Advertisement
ಕೆಟಿಎಸ್‌-ತೇಜಸ್ವಿ ಸ್ನೇಹಕ್ಕೆ ಕಾರಣರಾದವರು ಪ್ರೊಫೆಸರ್ ನಂಜುಂಡಸ್ವಾಮಿ

ಕೆಟಿಎಸ್‌-ತೇಜಸ್ವಿ ಸ್ನೇಹಕ್ಕೆ ಕಾರಣರಾದವರು ಪ್ರೊಫೆಸರ್ ನಂಜುಂಡಸ್ವಾಮಿ

ತೇಜಸ್ವಿ ಜತೆ ಮಾತನಾಡುವುದೇ ಒಂದು ನವೀನ ಅನುಭವ.  ಮತ್ತು ತನಗೆ ಗೊತ್ತಿಲ್ಲದ ಒಂದು ವಿಚಾರ ನೋಡಿದರೆ ಅಥವಾ ಗಮನಿಸಿದರೆ ಅವರು ಪಡುತ್ತಿದ್ದ ಅಚ್ಚರಿ, ಅಗಾಧತೆಯನ್ನು ವರ್ಣಿಸಲು ಸಾಧ್ಯವಿಲ್ಲ. ಪ್ರತಿಯೊಂದು ಹೊಸ ವಿಚಾರವನ್ನು ಕಾತರ, ಕುತೂಹಲದಿಂದ ನೋಡುವ ಅವರ ಕೌತುಕವೇ ಅವರನ್ನು ದೊಡ್ಡ ಮನುಷ್ಯನನ್ನಾಗಿಸಿತು.  ಹೊಸತನ್ನು ಕಂಡಿದ್ದೇ ‘ಏ ನೋಡೋ ಶಿವ ಹೇಗಿದೆ!’ ಎಂದು ಅಚ್ಚರಿಯಿಂದ ನೋಡುವ ಆ ನೋಟವನ್ನು ನೆನಪಿಸಿಕೊಂಡರೇ ಅವರ ಜೀವನ ಪ್ರೀತಿಯ ಬಗ್ಗೆ ಕೌತುಕ ಹುಟ್ಟಿಸುತ್ತದೆ.
ಕೆ.
ಟಿ. ಶಿವಪ್ರಸಾದ್  ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

ಅದೂ ಕೂಡ ಅನಿರೀಕ್ಷಿತ. ಅದಕ್ಕೂ ಒಂದು ಹಿನ್ನೆಲೆಯಿದೆ. ಕೆ.ಟಿ. ಶಿವಪ್ರಸಾದ್ ಬಾಂಬೆಯ ಜೆ.ಜೆ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಚಿತ್ರಕತೆ ಕಲಿತು ಹಾಸನಕ್ಕೆ ವಾಪಾಸಾಗಿದ್ದರು. ಅವರ ತಂದೆ ಕೆ.ಟಿ. ಕಾರ್ಲೆ ಹಾಸನದಿಂದ ಸಮೀಪ ಇರುವ ಹೂವಿನಹಳ್ಳಿ ಕಾವಲು ಸಮೀಪದ ಕುಪ್ಪಳಿ ಎಂಬ ಗ್ರಾಮದಲ್ಲಿ ಒಂದಷ್ಟು ಜಮೀನು ಖರೀದಿಸಿದ್ದರು.

