? ಆಗಾಗ ಹಾಸಿಗೆ ಹಿಡಿಯುವಂತೆ ಮಾಡುವ ರೋಗ ವಾಸಿಯಾಗುತ್ತದೆಯೋ ಇಲ್ಲವೋ?’ ಕುಸುಮಿಗೆ ಈ ಪ್ರಶ್ನೆಗಳು ಭಾದಿಸುತ್ತವೆ. ತನ್ನ ಅಂತಿಮ ಕಾಲದವರೆಗೆ ಕುಸುಮಿ ಏಕಾಂಗಿಯಾಗಿ ಹೋರಾಡುತ್ತಾ ಕನಸ್ಸನ್ನು ನಿಜಗೊಳಿಸಲು; ಸಾಕಾರ ಮಾಡಿಕೊಳ್ಳಲು ಜೀವದ ಹಂಗು ತೊರೆದು ನಿಲ್ಲುತ್ತಾಳೆ.

ಕುಸುಮಿಗೆ ಬೀಳುವ ಕನಸು ಎಚ್ಚೆತ್ತ ಮೇಲೆ ಕೇಳಿಕೊಳ್ಳುವ ಪ್ರಶ್ನೆಗಳಿಂದ ಕಾದಂಬರಿ ಸಾಗುವ ದಿಕ್ಕನ್ನು ತೋರಿಸುತ್ತದೆ. ಗಂಡ ರಂಗಪ್ಪನಿಗೆ ವಯಸ್ಸಾಗದಿದ್ದರೂ ಮದುವೆಯಾದ ಹೆಂಡತಿ ಕುಸುಮಿಗಿಂತ ಹೆಚ್ಚು ವಯಸ್ಸಾದವನು. ಈ ಕೊರಗು ಕುಸುಮಿಗಿದ್ದರೂ ಸಂಸಾರಕ್ಕೆ ತೊಂದರೆಯಾಗಲಿಲ್ಲ. ಗಂಡನಿಗಿಂತ ತನ್ನ ವಯಸ್ಸು ಚಿಕ್ಕದು ಎಂದು ಅನ್ನಿಸುವುದು ತಮಗೆ ಮಕ್ಕಳಾಗದೇ ಇರುವುದು ಕಂಡುಬಂದಾಗ. ಕುಲಕಸುಬುನಿಂದ ಬರುವ ಆದಾಯ ಅವರ ಜೀವನಕ್ಕೆ ಸರಿ ಹೋಗುತ್ತಿತ್ತು. ಸಂಸಾರ ಸರಿಯಾಗಿ ನಡೆದಿದ್ದಾಗಲೇ ವಾಡೆಯಲ್ಲಿ ಘಟಿಸುವ ಸಂದರ್ಭಗಳು ರಂಗಪ್ಪನನ್ನು ಸುತ್ತಿಕೊಳ್ಳುತ್ತವೆ. ವಾಡೆಯ ಮಂದಿಗೆ ವಿಧಿ ಕಾಡಾಟವೆಂದು ತಿಳಿದು ಅದನ್ನು ಹೋಗಲಾಡಿಸಲು ಕೈಗೊಳ್ಳುವ ಮಾಟ ಮಂತ್ರಗಳು ರಂಗಪ್ಪನ ಕೊರಳಿಗೆ ಉರುಲಾಗುತ್ತದೆ. ವಾಡೆಯ ಕಾಡಾಟಗಳನ್ನು ಓಡಿಸಲು ಬರುವ ‘ಹೂಲಗೇರಿಯ ಅಜ್ಜ’ನ ಮೇಲೆ ರಂಗಪ್ಪನಿಗೆ ನಂಬಿಕೆ ಇರಲಿಲ್ಲ. ಆದರೂ ಹೂಲಗೇರಿ ಅಜ್ಜನನ್ನು ಕರೆಯಿಸಿ ಪೂಜೆ ಮಾಡಿಸಿಯೇ ಬಿಡುತ್ತಾರೆ. ಅದರ ಅಂಗವಾಗಿ ರಂಗಪ್ಪನಿಗೆ ಒಂದು ಬಿಳಿ ಎಕ್ಕಿಗಿಡದ ಗೂಟವನ್ನು ಮಂತ್ರಿಸಿಕೊಟ್ಟು ಅದನ್ನು ಸುಡುಗಾಡಿನಲ್ಲಿ ರಾತ್ರಿ ಹೊತ್ತು ಜಡಿದು ಬರಲು ಕಳಿಸುತ್ತಾರೆ. ರಂಗಪ್ಪ ಹೋದವನು ಮರಳಿ ಬರುವುದಿಲ್ಲ. ರಂಗಪ್ಪನ ಹೆಣ ಮಾತ್ರ ಸಿಗುತ್ತದೆ. ಇಲ್ಲಿಂದ ಕುಸುಮಿ ಒಂಟಿಯಾಗುತ್ತಾಳೆ ಮಕ್ಕಳೂ ಆಗಿರುವುದಿಲ್ಲ. ಆದರೂ ಕುಸುಮಿಗೆ ವಾಡೆಯಿಂದ ಉಪಜೀವನಕ್ಕೆ ಸಿಗುತ್ತದೆ. ಆದರೆ ಅದು ಬಹಳ ದಿನ ಮುಂದುವರೆಯುವುದಿಲ್ಲ.

