ಊರವರು, ಸಂಬಂಧಿಗಳು ಎಲ್ಲರೂ ಮೇಕಿಯ ಮೇಲೆ ಮನೆಗೆ ಬಂದು ಹೋದರು. ಬಿಳಿಯ ಗಂಡಸನ್ನು ಮದುವೆಯಾದ ಜ್ಯೋತ್ಸ್ನಾಳ ಅದೃಷ್ಟವನ್ನು ನೋಡಬೇಕಿತ್ತಲ್ಲ! ಹೊತ್ತಿಗೊಂದು ಕತೆಕಟ್ಟಿದರು. ಕೆಲವು ಸಂಭಾಷಣೆಗಳ ಹರಿವನ್ನು ನೋಡಿಯೇ ನೀಲ್ ಏನಾಗಿರಬಹುದೆಂದು ಊಹಿಸುತ್ತಿದ್ದ. ‘ಯುವರ್ ಹೋಮ್‌ಲ್ಯಾಂಡ್ ಇಸ್ ನಾಟ್ ಲೈಕ್ ವಾಟ್ ಐ ಥಾಟ್ ಜೋಹ್. ನೌ, ಐ ನೋ ವ್ಹೇರ್ ಯುವರ್ ಇಂಟರ್‌ಪ್ರಿಟೇಶನ್ಸ್ ಕಮ್ ಫ್ರಂ’ ಎಂದು ಎಳೆಗರುವಿನಂತೆ ಮುಖ ಮಾಡಿದಾಗ ಅವಳು ಇನ್ನಷ್ಟು ಮೋಹಕ್ಕೆ ಬಿದ್ದಳು.
ಪೂರ್ಣಿಮಾ ಭಟ್ಟ ಸಣ್ಣಕೇರಿ ಕಥಾ ಸಂಕಲನ “ರಸಮಲಾಯಿ”ಯ ಕತೆ “ಮಾಯ್ಕಾರ ಕಿಟಕಿ” ನಿಮ್ಮ ಓದಿಗೆ
‘ಅನ್ಯಮನಸ್ಕತೆಯೂ ಒನ್ನಮೂನೆ ಅಮಲು ಅಲಾ!’ ಎಂದು ಅಚ್ಚಕನ್ನಡದಲ್ಲಿ ಜೋರಾಗಿಯೇ ಹೇಳಿ ಒಮ್ಮೆ ಮೈಮುರಿದಳು ಜ್ಯೋತ್ಸ್ನಾ. ಜ್ಯೋತ್ಸ್ನಾ ‘ಜೋ’ ಆಗಿ ಬದಲಾಗಿ ಸುಮಾರು ವರ್ಷಗಳೇ ಕಳೆದಿವೆ. ಅವಳು ಕೂತು ಬಿಸಿ ಮಾಡಿದ್ದ ಜಾಗವನ್ನು ಬಿಟ್ಟು ಮತ್ತೆಲ್ಲ ಕಡೆಯೂ ಪ್ಯಾಟಿಯೋ ತಣ್ಣಗೆ ಕೊರೆಯುತ್ತಿದೆ. ಗಾರ್ಡನ್ನಿನ ಶೆಡ್ ಮೇಲೆ ಹಿಮದಂಥದ್ದೇ ತೆಳ್ಳನೆಯ ಪರದೆ. ಅವಳಿಗೆ ಮೈಮೇಲೆ ಜಂಪರೊಂದು ಬೇಕೆನಿಸುತ್ತಿದೆ.
ಜ್ಯೋತ್ಸ್ನಾ ಮತ್ತೆ ಮದುವೆ ಹಾಡಿನ ಗುಂಗಿನಲ್ಲಿ ಮಗ್ನಳು.
ನಿನ್ನ ಮೊರೆ ಹೊಕ್ಕ ಜನರ ಮನ್ನಿಸಿ ಪಾಲನೆ ಮಾಡು I
ಅನ್ಯಾಯ ಮಾರ್ಗವ ಬಿಡು I ಧರ್ಮದಲ್ಲಿ ಮನಸಿಡು I
ಸಂಪನ್ನs ರಾಜ್ಯವನಾಳು II
ಮಂಗಳ ಕಾರ್ಯವೆಲ್ಲ ಸಂಪನ್ನವಾದ ಮೇಲೆ ಮದುಮಗನನ್ನು ಹರಸಿದ ಹಾಡು ಇದು. ಇವತ್ತು ಬೆಳಗೆದ್ದಾಗಿನಿಂದ ಇದೇ ಕತೆ ಅವಳದ್ದು. ಒಂದರನಂತರ ಇನ್ನೊಂದು ಹಾಡಿನ ಸಲ್ಲುಗಳು ತಲೆಯಲ್ಲಿ ಗುಂಯ್ಯೆನ್ನುತ್ತಿವೆ. ಅಲೆದಾಡುವ ಮನಸು. ಕೆಲವೊಮ್ಮೆ ಅನ್ಯಮನಸ್ಕತೆಯೂ ಒಂದು ನಮೂನೆಯ ಅಮಲು ಅಂದುಕೊಂಡಳು ಮತ್ತೊಮ್ಮೆ.