ಹಾಗೆ ಬಂದ ಕೆ.ಟಿ.ಗೆ ಏನಾದರೂ ಹೊಸತನ್ನು ಮಾಡಬೇಕು ಎಂಬ ಅದಮ್ಯ ಉತ್ಸಾಹ.  ತಂದೆ ಎಷ್ಟೇ ದೊಡ್ಡ ಶ್ರೀಮಂತರಾಗಿದ್ದರೂ ನೂರಾರು ಎಕರೆ ಜಮೀನು ಇದ್ದರೂ ಸ್ವತಂತ್ರವಾಗಿ ಒಂದು ಕಡೆ ತೊಡಗಿಸಿಕೊಳ್ಳಬೇಕು, ಕಾಡಿನ ಮಧ್ಯೆ ಪೇಯಿಂಟಿಂಗ್ ಮಾಡಬೇಕು ಎಂಬ ಆಸೆ. ತಂದೆಗೆ ಕೂಡ ಮಗ ಎಲ್ಲಿ ಹಾಳಾಗುತ್ತಾನೋ ಎಂಬ ಭಯ. ಇವನನ್ನು ಹೇಗಾದರೂ ಕಟ್ಟಿ ಹಾಕಬೇಕಲ್ಲ ಎಂದು ಯೋಚಿಸುತ್ತಿದ್ದರು. ಕೊನೆಗೆ ಒಂದು ದಿನ ಕರೆದು ಕುಪ್ಪಳಿಯ ಫಾರ್ಮ್ ನೋಡಿಕೋ ಎಂದು ಹೇಳಿದರು. ಕೆಟಿಗೂ ಅದೇ ಬೇಕಿತ್ತು.

ಒಂಟಿಯಾಗಿದ್ದುಕೊಂಡು ನಿಸರ್ಗದ ಮಧ್ಯೆ ಒಂದಷ್ಟು ಒಳ್ಳೆಯ ಚಿತ್ರ ಬರೆಯಬಹುದು. ಎಲ್ಲಕ್ಕೂ ಮಿಗಿಲಾಗಿ ಕಾಡಿನಲ್ಲಿ, ಏಕಾಂತದಲ್ಲಿ  ಪೇಯಿಂಟಿಂಗ್ ಮಾಡಬೇಕು ಎಂಬುದು ಅವರ ಬಹುದಿನದ ಆಸೆ. ಫಾರ್ಮಿಗೆ ಸೇರಿಕೊಂಡರು, ಜತೆಗೆ ಕೃಷಿ ಮಾಡಲು ಶುರು ಮಾಡಿದರು.

ಆಗ ಕೆ.ಟಿ. ಅವರಲ್ಲಿ ಬೈಕ್ ಇರಲಿಲ್ಲ. ಕುಪ್ಪಳಿಯಿಂದ ಹಾಸನಕ್ಕೆ ಬರಬೇಕು ಎಂದರೆ ಎಂಟು ಕಿ. ಮೀ ಆಗುತ್ತಿತ್ತು. ಬಸ್ಸು ಅಥವಾ ಯಾವುದಾದರೂ ಟೆಂಪೋ ಹಿಡಿದುಕೊಂಡು ಬರಬೇಕಿತ್ತು.  ಕೆ.ಟಿ. ಬಾಂಬೆಯಿಂದ ಬಂದಿದ್ದರು. ದಪ್ಪ ಗಡ್ಡ, ಹೆಗಲಿಗೆ ತಾಗುವಂತೆ ಉದ್ದನೆ ಜುಟ್ಟು (ಜಡೆ ಕಟ್ಟಿಕೊಂಡಿದ್ದರು) ಈ ಭಾಗದ ಜನರೆಲ್ಲ ಇವರ ಹಾವಭಾವ, ವೇಷಭೂಷಣ ನೋಡಿ ವಿಚಿತ್ರವಾಗಿ ನೋಡುತ್ತಿದ್ದರು.

ಹೀಗೆ ಒಂದು ದಿನ ಹಾಸನಕ್ಕೆ ಬರಬೇಕಿತ್ತು. ಬೇಲೂರು ರಸ್ತೆಗೆ ಬಂದು ಯಾವುದಾದರೂ ವಾಹನ ಸಿಕ್ಕಬಹುದು ಎಂದು ಕಾಯುತ್ತ ನಿಂತರು.  ಬರುವ ವಾಹನಗಳಿಗೆ ಕೈ ಒಡ್ಡುತ್ತಿದ್ದರು.  ಒಂದರ್ಧ ಗಂಟೆ ಯಾವುದೇ ವಾಹನ ಸಿಕ್ಕಿರಲಿಲ್ಲ. ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ ಒಂದು ತೆರೆದ ಮಿಲಿಟರಿ ಜೀಪು ಬಂತು.  ಸಹಜವಾಗಿ ಕೈ ಒಡ್ಡಿದರು. ಸ್ವಲ್ಪ ದೂರ ಹೋದ ಜೀಪು ಮತ್ತೆ ರಿವರ್ಸ್ ಬಂತು.