(ಡಾ.ಅಮರೇಶ ನುಗಡೋಣಿ)

ಕಾದಂಬರಿಯಲ್ಲಿ ಊರು, ಜನ, ಸಮಸ್ಯೆಗಳು, ತಿಕ್ಕಾಟಗಳು ನಡೆದಾಗ ಜೀವಂತ ಬರುತ್ತದೆ. ಕುಸುಮಿ ಕಂದೀಲು ಹಿಡಿದು ರಾತ್ರಿ ಹೋಗುವ ದೃಶ್ಯಗಳು, ಆಕೆಯನ್ನು ಉಪಯೋಗಿಸುವ ಗಟ್ಟಿಮಂದಿ, ಕುಸುಮಿ ಅಸಹಾಯಕಳಾದರೂ ಬದುಕುವ ಛಲ ಸಾರ್ಥಕವಾಗಿ ಮೂಡಿನಿಂತಿದೆ. ಕುಸುಮಿ ಊರುಬಿಟ್ಟು, ವೇಶ್ಯಾಜೀವನ ಸಾಗಿಸುವ ಭಾಗಗಳು ಸಾಮಾನ್ಯ ಎನ್ನಿಸುತ್ತವೆ. ಮತ್ತೆ ಕುಸುಮಿ ಊರಿಗೆ ಬಂದು ನಿಲ್ಲುತ್ತಾಳಲ್ಲ, ಅಲ್ಲಿಂದ ಕಾದಂಬರಿಗೆ ಹೊಸತನ ಬರುತ್ತದೆ. ಕಾದಂಬರಿಯಲ್ಲಿ ವಾಡೆಯ ಅನಂತ ದೇಸಾಯಿ, ಗೋಧಾವರಿ ಮತ್ತಿತರ ಬಾಳ್ವೆ ಒಳ ಕಷ್ಟಗಳು ವಾಸ್ತವಕ್ಕೆ ಹತ್ತಿರವಾಗಿವೆ. ವಾಡೆಯ ಜೀವನವನ್ನು ಈ ಕಾದಂಬರಿ ಹತ್ತಿರದಿಂದ ಚಿತ್ರಿಸಿದೆ.

