Advertisement
ಊರ ಹೆಸರು “ಸೀತಾಪುರ”: ಕೆ. ಸತ್ಯನಾರಾಯಣ ಕಥಾ ಸರಣಿ

ಊರ ಹೆಸರು “ಸೀತಾಪುರ”: ಕೆ. ಸತ್ಯನಾರಾಯಣ ಕಥಾ ಸರಣಿ

ದ್ವೇಷಕ್ಕೋ, ಜಿದ್ದಿಗೋ, ಶೇಕದಾರ್‌ ನಮ್ಮ ಪುರಾತನ ಗ್ರಾಮವಾದ ಗೊಬ್ಬಳಿಪುರದ ಬಗ್ಗೆ ಅಪಪ್ರಚಾರ ಶುರುಮಾಡಿದ. ಪುರದ ಹೆಣ್ಣುಮಕ್ಕಳೆಲ್ಲ ಸೀತಾದೇವಿ ತರ, ತೀರಾ ಅಯೋಧ್ಯೆಗೇ ಮದುವೆ ಮಾಡಿಕೊಟ್ಟಿದ್ದರೂ ಹುಡುಗೀರ ಕೆಟ್ಟ ಜಾತಕದಿಂದಾಗಿ ಯಾವ ಮದುವೇನೂ ನಾಲ್ಕು ದಿನ ಕೂಡ ನಿಲ್ಲೋಲ್ಲ. ನಿಂತರೂ ರಾಮನಿಗೆ ಆದ ಹಾಗೆ ಇವರನ್ನು ಕೊಟ್ಟ ಮನೆಯಲ್ಲೂ ಏಳಿಗೆ ಕಂಡು ಬರೋಲ್ಲ. ಸಂಸಾರದೊಳಗೆ ಇದ್ದರೂ ಗೊಬ್ಬಳಿ ಮುಳ್ಳಿನ ತರಹ ಆಳವಾಗಿ ಊರಿ ಹಿಂಸೆ ಮಾಡ್ತಾರೆ. ಮುಳ್ಳು ತೆಗೆಯೋಕೂ ಕಷ್ಟ. ತೆಗೆದರೂ ಗಾಯ ಹಾಗೇ ಉಳಿದಿರುತ್ತೆ. ಇದು ಗೊಬ್ಬಳಿಪುರ ಅಲ್ಲ ಸೀತಾಪುರ ಅಂತ ರೆಕಾರ್ಡ್‌ ಮಾಡಿಸಿಬಿಟ್ಟ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”  

ನಾಗೇಂದ್ರ ಕುಮಾರ್‌ “ನಮ್ಮ ಊರಿಗೆ ಬನ್ನಿ ಬನ್ನಿ” ಅಂತ ಮತ್ತೆ, ಮತ್ತೆ ಅಹ್ವಾನಿಸುತ್ತಲೇ ಇದ್ದರು. ಇನ್ನೊಬ್ಬರ ಮನೆಗೆ, ಊರಿಗೆ ಹೋಗುವುದೆಂದರೆ ನನಗೆ ಹಿಂಜರಿಕೆ, ಹೆದರಿಕೆ. ಸುಮ್ಮನೆ ಬಾಯಿ ಮಾತಿಗೆ ಕರೆಯುತ್ತಾರೆ, ಹಾಗೆ ಕರೆದದ್ದನ್ನು ನೆಚ್ಚಿಕೊಂಡು ನಾನೇನಾದರೂ ಹೋಗುವ ತಪ್ಪು ಮಾಡಿದರೆ, ಅವರ ಊರು, ಮನೆ ತಲುಪಿದ ಮೊದಲ ಕ್ಷಣದಿಂದಲೇ ಮುಜುಗರ, ಹಿಂಸೆ ಶುರುವಾಗುತ್ತದೆ, ಮತ್ತೆ ವಾಪಸ್‌ ಹೊರಡುವ ಆತಂಕ, ತಳಮಳ ಶುರುವಾಗುತ್ತದೆ, ಹಾಗಾಗಿ ತಂಟೆಯೇ ಬೇಡ ಎಂದು “ಆಯ್ತು, ಬರ್ತೀನಿ, ಬರ್ತೀನಿ” ಎಂದು ಸಬೂಬು ಹೇಳಿ ನಾನು ಜಾಣತನ ಪ್ರದರ್ಶಿಸುತ್ತೇನೆ.