ಅಲ್ಲಿ ತೆಳ್ಳನೆಯ ವ್ಯಕ್ತಿ ಒಬ್ಬರು ಕುಳಿತಿದ್ದರು. ಜೀಪಿಗೂ ಅವರಿಗೂ ಹೊಂದಾಣಿಕೆ ಬಾರದ ರೀತಿ ಇತ್ತು. ಬಂದವರೇ… ‘ಯು ವಾಂಟ್ ಡ್ರಾಪ್ʼ ಎಂದು ಪ್ರಶ್ನಿಸಿದರು..?

ಕೆ.ಟಿ. ಗೆ ಅಚ್ಚರಿ.

ನಂತರ ಇಬ್ಬರ ಸಂಭಾಷಣೆ ಇಂಗ್ಲೀಷಿನಲ್ಲೇ ನಡೆಯಿತು.

ನಂತರ ಜೀಪಿನಲ್ಲಿ ಹತ್ತಿಸಿಕೊಂಡರು.

ಹೀಗೆ  ಮಾತನಾಡುತ್ತಾ ‘ನಾನು ನಂಜುಂಡ ಸ್ವಾಮಿ ಅಂಥಾ..ʼ ಎಂದರು.

ಏನು ಮಾಡುತ್ತಿದ್ದೀರೀ..?  ನನ್ನ ಜುಟ್ಟು, ವೇಷಭೂಷಣ ನೋಡಿ ಅಚ್ಚರಿಯಾಗಿರಬೇಕು. ಕುತೂಹಲದಿಂದ ಕೇಳಿದರು.

ನನ್ನ ಬಗ್ಗೆ ಹೇಳಿದೆ.

‘ನಿಮಗೆ ಹಾಸನದಲ್ಲಿ ಮಂಜುನಾಥ ದತ್ತಾ, ವೆಂಕಟೇಶಮೂರ್ತಿ ಗೊತ್ತಾ..?’

ಹೌದು ಗೊತ್ತೆಂದು ತಲೆಯಾಡಿಸಿದರು.

ಅಷ್ಟರಲ್ಲಾಗಲೇ ನನಗೆ ರೈತ ಸಂಘದ ನಂಟು ಬೆಳೆದಿತ್ತು. ಆವತ್ತು ಹಾಸನದ ಹರ್ಷ ಮಹಲ್ ಹೋಟೆಲ್‌ನಲ್ಲಿ ರೈತ ಸಂಘದ ಸಭೆ ಕರೆಯಲಾಗಿತ್ತು. ಅಲ್ಲಿಗೆ ಹೋದ ನಂತರ ಎಲ್ಲರೂ ಮಾತನಾಡಿದೆವು.  ಮಂಜುನಾಥ ದತ್ತರಿಗೆ  ನಾನು ನಂಜುಂಡ ಸ್ವಾಮಿ ಜತೆ ಬಂದಿದ್ದು ನೋಡಿ ಅಚ್ಚರಿ ಆಯಿತು. ಹಾಗೆ ನನ್ನ ಬಗ್ಗೆ ಪ್ರೊಫೆಸರ್ ಗೆ ಹೇಳಿದರು.