ಕುಸುಮಿ ಮಗನೊಂದಿಗೆ ಊರಿಗೆ ಬಂದು ತಳವೂರುವುದೇ ತನ್ನ ನೆಲೆಯನ್ನು ಕಂಡುಕೊಳ್ಳಲು. ಕುಸುಮಿಯನ್ನು ನೋಡುವ ದೃಷ್ಠಿಕೋನ ಬದಲಾಗಿಬಿಡುತ್ತದೆ. ಕುಸುಮಿ ಕಂದೀಲು ಹಿಡಿಯುವ ಕುಲಕಸುಬನ್ನು ಗಂಡನಿಂದ ತನಗೆ ಕೇಳಿದಾಗಲೇ ಅದನ್ನು ನಿರಾಕರಿಸುವ ಹೊಂಚು ಬಯಲಿಗೆ ಬರುತ್ತದೆ. ಊರಿನ ಪುರಷರ ನಿಜ ಬಣ್ಣ ತಿಳಿಯುತ್ತದೆ. ಕುಸುಮಿ ಹೆಂಗಸು ಅದಕ್ಕಾಗಿ ಕುಲಕಸುಬ ನೀಡಲು ಬರುವುದಿಲ್ಲವೆಂದು ದೈವದವರು ನಿರಾಕರಿಸುತ್ತಾರೆ. ಕುಸುಮಿ ಇಲ್ಲಿ ಶಕ್ತಿ ಕಳೆದುಕೊಳ್ಳುತ್ತಾಳೆ. ಕುಸುಮಿ ವಾಡೆಯ ಶ್ರೀಪಾದನನ್ನು ನಂಬಿರುತ್ತಾಳೆ. ಆತ ಮೊದಲೇ ಕುಸುಮಿಯಿಂದ ವಾಗ್ಧಾನ ತೆಗೆದುಕೊಳ್ಳುತ್ತಾನೆ. ‘ನಾನು ನಾಳೆ ನಿನ್ನ ಪರವಾಗಿ ಮಾತಾಡ್ಲೀಕ್ ಆಗೂದಿಲ್ಲಾ. ಯಾಕ ಏನು ಅಂತ ಪ್ರಶ್ನೆ ಕೇಳ್ಲೀಕ್ ಹೋಗಬ್ಯಾಡ’ ಎಂದು ಕುಸುಮಿಯನ್ನು ಏಕಾಂಗಿ ಮಾಡಿಬಿಡುತ್ತಾನೆ.

ಶ್ರೀಪಾದ ಕುಸುಮಿಯಿಂದ ಸುಖ ಉಂಡವನೆ. ಹಾಗೆಯೇ ಊರ ಕೆಲ ಗಂಡಸರು ಉಂಡಿರುತ್ತಾರೆ. ಆದರೆ, ಕುಸುಮಿ ಕಂದೀಲು ಹಿಡಿಯುವ ವೃತ್ತಿಯನ್ನು ಮುಂದುವರೆಸಲು ಬಿಡುವುದಿಲ್ಲ. ಗಂಡಸರ ಕ್ರೌರ್ಯ ಕಾದಂಬರಿಯಲ್ಲಿ ದಟ್ಟವಾಗಿ ಚಿತ್ರಗೊಂಡಿದೆ. ಕುಸುಮಿಯ ಸಾವು ತಣ್ಣಗೆ ನಡೆದು ಬಿಡುತ್ತದೆ. ಕಾದಂಬರಿಯ ಅಂತ್ಯ ನಿಶಬ್ಧವಾಗಿ ಚಿತ್ರಿತವಾಗಿದೆ.

ಸೋಮು ರೆಡ್ಡಿಯವರ ಅವರ ನಿರೂಪಣೆ ಮನದಲ್ಲಿ ನೆಲೆಗೊಳ್ಳುತ್ತದೆ. ಈ ಬಗೆಯ ವಸ್ತು ಎಪ್ಪತ್ತರಿಂದ ಎಂಬತ್ತರ ದಶಕದ ನಡುವೆ ಚಾಲ್ತಿಗೆ ಬಂದಿತು. ಆ ಕಾಲದಲ್ಲಿ ಈ ಕಾದಂಬರಿ ಬಂದಿದ್ದರೆ ಚರ್ಚೆಯಾಗುತ್ತಿತ್ತು. ಶೋಧಿಸಲಾದ ಕಥಾವಸ್ತು ಎಂದು ಉದಾಸೀನ ಮಾಡುವ ಕೆಲಸವಾಗಬಹುದು. ಆದರೆ ಇಂತಹವೂ ಮುನ್ನೆಲೆಗೆ ಬರುವ ಸಂದರ್ಭಗಳು ಉಂಟಾಗುತ್ತವೆ.