ನಾಗೇಂದ್ರ ಕುಮಾರ್‌ ವಿಷಯದಲ್ಲಿ ಹಾಗಾಗಲಿಲ್ಲ. ಚೆನ್ನಾಗಿ ಆದರ ಮಾಡಿದರು. ಕುಮಾರ್‌ ಮನೆಯಲ್ಲಿ ಮಾತ್ರವಲ್ಲ, ನೆರೆಹೊರೆಯವರು, ನೆಂಟರಿಷ್ಟರೆಲ್ಲ ಆತ್ಮೀಯರಾದರು. ಗ್ರಾಮದಲ್ಲಿರುವವರನ್ನೆಲ್ಲ ಪರಿಚಯ ಮಾಡಿಕೊಟ್ಟರು. ತೋಪಿಗೆ ಕರೆದುಕೊಂಡು ಹೋಗಿ ಎಳನೀರು ಕುಡಿಸಿದರು. ಊರಿಗೆ ವಾಪಸ್‌ ಹೊರಟಾಗ ಚೀಲ ತುಂಬುವಷ್ಟು ನಿಂಬೆ ಹಣ್ಣು, ಹೇರಳೆ ಕಾಯಿ, ಸಬ್ಬಸ್ಗೆ ಸೊಪ್ಪು, ಬೇಲದ ಹಣ್ಣು, ಅಂತೆಲ್ಲ ಉಡುಗೊರೆ ಕೊಟ್ಟರು.

ಸೀತಾಪುರ ಬಯಲು ಸೀಮೆಯ ಗ್ರಾಮ. ಪುರಾತನವಾದದ್ದು. ಉತ್ತರ-ದಕ್ಷಿಣ ಎರಡು ಹೆಬ್ಬಾಗಿಲಿನಲ್ಲೂ ಶಿಥಿಲ ಕೋಟೆ. ಇಡೀ ಗ್ರಾಮ ಚೌಕಾಕಾರದಲ್ಲಿತ್ತು. ಹಳೆ ಕಾಲದ ಓಣಿಗಳನ್ನು ಉಳಿಸಿಕೊಂಡಿದ್ದರು. ಎಲ್ಲವೂ ಹಳೇ ಮನೆಗಳು. ಎಲ್ಲ ಮನೆಗಳಿಗೂ ಒಂದೇ ಒಂದು ದೊಡ್ಡ ಬಾಗಿಲು. ವಿಶಾಲವಾದ ಬೀದಿ. ಎಲ್ಲ ಮನೆಗಳ ಮುಂದೂ ಜಗುಲಿ, ಮೆಟ್ಟಿಲು, ಹಿಂದುಗಡೆ ಹೂವು, ದಾಳಿಂಬೆ, ಮಲ್ಲಿಗೆ, ಪಾರಿಜಾತ, ಸ್ಫಟಿಕದ ಗಿಡಗಳು, ಬಾಳೆಮರ. ಮನೆ ಮುಂದೆ ಕಟ್ಟಿರುವ ಜಾನುವಾರು. ನಾಲೆ ನೀರಿನ ಸೌಕರ್ಯ ಕೂಡ ಚೆನ್ನಾಗಿತ್ತು. ಊರ ಮುಂದೆ ದೊಡ್ಡ ಕೆರೆ. ಎರಡು ಮೂರು ವರ್ಷಕ್ಕೊಮ್ಮೆ ಕೋಡಿ ಬೀಳುತ್ತಿತ್ತಂತೆ. ಎಲ್ಲೆಲ್ಲೂ ಹಸಿರುವಾಣಿ. ಊರವರು ತರಕಾರಿ ಕೊಳ್ಳುತ್ತಲೇ ಇರಲಿಲ್ಲವಂತೆ. ಬದಲಿಗೆ, ಜಿಲ್ಲಾ, ತಾಲೂಕ್‌ ಕೇಂದ್ರಗಳಿಗೆ ತಗೊಂಡು ಹೋಗಿ ಮಾರಾಟ ಮಾಡುತ್ತಿದ್ದರಂತೆ. ರಾತ್ರಿ ಹೊತ್ತು ಬಯಲು ನಾಟಕದ ಪ್ರಾಕ್ಟೀಸ್‌. ಮಧ್ಯ ರಾತ್ರಿ ಎಚ್ಚವಾದಾಗಲೆಲ್ಲ ರಂಗ ಗೀತೆಗಳು, ಸಂಭಾಷಣೆ ಎಲ್ಲವೂ ಇಂಪಾಗಿ, ಸ್ಪಷ್ಟವಾಗಿ ಕೇಳೋದು. ಹಾರ್ಮೋನಿಯಂ ವಾದನ ಕೇಳಿ ಯುಗವಾಗಿ ಹೋಗಿತ್ತು.