ಆವತ್ತು ಅವರು ಬಂದಿದ್ದ ಜೀಪು ತೇಜಸ್ವಿಯದ್ದಾಗಿತ್ತು. ಆಗ ಪ್ರೊಫೆಸರ್ ತೇಜಸ್ವಿ ಸೇರಿ ‘ರೆಡ್ ಬುಕ್’ ಲೋಹಿಯಾ ಚಿಂತನೆಗಳನ್ನೊಳಗೊಂಡ ಸಮಾಜವಾದಿ ಮೂಮೆಂಟ್‌ನ ಪುಸ್ತಕ ಬರೆಯುತ್ತಿದ್ದರು. ಹಾಗಾಗಿ ಅವರು ಆ ಕಡೆ ನಿರಂತರವಾಗಿ ಬರುತ್ತಿದ್ದರು.

ಅದಾಗಿ ಹದಿನೈದು ದಿನ ಆಗಿರಬಹುದು. ನಾನು ಫಾರ್ಮ್ನಲ್ಲಿ ಒಂದು ದಿನ  ಕೆಲಸ ಮಾಡುತ್ತಿದ್ದೆ.

ಅನಾಮಧೇಯ ವ್ಯಕ್ತಿ ನನ್ನನ್ನು ಕೇಳಿಕೊಂಡು ಬಂದರು.

“ಶಿವಪ್ರಸಾದ್ ಅಂದ್ರೆ ನೀವೇನಾ..?” ಎಂದರು…

ಹೌದೆಂದು ತಲೆ ಆಡಿಸಿದೆ.

“ನಾನು ತೇಜಸ್ವಿ ಅಂಥಾ…” ಎಂದು ಪರಿಚಯ ಮಾಡಿಕೊಂಡರು.

ನಂಜುಂಡ ಸ್ವಾಮಿ ನನ್ನ ಬಗ್ಗೆ ತೇಜಸ್ವಿಗೆ ಹೇಳಿದ್ದರು. ಇಂಥಹ ಜಾಗದಲ್ಲಿ ಅವರು ಸಿಗುತ್ತಾರೆ ಹೋಗಿ ಮಾತನಾಡಿಸಿ ಎಂದು ಹೇಳಿದ್ದರಂತೆ. ಆವತ್ತು ತೇಜಸ್ವಿಯ ಪರಿಚಯವಾಗಿದ್ದು. ಬಹುಶಃ ನಂಜುಂಡಸ್ವಾಮಿ ಅವರಿಗೆ ನನ್ನನ್ನು ಪರಿಚಯಿಸದೆ ಇದ್ದರೆ ಅವರ ಪರಿಚಯ ಆಗುತ್ತಿರಲಿಲ್ಲವೇನೋ..!

ಆವತ್ತು ತುಂಬಾ ಹೊತ್ತು ಮಾತನಾಡಿದೆವು.  ನಮ್ಮ ಎಸ್ಟೇಟಿಗೆ ಒಮ್ಮೆ ಬನ್ನಿ ಎಂದು ಕರೆದರು. ಅದಾದ ನಂತರ ತೇಜಸ್ವಿ ಮೈಸೂರಿಗೆ ಹೋಗುವಾಗಲೆಲ್ಲ ನಮ್ಮ ಫಾರ್ಮ್ಗೆ ವಿಸಿಟ್ ಮಾಡಿಯೇ ಹೋಗುತಿದ್ದರು. ಕೆಲವೊಮ್ಮೆ ಅವರ ಪತ್ನಿ ಮಕ್ಕಳೊಂದಿಗೆ ಬರುತ್ತಿದ್ದರು.  ಕೆಲವು ಸಲ ನನ್ನನ್ನೂ ಮೈಸೂರಿಗೆ ಕರೆದುಕೊಂಡು ಹೋಗುತ್ತಿದ್ದರು. ನಾನು ಫ್ರೊಫೆಸರ್, ತೇಜಸ್ವಿ ಸಾಕಷ್ಟು ಬಾರಿ ಇಲ್ಲೇ ಸೇರಿಕೊಂಡು ಸಾಕಷ್ಟು ವಿಷಯಗಳ ಬಗ್ಗೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆವು. ಮಂಜುನಾಥ ದತ್ತ ಕೂಡ ಸೇರಿಕೊಳ್ಳುತ್ತಿದ್ದರು.