ಮೂರುದಿನದ ಹಿಂದೆ ಊರಲ್ಲಿ ಜ್ಯೋತ್ಸ್ನಾಳ ಚಿಕ್ಕಪ್ಪನ ಮಗಳ ಮದುವೆ ಧಾಂಧೂಂ ಆಗಿ ನಡೆಯಿತಂತೆ. ಸಾವಿರಾರು ಮೈಲಿ ದೂರದಲ್ಲಿ ಕೂತು ಫೋಟೊಗಳನ್ನು ನೋಡಿದಳು. ಆಗಿನಿಂದಲೇ ಅಮರಿಕೊಂಡಿದ್ದು ಈ ಜಾಡ್ಯ. ಮದುವೆಯಲ್ಲಿ ಅವಳೇ ಕಲಶಗಿತ್ತಿಯಾಗಬೇಕಿತ್ತು. ಆಫೀಸಿನಲ್ಲಿ ಕಳ್ಳನೆಪವೊಂದು ಹೇಳಿ, ಆ ದಿನ ರಜೆ ಹಾಕಿ ಕೂತಿದ್ದಳು. ಮನೆಯೆದುರಿನ ಹೆಜ್ ಟ್ರಿಮ್ ಮಾಡುತ್ತ ಬೆಳಗ್ಗೆ ಕಳೆದಳು, ಮಧ್ಯಾಹ್ನದ ನಂತರ ಅಡುಗೆಮನೆಯ ನೆಲವನ್ನು ತಿಕ್ಕಿ ತೊಳೆದಳು, ಸಂಜೆ ಒಂತಾಸು ಬಾತ್‌ಟಬ್‍ನಲ್ಲಿ ಮುಳುಗೆದ್ದಳು. ಎಲ್ಲವೂ ಒಂದಕ್ಕೊಂದು ತತ್ಸಂಬಂಧವಿಲ್ಲದ್ದು.

(ಪೂರ್ಣಿಮಾ ಭಟ್ಟ ಸಣ್ಣಕೇರಿ)
ಇವತ್ತು ಶನಿವಾರ, ರಜೆ. ಅವಳು ಎದ್ದಾಗಲೇ ಗಡಿಯಾರ ಒಂಬತ್ತು ತೋರಿಸುತ್ತಿತ್ತು. ಬ್ಯಾಕ್ ಗಾರ್ಡನ್ನಿನ ಪ್ಯಾಟಿಯೋದ ಬೆಂಚಿನ ಮೇಲೆ ಕೂತಿದ್ದು ಮಾತ್ರ ಗೊತ್ತು. ಇಂಗ್ಲೆಂಡಿನ ಷೆಪರ್‌ಟನ್ ವಿಲೇಜಿನಿಂದ ಇನ್ನೆಲ್ಲೋ ಓಡಿದ ಅವಳ ಮನಸು.
“ಜೋಹ್, ಬೆಂಚಿನ ಮೇಲೆ ಟೀ ಇಟ್ಟಿದ್ದೆ. ಪೂರ್ತಿ ಆರಿಹೋಯಿತು. ವೈ ಆರ್ ಯೂ ಸೋ ಅನ್‌ಅಲೈನ್ಡ್ ಟುಡೇ?” ಪ್ಯಾಟಿಯೋದಲ್ಲಿ ನಿಂತ ನೀಲ್ ಮೆಲುವಾಗಿ ಕೇಳಿದ. ಇಂಗ್ಲೆಂಡಿಗೆ ಬಂದ ಮೇಲೆ ‘ಜೋ’ ಎಂದು ಬದಲಾದ ಹೆಸರಿನ ಮುಂದೊಂದು ‘ಹ’ ಸೇರಿಸಿ ಜ್ಯೋತ್ಸ್ನಾಳನ್ನು ಇಂಡಿಯನೈಸ್ ಮಾಡುವ ಪ್ರಯತ್ನ ಅವನದು. ಅವನತ್ತ ಹೊರಳಿದಳು.