ಊರು ನನಗೆ ತುಂಬಾ ಇಷ್ಟವಾಯಿತು. ಆ ಕಾರಣಕ್ಕೋ ಏನೋ ನಾಗೇಂದ್ರ ಕುಮಾರ್‌ ಬಳಕೆ ಕೂಡ ಹೆಚ್ಚಾಯಿತು. ನಾಟಕ, ಸಿನೆಮಾ, ಕ್ರಿಕೆಟ್‌ ಪಂದ್ಯಗಳಿಗೆಲ್ಲ ಒಟ್ಟಿಗೇ ಹೋಗಲು ಶುರು ಮಾಡಿದೆವು. Piles ಗೆ ನನಗೆ ಶಸ್ತ್ರ ಚಿಕಿತ್ಸೆಯಾದಾಗ ನರ್ಸಿಂಗ್‌ ಹೋಂಗೆ ಬಂದು ನಾಗೇಂದ್ರ ಕುಮಾರ್‌ ದಂಪತಿಗಳು ನನ್ನನ್ನು ತುಂಬಾ ಮುತುವರ್ಜಿಯಿಂದ ನೋಡಿಕೊಂಡರು. ಬೆಂಗಳೂರಿನ ವಾಯುಮಾಲಿನ್ಯ, ಜನಸಂದಣಿ, trafffic jam ಇದರಿಂದೆಲ್ಲ ತಪ್ಪಿಸಿಕೊಳ್ಳಲು ನಾನು ಆಗಾಗ್ಗೆ ಚಾರಣ ಪ್ರವಾಸಕ್ಕೆ ಹೋಗುತ್ತಿದ್ದೆ. ನಾಗೇಂದ್ರ ಕುಮಾರ್‌ ಪರಿಚಯವಾದ ಮೇಲೆ ನಿಲ್ಲಿಸಿಬಿಟ್ಟೆ. ನಾಗೇಂದ್ರ ಕುಮಾರ್‌, ನಿಮ್ಮ ಊರಿಗೆ ಕರೆದುಕೊಂಡು ಹೋಗಿ, ಕರೆದುಕೊಂಡು ಹೋಗಿ ಎಂದು ಮತ್ತೆ ಮತ್ತೆ ಕೇಳಲು ಪ್ರಾರಂಭಿಸಿದೆ.

ಹಾಗೆ ಕೆಲವು ಸಲ ಹೋಗಿ ಬಂದಮೇಲೆ, ಯಾವ ಉದ್ದೇಶ, ದುರುದ್ದೇಶವೂ ಇಲ್ಲದೆ, ನಿಮ್ಮೂರಿಗೆ ಸೀತಾಪುರ ಅಂತ ಏಕೆ ಹೆಸರು ಬಂತು? ರಾಮ-ಸೀತೆ ಏನಾದರೂ ವನವಾಸದ ಸಮಯದಲ್ಲಿ ಇಲ್ಲಿಗೆ ಬಂದಿದ್ದರಾ? ಸೀತೆ ನಿಮ್ಮೂರ ಕೆರೆಯಲ್ಲಿ ಸ್ನಾನ ಮಾಡಿದ್ದಳಾ? ಎಂದು ಕೇಳಿದರೆ, ಇಲ್ಲ, ಇಲ್ಲ, ಹಾಗೇನಿಲ್ಲ ಅಂತ ಸ್ವಲ್ಪ ಸಿಡುಕಾಗಿಯೇ ಪ್ರಶ್ನೆಯನ್ನು ತಳ್ಳಿಹಾಕಿಬಿಟ್ಟರು. ಮತ್ತೊಮ್ಮೆ ಕೇಳಿದಾಗಲೂ ಹಾಗೇ ಮಾಡಿದರು. ನನಗೆ ಕುತೂಹಲ ಹೆಚ್ಚಾಗಿ, ಮತ್ತೆ ಕೇಳಿದಾಗ, ಮುಖ ಕಪ್ಪಗಾಯಿತು, ಸಪ್ಪಗಾಯಿತು, ಕಣ್ಣುಗಳು ಚಿಕ್ಕದಾದವು. ಮುಖ ಆ ಕಡೆ ತಿರುಗಿಸಿಕೊಂಡರು. ನನ್ನ ಕಡೆ ದೈನ್ಯ ದೃಷ್ಟಿ ಬೀರಿದರು. ಆಮೇಲಾಮೇಲೆ ಮನೆ ಕಡೆ ಬರುವುದನ್ನೇ ನಿಲ್ಲಿಸಿಬಿಟ್ಟರು.

ಕುಮಾರ್‌ ಏಕೆ ಹೀಗೆ ಮಾಡಿದರು ಎಂದು ನಾನು ಹೇಗೇ ಯೋಚನೆ ಮಾಡಿದರೂ, ನನಗೆ ಉತ್ತರ ಹೊಳಿಯಲಿಲ್ಲ. ಕಾರಣ ಗೊತ್ತಾಗದೇ, ಕಾರಣ ಹೇಳದೇ, ಮುನಿಸಿಕೊಂಡು ಹೋಗಲು ಬಿಡಬಾರದು ಎಂದು ನಾನೇ ಮತ್ತೆ ಮತ್ತೆ ಪೀಡಿಸಿ, ಮನೆಗೆ ಕರೆದುಕೊಂಡು ಬಂದಿದ್ದರಿಂದ, ಮುಂದಿನದನ್ನು ಹೇಳಿದರು.