ಆಗ ಅವರು ಇನ್ನೂ ಮೂಡಿಗೆರೆಯಲ್ಲಿ ತೋಟ ಮಾಡಿರಲಿಲ್ಲ. ಚಿತ್ರ ಕೂಟದಲ್ಲಿ ೬೦ ಎಕರೆ ತೋಟ ಇತ್ತು ೩೦ ಎಕರೆ ತೋಟದಲ್ಲಿ ಕೃಷಿ ಮಾಡುತ್ತಿದ್ದರು.  ಹಕ್ಕಿಗಳ ಬ್ಲಾಕ್ ಅಂಡ ವೈಟ್ ಫೋಟೋ ತೆಗೆಯಲು ಪ್ರಾಂಭಿಸಿದ್ದರು. ನಾನು ಪೇಯಿಂಟಿಂಗ್ ಅನ್ನು ಗಂಭೀರವಾಗಿ ತೆಗೆದುಕೊಂಡಿದ್ದೆ. ನನ್ನ ಪೇಯಿಂಟಿಂಗ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಆಗ ಅವರು ಕರ್ವಾಲೋ ಬರೆಯುತ್ತಿದ್ದರು.

ಒಂದು ದಿನ ಇದ್ದಕ್ಕಿದತೆ ಬಂದು, ‘ಶಿವ, ನಿಗೂಢ ಮನುಷ್ಯರು’ ಕೃತಿಗೆ  ಕವರ್ ಪೇಜ್ ಮಾಡಿಕೊಡೋ ಎಂದರು.

ನಾನೆಂದೂ ಕವರ್ ಪೇಜ್ ಮಾಡಿಲ್ಲದ್ದರಿಂದ ‘ಏ ನಾನು ಮಾಡೊಲ್ಲ’  ಎಂದೆ.

ಆದರೆ ತೇಜಸ್ವಿ ಬಿಡುವ ಹಾಗೆ ಕಾಣಲಿಲ್ಲ. ಏನಾದರೂ ಮಾಡಲೇಬೇಕು ಎಂದು ತೀರ್ಮಾನಿಸಿದೆವು.

ಆಗ ತೇಜಸ್ವಿ ತೆಗೆದಿದ್ದ ಮರಿ ಹಕ್ಕಿಗಳು ಬಾಯಿ ಬಿಡುತ್ತಿರುವ ಚಿತ್ರವನ್ನು ಗ್ರಾಫಿಕ್ಕಿಗೆ ಮಾಡಿಕೊಟ್ಟೆ. ಅಲ್ಲಿಂದ ಶುರುವಾಗಿದ್ದು ನಾನು ಅವನ ಪುಸ್ತಕಗಳಿಗೆ ಕೆಲಸ ಮಾಡಲು.

ಹೀಗೆ ಒಂದು ದಿನ ಯಾವುದೋ ಚರ್ಚೆಯಲ್ಲಿ ತೊಡಗಿದ್ದಾಗ ‘ನೀನ್ಯಾಕೆ ಫೋಟೋಗ್ರಫಿ ಮಾಡಬಾರದು..?ʼ ಎಂದು ಪ್ರಶ್ನಿಸಿದರು..?

ಪೇಯಿಂಟಿಂಗ್ ಬಗ್ಗೆ ತಲೆ ಕೆಡಿಸಿಕೊಂಡಿದ್ದ ನಾನು ‘ನನಗೆ ಅದು ಒಗ್ಗದ ಕೆಲಸ’ ಎಂದೆ.

“ಇಲ್ಲ ಪೇಯಿಂಟಿಂಗ್ ಮಾಡುತ್ತಿಯಲ್ಲ ಅದರ ಹಾಗೆಯೇ..? ನೀನ್ಯಾಕೆ ಟ್ರೈ ಮಾಡಬಾರದು” ಎಂದರು.