“ಹೇಗಿದ್ದೀಯಾ?” ಸಹಜ ಕಾಳಜಿ ತೋರಿದ ನೀಲ್. ‘ಐ ಹ್ಯಾವ್ ಹ್ಯಾಡ್ ಬೆಟರ್ ಡೇಯ್ಸ್’ ಎಂದು ಅನಾಯಾಸವಾಗಿ ಕೊಂಕು ಮಾತಾಡಿದಳು. ನಂತರ ಕಣ್ಣಲ್ಲಿ ಪಶ್ಚಾತ್ತಾಪ ಇಣುಕಿಸಲು ಪ್ರಯತ್ನಪಟ್ಟಳು. ಆ ಕೊಂಕು ನೀಲ್‌ನನ್ನು ಅಷ್ಟಾಗಿ ತಟ್ಟಲಿಲ್ಲ. ‘ನೀನು ಬ್ರೆಕ್‌ಫಸ್ಟ್ ಮುಗಿಸು. ಫ್ಲೈಟ್ ಟಿಕೆಟ್ ನೋಡಬೇಕಲ್ಲ ಇವತ್ತು’ ಎಂದ ನೀಲ್. ಅವನು ಫ್ಲೈಟ್ ಟಿಕೆಟ್ ಎಂದದ್ದೇ ಜ್ಯೋತ್ಸ್ನಾ ಸ್ವಲ್ಪ ಗೆಲುವಾದಳು.
ಒಂದೆರಡು ತಿಂಗಳಿನಿಂದ ‘ಜೋಹ್, ಇಂಡಿಯಾಗೆ ಹೋಗಿ ಬರೋಣ’ ಎಂದು ನೀಲ್ ಹೇಳುತ್ತಿದ್ದರೂ ಅವನಿಗೆ ಆ ಬಗ್ಗೆ ಆಸಕ್ತಿಯಿಲ್ಲ ಎಂದುಕೊಂಡಿದ್ದಳು. ಈಗ, ತಾನು ಅದ್ಯಾವುದೋ ಭ್ರಾಮಕ ಸ್ಥಿತಿಯಲ್ಲಿರುವಾಗ ಪ್ರತ್ಯಕ್ಷವಾದ ಫ್ಲೈಟ್ ಟಿಕೆಟ್ಟಿನ ವಿಷಯ ಹಣೆಯಿಂದ ಪಾದವರೆಗೂ ಅವಳನ್ನು ಆವರಿಸಿದ ಭ್ರಮೆಯ ಚೀಲವನ್ನು ಬಗೆದುಹಾಕಿತು.
‘ಇಂಥ ಅಬ್ಬಿತಬ್ಬಿದಾಟವ ಎಲ್ಲಿ ಕಲಿತ್ಯೋ ಕೃಷ್ಣI ರುಗುವಿಣಿ ಸಹಿತ ಹಸೆssಗ್ಯೋಳು’ ಎಂದು ಅವಳು ರಾಗವಾಗಿ ಹಾಡಿ ಹಿಮ್ಮಡಿಯನ್ನು ಪೂರ್ತಿ ಎತ್ತರಿಸಿ ತುದಿ ಕಾಲಿನಲ್ಲಿ ನಿಂತು ನೀಲ್‌ನ ಕೆಂಪು ಕಿವಿಗಳನ್ನು ಉಗುರಿನಿಂದ ಸವರಿದಳು. ಹಾಡಿನ ಸಾಲುಗಳು ಅರ್ಥವಾಗದಿದ್ದರೂ ಜ್ಯೋತ್ಸ್ನಾಳ ನೇವರಿಕೆಯ ಹಿತವನ್ನು ಅನುಭವಿಸಿದ ನೀಲ್ ‘ಕಮಾನ್ ದೆನ್’ ಎಂದು ಡೈನಿಂಗ್ ಟೇಬಲ್ಲಿನ ಮೇಲೆ ಹೊಟ್ಟೆಗಿಲ್ಲದೆ ನಿಶ್ಶಕ್ತವಾದ ಲ್ಯಾಪ್‌ಟಾಪಿಗೆ ಛಾರ್ಜಿಂಗ್ ಕೇಬಲ್ ಚುಚ್ಚಿದ.