*****

ನೀವು ಏಕೆ ಈ ಪ್ರಶ್ನೆಯನ್ನು ಕೇಳುತ್ತಿದ್ದೀರಿ, ಮತ್ತೆ ಮತ್ತೆ ಕೇಳುತ್ತಿದ್ದೀರಿ? ನಿಮಗೆ ಬೇರೆ ಯಾರ ಕಡೆಯಿಂದಲಾದರೂ ಏನಾದರೂ ಮಾಹಿತಿ ಸಿಕ್ಕು, ನಮ್ಮ ಮನಸ್ಸಿಗೆ ನೋವುಂಟುಮಾಡಬೇಕೆಂದು ಹೀಗೆಲ್ಲ ಮಾಡುತ್ತಿದ್ದೀರಾ? ಎಂದು ತೀಕ್ಷ್ಣವಾಗಿ ನನ್ನನ್ನೇ ದಿಟ್ಟಿಸಿ ನೋಡುತ್ತಾ ಕೇಳಿದರು, ಎದುರಗಡೆ ಇಟ್ಟಿದ್ದ ಲೋಟದಲ್ಲಿದ್ದ ಕಾಫಿ ಲೋಟದ ಕಡೆ ಕೂಡ ಗಮನ ಕೊಡದೆ.

ಬನ್ನಿ ಇದು ಮನೆಯೊಳಗೆ ಮಾತನಾಡುವ ವಿಷಯವಲ್ಲ. ಆದರೆ ನಾನು ಹೇಳಿದ್ದನ್ನು ನೀವು ನಿಮ್ಮ ಮನೆಯವರ ಹತ್ತಿರ ಮಾತ್ರವಲ್ಲ, ಬೇರೆ ಯಾವ ಹೆಂಗಸಿನ ಬಳಿ ಕೂಡ ಹೇಳಬಾರದು. ಹಾಗಂತ ಮಾತು ಕೊಟ್ಟರೆ ಹೇಳ್ತೀನಿ ಎಂದು ಸಿಲ್ವರ್‌ ಜ್ಯೂಬಿಲಿ ಪಾರ್ಕಿಗೆ ಕರೆದುಕೊಂಡು ಹೋಗಿ, ಹಿಪ್ಪೆ ಮರದ ಕೆಳಗಿರುವ ಕಟ್ಟೆಯ ಮೇಲೆ ಕೂರಿಸಿಕೊಂಡು ಬೇರೆ ಯಾರಿಗೂ ಕೇಳಿಸಬಾರದು ಎನ್ನುವ ರೀತಿಯಲ್ಲಿ, ಪಿಸುದನಿಯಲ್ಲಿ ತಡೆದೂ, ತಡೆದೂ ಮಾತಾಡಿದರು.

*****

ಮೂಲದಲ್ಲಿ ನಮ್ಮೂರಿನ ಹೆಸರು ಗೊಬ್ಬಳಿಪುರ ಎಂದು. ಸುತ್ತಲ ಹತ್ತು ಹಳ್ಳಿಗಳಿಗೂ ಮನೆ ಕಟ್ಟಲು ಬೇಕಾಗುವಷ್ಟು, ಸಾಕಾಗುವಷ್ಟು ಮರ ಮುಟ್ಟು ನಮ್ಮೂರ ಗೊಬ್ಬಳಿ ಮರಗಳಿಂದಲೇ ಹೋಗುತ್ತಿದ್ದವು. ಹೀಗಾಗಿ ನಮ್ಮೂರಿಗೆ ಗೊಬ್ಬಳಿಪುರ ಎಂದು ಹೆಸರು ಬಂತು. ನಮ್ಮೂರಿಗೂ ರಾಮಾಯಣಕ್ಕೂ, ರಾಮ ಸೀತೆಗೂ ಯಾವ ಸಂಬಂಧವೂ ಇಲ್ಲ. ಕುನೇಕದ ಒಬ್ಬ ಶೇಕ್‌ದಾರ್‌ ಮಾಡಿದ ದರಿದ್ರ ಕೆಲಸ ಇದು.

ಶೇಕದಾರ್‌ಗೆ ಏಳೆಂಟು ಗ್ರಾಮಗಳು ಹದ್ದಬಸ್ತಿನಲ್ಲಿದ್ದರೂ ಅವನ ಹೆಚ್ಚಿನ ವ್ಯವಹಾರವೆಲ್ಲ ನಮ್ಮೂರಿನಲ್ಲೇ! ಕೆರೆ ಬಯಲಲ್ಲಿ ಜಮೀನು, ಪ್ರತಿ ಮನೆಯವರಿಗೂ ನಾಲ್ಕಾರು ಎಕರೆ ಹೊಲ, ಲೇವಾದೇವಿ ವ್ಯವಹಾರ, ಇವೆಲ್ಲ ತುಂಬಿದ್ದ ನಮ್ಮ ಗ್ರಾಮದ ಮೇಲೆ ಸದಾ ಕಣ್ಣಿಡದೆ, ಆದಾಯದ ಹಸು ಹಿಂಡದೆ ಶೇಕದಾರ್‌ ಇನ್ನೇನು ಮಾಡಬೇಕು?