ಆ ಸಂದರ್ಭ ನನ್ನಲ್ಲಿ ಹೆಚ್ಚು ಹಣ ಕೂಡ ಇರಲಿಲ್ಲವಾದ್ದರಿಂದ ನನ್ನ ಹತ್ತಿರ ಕ್ಯಾಮೆರಾ ಇಲ್ಲ. ಪ್ರಿಂಟ್ ಹಾಕ್ಸೊದು ಇವೆಲ್ಲ ಕಷ್ಟ ಬೇಡ ಎಂದೆ.

ಆದರೆ ತೇಜಸ್ವಿ ಬಿಡಲಿಲ್ಲ.

‘ನೋಡು ನೀನು ಫೋಟೋಗ್ರಫಿ ಮಾಡಲೇಬೇಕು. ನನ್ನದೇ ಒಂದು ಹಳೇ ಕ್ಯಾಮೆರಾ ಇದೆ ತೆಗೆದುಕೋ’ ಎಂದು ಕೊಟ್ಟರು.

ಅಷ್ಟರಲ್ಲಾಗಲೇ ನಾನು ನನ್ನ ಜಮೀನಿನಲ್ಲಿ ದೊಡ್ಡ ಕ್ಯಾನ್ವಾಸ್ ಹಾಕಿಕೊಂಡು ಪೇಯಿಂಟಿಂಗ್ ಮಾಡುತ್ತಿದ್ದೆ. ಜಮೀನಿಗೆ ಬರುವ  ಕೂಲಿಕಾರರು, ಮಹಿಳೆಯರು, ಪರಿಸರ, ಹಕ್ಕಿಗಳು, ಬಡವರ ಪೇಯಿಂಟಿಂಗ್ ಮಾಡುತ್ತಿದ್ದೆ. ಇದು ತೇಜಸ್ವಿಗೆ ನಾನೂ ಫೋಟೋಗ್ರಫಿ ಮಾಡಬಲ್ಲೆ ಎಂದೆನಿಸಿತ್ತು. ಹಾಗೆ ತೇಜಸ್ವಿ ನನಗೂ ಫೋಟೋಗ್ರಫಿ ಹುಚ್ಚು ಹಿಡಿಸಿದರು.

ವಿಶೇಷ ಎಂದರೆ ನನ್ನಲ್ಲಿ ಹೈಸ್ಕೂಲ್‌ನಲ್ಲೇ ಕ್ಯಾಮೆರಾ ಇತ್ತು. ಕೊನೆಗೆ ತೇಜಸ್ವಿ ಕ್ಯಾಮೆರಾ ಬಗ್ಗೆ ಡೆವಲಪ್, ಹೀಗೆ ಸಂಬಂಧಿಸಿದ ವಿಚಾರಗಳನ್ನು ಹೇಳಿಕೊಟ್ಟರು. ಮುಂದೆ ನಾನು ನನ್ನದೇ ಡಾರ್ಕ್ ರೂಂ ಮಾಡಿಕೊಂಡ ಕ್ಯಾಮೆರಾ ಬಗ್ಗೆ  ಹಾಗೂ ಸಂಬಂಧಿಸಿದ ವಿವರಗಳನ್ನೆಲ್ಲ ಕಲಿತುಕೊಂಡೆ. ನನ್ನ ಜಮೀನಿನಲ್ಲೇ ಡಾರ್ಕ್ ರೂಂ ಮಾಡಿಕೊಂಡಿದ್ದೆ. ತೇಜಸ್ವಿ ಬಂದಾಗ ಇಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದೆವು.

ತೇಜಸ್ವಿ ಹಕ್ಕಿ ಫೋಟೋಗ್ರಫಿ ಮಾಡುತ್ತಿದ್ದು ನಿಜಕ್ಕೂ ಕುತೂಹಲಕಾರಿಯಾಗಿದೆ.