ತನ್ನ ಮೂರು ಗಂಡು ಮಕ್ಕಳಿಗೂ ನಮ್ಮೂರಿನಿಂದಲೇ ಮದುವೆ ಮಾಡಿಕೊಂಡ. ಅದೂ ಒಂದೇ ಮನೆಯ ಅಕ್ಕ-ತಂಗಿಯರು. ಆಸ್ತಿ ಮೇಲೆ ಕಣ್ಣಿಟ್ಟುಕೊಂಡೇ ಒಂದೇ ಮನೆ ಹೆಣ್ಣುಮಕ್ಕಳನ್ನು ಮದುವೆ ಮಾಡಿಸಿಕೊಂಡ ಎಂದು ಈಗ ಎಲ್ಲ ಹೇಳ್ತಾರೆ. ಮೂರು ಹೆಣ್ಣು ಮಕ್ಕಳೂ ಬಾಳಲಿಲ್ಲ, ಬಾಳಗೊಡಲಿಲ್ಲ. ಎಲ್ಲ ವಾಪಸ್‌ ಬಂದು ಮನೆ ಸೇರಿಕೊಂಡವು. ಬಂಜೆಯಾದದ್ದಕ್ಕೆ, ಇಲ್ಲ ಅಡುಗೆ ಸರಿಯಾಗಿ ಮಾಡೋಕೆ ಬರದೆ, ಹಾಸಿಗೆ ಪಥ್ಯದಲ್ಲಿ ತಡಬಡಾಯಿಸಿದ್ದಕ್ಕೆ, ಹೀಗೆ ಒಂದಲ್ಲ ಒಂದು ಸಬೂಬು ಹೇಳಿ ನಮ್ಮೂರಿಗೆ ವಾಪಸ್‌ ಅಟ್ಟಿಬಿಟ್ಟ. ಅದೆಷ್ಟೋ ಸಲ ಪಂಚಾಯಿತಿ ಮಾಡಿ ವಾಪಸ್‌ ಕಳಿಸಿದರು ಒಪ್ಪಲಿಲ್ಲ. ಒಬ್ಬಳು ದೊಡ್ಡ ಕಟ್ಟೆ ಮಧ್ಯಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಳು. ಇನ್ನೊಬ್ಬಳು ಕೆರೆ ಎದುರಿಗಿರುವ ಹೊಂಗೆ ಮರಕ್ಕೆ ನೇಣು ಹಾಕಿಕೊಂಡಳು. ಕೊನೆಯವಳು ಫ್ಯಾಕ್ಟರಿ ಕಾಲೋನಿ ಸೇರಿ ವೇಶ್ಯೆಯಾದಳು. ಇಷ್ಟೆಲ್ಲದರ ಮಧ್ಯೆಯೂ ಶೇಕ್‌ದಾರ್‌ ಏನೇನೋ ಕರಾಮತ್ತು ಮಾಡಿ ಬೀಗರ ಆಸ್ತಿಯ ಬಹುಪಾಲನ್ನು ತನ್ನ ಕಡೆಗೆ ರಿಜಿಸ್ಟರ್‌ ಮಾಡಿಸಿಕೊಂಡುಬಿಟ್ಟ. ಬೀಗರು ಕ್ಷಯದಿಂದ ಪರಂಧಾಮ ಸೇರಿದ್ದು ಕೂಡ ಶೇಕ್‌ದಾರ್‌ ಪರವಾಗಿಯೇ ಕೆಲಸ ಮಾಡಿತು.

ಆವಾಗಿನಿಂದ ಶುರುವಾಯ್ತು ನೋಡಿ ನಮ್ಮೂರಿಗೆ ದೊಡ್ಡ ಗ್ರಹಚಾರ. ಯಾವುದೇ ಮನೆಯ ಹೆಣ್ಣು ಮಕ್ಕಳನ್ನು ಯಾವುದೇ ಊರಿನ ಎಷ್ಟೇ ದೊಡ್ಡ ಮನೆತನಕ್ಕೆ ಕೊಟ್ಟರೂ ಅಷ್ಟೇ, ಒಂದು ನಾಲ್ಕು ತಿಂಗಳಲ್ಲಿ ವಾಪಸ್‌ ಬಂದುಬಿಡೋರು. ಕೆಲವರಿಗೆ ಕೈ ಕಾಲು ಊನ ಆಗಿರೋದು. ಇನ್ನು ಕೆಲವರ ಚರ್ಮ ಸುಟ್ಟು ಕರಕಲಾಗಿರೋದು. ಕೆಲವರು ಮಾತನಾಡುವುದನ್ನೇ ಮರೆತುಬಿಟ್ಟಿರುತ್ತಿದ್ದರು. ವರದಕ್ಷಿಣೆ ಸರಿಯಾಗಿ ಕೊಟ್ಟಿಲ್ಲ, ನಿಮ್ಮೂರು ಹೆಣ್ಣು ಮಕ್ಕಳು ತಿಂಗಳು ತಿಂಗಳೂ ಮುಟ್ಟಾಗ್ತವೆ, ಲಗ್ನ ಆದ ಮೇಲೆ ಸರಿಯಾಗಿ ಚಿನ್ನ ಬೆಳ್ಳಿ ಕೊಟ್ಟಿಲ್ಲ, ಮದುವೇಲಿ ಹಾಕಿರೋ ಚಿನ್ನ ಕೂಡ ಸರಿಯಾದದ್ದಲ್ಲ ಎಂದು ದಿನಾ ಒಂದಲ್ಲ ಒಂದು ಮನೆಯವರು ನ್ಯಾಯಕ್ಕೆ, ಪಂಚಾಯತಿಗೆ ಕೂಡಿಸೋರು. ಒಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ತವರು ಮನೆ ಗ್ಯಾರಂಟಿ. ಇದೆಲ್ಲ ಶೇಕದಾರ್‌ ಕಿತಾಪತಿ ಅಂತ ಊರಲ್ಲೆಲ್ಲ ಹಬ್ಬಿತು. ಈಗ ಅವನಿಗೆ ಸಂತೆಮಾರನಹಳ್ಳಿ ಕಡೆಗೆ ವರ್ಗವಾಯಿತು.

ಇಷ್ಟೆಲ್ಲ ರಾಮಾಯಣ ದಿನಾ ನಡೀತಾ ಇದ್ದರೆ ನಮ್ಮೂರಿನ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಲು ಯಾರು ಮುಂದೆ ಬರ‍್ತಾರೆ? ಕೆರೆ ಬಯಲ ಕೆಳಗೆ ಎಂಟು ಹತ್ತು ಎಕರೆ ಗದ್ದೆ ಇರುವ ಸಾಹುಕಾರ್‌ ರಾಮಲಿಂಗಪ್ಪನವರ ಹೆಣ್ಣು ಮಕ್ಕಳಿಗೇ ಗಂಡು ಕುದುರಲಿಲ್ಲ ಅಂದರೆ ನೀವೇ ಲೆಕ್ಕ ಹಾಕಿಕೊಳ್ಳಿ.

ದ್ವೇಷಕ್ಕೋ, ಜಿದ್ದಿಗೋ, ಶೇಕದಾರ್‌ ನಮ್ಮ ಪುರಾತನ ಗ್ರಾಮವಾದ ಗೊಬ್ಬಳಿಪುರದ ಬಗ್ಗೆ ಅಪಪ್ರಚಾರ ಶುರುಮಾಡಿದ. ಪುರದ ಹೆಣ್ಣುಮಕ್ಕಳೆಲ್ಲ ಸೀತಾದೇವಿ ತರ, ತೀರಾ ಅಯೋಧ್ಯೆಗೇ ಮದುವೆ ಮಾಡಿಕೊಟ್ಟಿದ್ದರೂ ಹುಡುಗೀರ ಕೆಟ್ಟ ಜಾತಕದಿಂದಾಗಿ ಯಾವ ಮದುವೇನೂ ನಾಲ್ಕು ದಿನ ಕೂಡ ನಿಲ್ಲೋಲ್ಲ. ನಿಂತರೂ ರಾಮನಿಗೆ ಆದ ಹಾಗೆ ಇವರನ್ನು ಕೊಟ್ಟ ಮನೆಯಲ್ಲೂ ಏಳಿಗೆ ಕಂಡು ಬರೋಲ್ಲ. ಸಂಸಾರದೊಳಗೆ ಇದ್ದರೂ ಗೊಬ್ಬಳಿ ಮುಳ್ಳಿನ ತರಹ ಆಳವಾಗಿ ಊರಿ ಹಿಂಸೆ ಮಾಡ್ತಾರೆ. ಮುಳ್ಳು ತೆಗೆಯೋಕೂ ಕಷ್ಟ. ತೆಗೆದರೂ ಗಾಯ ಹಾಗೇ ಉಳಿದಿರುತ್ತೆ. ಇದು ಗೊಬ್ಬಳಿಪುರ ಅಲ್ಲ ಸೀತಾಪುರ ಅಂತ ರೆಕಾರ್ಡ್‌ ಮಾಡಿಸಿಬಿಟ್ಟ. ಈಗ ಅದೇ ದಾಖಲೆಯಾಗಿ, ಊರಿನ ಮುಂದಿರುವ ಬಸ್‌ ಸ್ಟಾಪಿನಲ್ಲಿ ಗೌರ್ನ್‌ಮೆಂಟ್‌ನೋರು ಹಾಗೇ ಬೋರ್ಡ್‌ ಬರೆಸಿದ್ದಾರೆ.