ನಾನು ಕಂಡಂತೆ ತೇಜಸ್ವಿ ಮೊದಲು ಹಕ್ಕಿ ಗೂಡು ಹುಡುಕುತಿದ್ದರು. ನಂತರ ಅವು ಮರಿ ಹಾಕಿ, ಬೆಳೆಯುವವರೆಗೆ  ಅಬ್ಸರ್ವೇಷನ್. ಅದಕ್ಕಾಗಿ ಒಂದು ಹಸಿರು ಬಾಕ್ಸ್ ತಯಾರಿಸಿ ಅದರಲ್ಲಿ ಒಂದು ಕ್ಯಾಮೆರಾ ಲೆನ್ಸ್‌ಗೆ ಹಾಗೂ ಮನುಷ್ಯರು ನೋಡಲು ಒಂದು (ರಂಧ್ರ) ತೂತ ಕೊರೆಯಲಾಗುತ್ತಿತ್ತು. ಹತ್ತಿರ ಹತ್ತಿ ಹೋಗಿ ತಿಂಗಳುಗಟ್ಟಲೆ ಕಾದು ಫೋಟೋಗ್ರಫಿ ಮಾಡುತ್ತಿದ್ದರು.  ಸ್ವಲ್ಪ ಸ್ವಲ್ಪವೇ  ಅವುಗಳ ಹತ್ತಿರ ಹೋಗುತ್ತಿದ್ದರು. ಅದನ್ನು ತಪಸ್ಸಿನಂತೆ ಮಾಡುತ್ತಿದ್ದರು.

ತೇಜಸ್ವಿ ಜತೆ ಮಾತನಾಡುವುದೇ ಒಂದು ನವೀನ ಅನುಭವ.  ಮತ್ತು ತನಗೆ ಗೊತ್ತಿಲ್ಲದ ಒಂದು ವಿಚಾರ ನೋಡಿದರೆ ಅಥವಾ ಗಮನಿಸಿದರೆ ಅವರು ಪಡುತ್ತಿದ್ದ ಅಚ್ಚರಿ, ಅಗಾಧತೆಯನ್ನು ವರ್ಣಿಸಲು ಸಾಧ್ಯವಿಲ್ಲ. ಪ್ರತಿಯೊಂದು ಹೊಸ ವಿಚಾರವನ್ನು ಕಾತರ, ಕುತೂಹಲದಿಂದ ನೋಡುವ ಅವರ ಕೌತುಕವೇ ಅವರನ್ನು ದೊಡ್ಡ ಮನುಷ್ಯನನ್ನಾಗಿಸಿತು.  ಹೊಸತನ್ನು ಕಂಡಿದ್ದೇ ‘ಏ ನೋಡೋ ಶಿವ ಹೇಗಿದೆ!’ ಎಂದು ಅಚ್ಚರಿಯಿಂದ ನೋಡುವ ಆ ನೋಟವನ್ನು ನೆನಪಿಸಿಕೊಂಡರೇ ಅವರ ಜೀವನ ಪ್ರೀತಿಯ ಬಗ್ಗೆ ಕೌತುಕ ಹುಟ್ಟಿಸುತ್ತದೆ.

ಒಂದು ಜಿಗಣೆ ತೆಗೆದುಕೊಂಡರೂ ಅದು ರಕ್ತ ಹೀರಲು ಬರುವ ಆ ವೇಗ, ಕಾತರ ಇದನ್ನು ನೋಡುವ ತೇಜಸ್ವಿ ದೃಷ್ಠಿಕೋನ, ಕಾತರ ನಿಜಕ್ಕೂ ಅಬ್ಬಾ ಎನಿಸುತ್ತದೆ, ಅವರ ಪ್ರಕೃತಿ ಪ್ರೀತಿಗೆ.

ಕೆ.ಟಿ. ತಮ್ಮ ಮಾತು ಮುಂದುವರಿಸಿದರು….

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