ಇಷ್ಟೆಲ್ಲ ಆದ ಮೇಲೆ, ನಮ್ಮೂರ ಹೆಣ್ಣು ಮಕ್ಕಳಿಗೆ ಮದುವೆ ಆಗೋದು ಕಷ್ಟವಾಯಿತು. ಆಮೇಲೆ ನಾವೇ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡೆವು. ಇನ್ನು ಮೇಲೆ ನಮಗೆ ಹೆಣ್ಣುಮಕ್ಕಳಾಗೋದೇ ಬೇಡ ಅಂತಾ. ಈಗ ನಮ್ಮ ಗೊಬ್ಬಳಿಪುರವೆಲ್ಲ ಗಂಡು ಪಾಳ್ಯವೇ. ಇಷ್ಟರ ಮೇಲೂ ಹೆಣ್ಣಾಗಿಬಿಟ್ಟರೆ, ಊರಿನ ಶಾಪ ತಟ್ಟದಿರಲಿ ಅಂತ ನಾವೇ ಬೇರೆ ಊರಿಗೆ ಬಂದುಬಿಡುತ್ತೇವೆ. ವತ್ಸಲಾ ಹುಟ್ಟಿದ ಮೇಲೆ ನಾವು ಹೆಚ್ಚಾಗಿ ಸೀತಾಪುರಕ್ಕೆ ಹೋಗೋಲ್ಲ. ಹೋದರೂ ವತ್ಸಲಾಳನ್ನು ಕರೆದುಕೊಂಡು ಮಾತ್ರ ಹೋಗೋಲ್ಲ.

ಈಗ ನಮಗೆಲ್ಲ ಒಂದೇ ಭಯ, ನಮ್ಮೂರ ಗಂಡು ಮಕ್ಕಳ ಬಗ್ಗೇನೂ ಹೀಗೇ ಅಪಪ್ರಚಾರ ಶುರುವಾಗಿಬಿಟ್ಟು ಅವರಿಗೂ ಹೆಣ್ಣು ಸಿಗದೆ ಹೋದರೆ? ವತ್ಸಲಾ ಅಲ್ಲದೆ ನನಗೂ ಎರಡು ಗಂಡು ಮಕ್ಕಳಿದ್ದಾರೆ. ವತ್ಸಲಾಳಿಗಿಂತ ತುಂಬಾ ಚಿಕ್ಕೋರು.

ಕೈ ಮುಗಿದು ಕೇಳ್ಕೋತೀನಿ, ಯಾರಿಗೂ ಇದನ್ನೆಲ್ಲ ಹೇಳಬೇಡಿ. ಮನೆ ಹೆಂಗಸರ ಹತ್ತಿರವಂತೂ ಹೇಳಲೇ ಬೇಡಿ.

*****

              ನಾಗೇಂದ್ರ ಕುಮಾರ್‌ ಹೇಳಿದ ಸೀತಾಪುರದ ಕಥೆ ಕೇಳಿ ನನಗೆ ತುಂಬಾ ಬೇಸರವಾಯ್ತು. ಅವರಿಗೆ ತುಂಬಾ ಗೌರವ ಕೊಡ್ತಿದ್ದೆ. ಸ್ನೇಹಭಾವ ತೋರುತ್ತಿದ್ದೆ. ಆದರೂ ನಾಗೇಂದ್ರ ಕುಮಾರ್‌ಗೆ ನನ್ನ ಮೇಲೆ ಅನುಮಾನ ಇದ್ದೇ ಇದೆ. ಯಾರಿಗಾದರೂ ಅವರ ಊರಿನ ಕಥೆ ಹೇಳಿಬಿಡಬಹುದು ಅಂತ.

*****

ಉಪಸಂಹಾರ: ಕತೆಗೆ ಮುಕ್ತಾಯವಿರಲೇಬೇಕು ಅನ್ನುವುದು ಈಚಿನವರ ನಿಯಮ. ನಿಯಮಕ್ಕೆ ಹೆದರಿ ನಾವು ಕೂಡ ಹಾಗೇ ಬರೀತೀವಿ. ಕತೆಗೆ ಮುಕ್ತಾಯವಿರುವುದಿಲ್ಲ. ಮುಂದೊಂದು ದಿನ ಉಪಸಂಹಾರದ ರೂಪದಲ್ಲಿ ಬೆಳೆಯುತ್ತೆ. ಭವಭೂತಿಗೆ ಕಾಯುತ್ತೆ.

*****

              ವತ್ಸಲಾ ದೊಡ್ಡವಳಾದಳು. ನಾಗೇಂದ್ರ ಕುಮಾರ್‌ ಅವಳಿಗೆ ಗಂಡು ಗೊತ್ತಾಗಿ, ವರದಕ್ಷಿಣೆ ಬಾಬ್ತು ಆಖೈರಾಗಿ, ಎಲ್ಲವೂ ಗ್ಯಾರಂಟಿ ಆದ ಮೇಲೆ ನಮಗೆ ಹೇಳಿದರು. ಇಷ್ಟು ಆಪ್ತರಾಗಿದ್ದರೂ ನಮ್ಮಿಂದ ಇಂತಹ ಒಂದು ಆತ್ಮೀಯ ಸಂಗತಿಯನ್ನು ಮುಚ್ಚಿಟ್ಟಿದ್ದರು – “ಎಂತಹ ಸ್ನೇಹ ಇದು?”

ಇದೆಲ್ಲ ನನ್ನ ಅನುಮಾನ ಮಾತ್ರ. ನಾಗೇಂದ್ರ ಕುಮಾರ್‌ ದಂಪತಿಗಳು ಬಂದು, ಈಗ ನಮ್ಮ ಕಡೆ ಹೆಣ್ಣುಮಕ್ಕಳ ಮದುವೆ ನಿಗದಿಯಾದ ಮೇಲೆ ಮಂಗಳಾಪುರಕ್ಕೆ ಹೋಗಿ ಹರಕೆ ತೀರಿಸಿಕೊಂಡು ಬರ‍್ತೀವಿ, ನೀವೂ ಬನ್ನಿ, ಸೀತಾಪುರದಿಂದ ಎರಡೇ ಮೈಲಿ ದೂರ ಅಷ್ಟೇ ಎಂದು ಆಹ್ವಾನಿಸಿದರು.

ಯಾವ ದೇವರಿಗೆ ಅಂತ ಕೇಳಿದೆ? ಇಲ್ಲ ದೇವರಿಗಲ್ಲ, ಜವರಾಯಿ ಗೌಡರ ಮನೆತನ ಅಂತ ದೊಡ್ಡ ಜಮೀನ್ದಾರರ ಮನೆತನವಿದೆ. ಮೂರೂ ಗಂಡುಮಕ್ಕಳೂ ಜಾಣ ಮಕ್ಕಳು. ಚೆನ್ನಾಗಿ ಓದಿದರು. ಡಾಕ್ಟರ್‌, ಎಂಜಿನಿಯರ್‌, ಅಮಲ್ದಾರ್‌ ಎಲ್ಲ ಆದರೂ. ಆದರೆ ಅದೇಕೋ ಮೂರು ಗಂಡು ಮಕ್ಕಳಿಗೂ ಡೈವೋರ್ಸ್‌ ಆಯ್ತು. ಎಷ್ಟೇ ಪ್ರಯತ್ನ ಪಟ್ಟರೂ ಮರು ಮದುವೆ ಆಗಲಿಲ್ಲ. ಮಂಗಳಪುರ ಅಂತ ಹೊಸ ಕಾಲದವರು ಹೇಳೋದು. ಅದು ಮಂಗಲ ಮಾತ್ರ. ಈಗ ಒಂದು ರೂಢಿ ನಮ್ಮ ಸೀಮೆಯಲ್ಲಿ ಚಾಲ್ತಿಗೆ ಬಂದಿದೆ. ಯಾರದೇ ಮನೆಯಲ್ಲಿ ಮದುವೆ ನಿಗದಿಯಾದರೂ ಮಂಗಲಪುರಕ್ಕೆ ಹೋಗಿ, ಜವರಾಯಿಗೌಡರ ಮನೆಗೆ ಹೂವು-ಹಣ್ಣು ಕೊಟ್ಟು, ಆಶೀರ್ವಾದ ತಗೊಂಡೇ ಬರ‍್ತೀವಿ. ಜವರಾಯಗೌಡರಿಗೆ ತುಂಬಾ ವರ್ಷಗಳ ಸಕ್ಕರೆ ಖಾಯಿಲೆಯಿಂದಾಗಿ, ಕಣ್ಣು ಪೂರ್ತಿ ಮಂಜಾಗಿದೆ. ಗೌಡರ ಹೆಂಡತಿ ಸೊಂಟವೇ ಬಿದ್ದು ಹೋಗಿದೆ. ಆದರೇನು? ತುಂಬಾ ದೊಡ್ಡ ಮನೆತನವಲ್ಲವೇ? ಒಂದು ಕಾಲಕ್ಕೆ. ಹರಕೆಗೆ ಹೋದವರಿಗೆಲ್ಲ, ಸೀರೆ-ರವಿಕೆ, ಪಂಚೆ-ಶಲ್ಯ, ಹೂವು-ಹಣ್ಣು, ಹಣದ ಪ್ಯಾಕೆಟ್‌ ಕೊಟ್ಟು, ಒಳ್ಳೆಯ ಮನಸ್ಸಿನಿಂದ ಆಶೀರ್ವಾದ ಮಾಡ್ತಾರೆ. ನಮ್ಮ ಮಕ್ಕಳಿಗೆ ಆದ ಹಾಗೆ ನಿಮ್ಮ ಮಕ್ಕಳಿಗೂ ಆಗದಿರಲಿ ಅಂತಾ. ಏನೇ ಹೇಳಿ, ನಮ್ಮ ಮನೇಲೇ ಕಷ್ಟ-ಕಾರ್ಪಣ್ಯ ತುಂಬಿರುವಾಗ, ಇನ್ನೊಬ್ಬರ ಮನೆ ಮಕ್ಕಳು ಚೆನ್ನಾಗಿರಲಿ ಅಂತ ಮನಸಾರೆ ಹೇಳೋಕೂ ಒಂದು ದೊಡ್ಡ ಮನಸ್ಸು ಬೇಕಲ್ಲವೇ?

(ಹಿಂದಿನ ಕತೆ: ವಾರಾನ್ನದ ಅರೆ ಆತ್ಮಚರಿತ್ರೆ)

About The Author

ಕೆ. ಸತ್ಯನಾರಾಯಣ

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