ಚಿಕ್ಕಪ್ಪನ ಮಗಳ ಮದುವೆಯ ಸಮಯಕ್ಕೇ ಊರಿಗೆ ಹೋಗಿದ್ದರೆ.. ಎಂಬ ಪ್ರಶ್ನೆ ಸುಳಿಯಿತಾದರೂ ತಕ್ಷಣ ತಲೆ ಧಿಂ ಅಂತು. ಅಲ್ಲಿನ ನೂರಾರು ಪ್ರಶ್ನೆಗಳು, ಹುಸಿ ನ್ಯಾಯಾಧೀಶರ ನಿರ್ಣಯಗಳು, ಹುಟ್ಟುವ ಉಪಕತೆಗಳು ಇದ್ಯಾವುದಕ್ಕೂ ಅವಳು ತಯಾರಿರಲಿಲ್ಲ. ನೀಲ್‌ಗಂತೂ ಇಬ್ಬರ ಸಂಬಂಧ ಶುರುವಾದಾಗಿನಿಂದ ಅವನೇ ಆಗೀಗ ಹೇಳುವಂತೆ ಇವೆಲ್ಲವೂ ‘ಪ್ಯಾರಡೈಮ್ ಶಿಫ್ಟ್’.
ಜ್ಯೋತ್ಸ್ನಾಳ ಪರಿವಾರದ ಅಭಿಪ್ರಾಯದ ಪ್ರಕಾರ ಅವಳ ಇವತ್ತಿನ ಸ್ಥಿತಿಗೆ ಅವಳು ಸಲ್ಲುವವಳೇ ಅಲ್ಲ. ಎಲ್ಲೋ ಹೇಗೋ ಇರಬೇಕಾದವಳು ಹೀಗೆಲ್ಲ ಆಗಿದ್ದಳು.
*****
ಶಿರಸಿ ಸಮೀಪದ ಹಳ್ಳಿಯಿಂದ ಕಾಲೇಜಿಗೆ ಓಡಾಡಿ ಬಿಎ ಡಿಗ್ರಿ ತೆಗೆದುಕೊಂಡಮೇಲೆ ಶಿರಸಿಯಲ್ಲೇ ಗ್ರನೈಟ್ ಅಂಗಡಿಯೊಂದರಲ್ಲಿ ಲೆಕ್ಕ ಪತ್ರ ನೋಡುತ್ತಿದ್ದ ಜ್ಯೋತ್ಸ್ನಾಳ ಮನೆಯಲ್ಲಿದ್ದುದು ಕಾಲೆಕರೆ ಅಡಿಕೆ ತೋಟ, ಅರ್ಧ ಎಕರೆ ಗದ್ದೆ ಮಾತ್ರ. ಬಿಎಸ್ಸಿ ಮುಗಿಸಿದ ತಮ್ಮ ಮನು ಪ್ರೈವೇಟ್ ಆಸ್ಪತ್ರೆಯಲ್ಲಿ ಲ್ಯಾಬ್ ಅಸಿಸ್ಟೆಂಟಿನ ಕೆಲಸ ಮಾಡುತ್ತಿದ್ದ.
ಹತ್ತಾರು ಎಕರೆಯುಳ್ಳ ತೋಟಿಗರ ನಡುವೆ ಸಣ್ಣ ಹಿಡುವಳಿದಾರನಾದ ಅವಳ ಅಪ್ಪ ಏಗಿ ಸುಸ್ತಾಗಿದ್ದ. ಅಡಿಕೆ ತೆಂಗು ಚೆನ್ನಾಗಿ ಬೆಳೆಯುವ ಆಸ್ತಿವಂತರ ಮನೆಗೆ ಅವಳನ್ನು ದಾಟಿಸಲು ಪ್ರಯತ್ನಪಡುತ್ತಿದ್ದ. ತನ್ನ ಆಶೆಭಾಷೆಗಳೂ ಮಧ್ಯಮ ಕೆಳಸ್ತರಕ್ಕೆ ತಕ್ಕುನಾಗೇ ಇದ್ದವು ಎಂಬುದು ಜ್ಯೋತ್ಸ್ನಾಳ ಈಗಿನ ಅನಿಸಿಕೆ.
ಆದರೆ ಪವಾಡವೊಂದು ನಡೆದುಹೋಯಿತು. ಜ್ಯೋತ್ಸ್ನಾ ಕೆಲಸ ಮಾಡುತ್ತಿದ್ದ ಗ್ರನೈಟ್ ಅಂಗಡಿಯ ಓನರ್ ಮಗಳಿಗಾಗಿ, ಇಂಗ್ಲೆಂಡಿನಲ್ಲಿ ಇಂಜಿನಿಯರ್ ಆಗಿದ್ದ ವರನ ಸಂಬಂಧ ಬಂದಿತ್ತು. ನಿಶ್ಚಿತಾರ್ಥವೂ ಮುಗಿದು ಇನ್ನು ಮೂರು ವಾರದಲ್ಲಿ ಮದುವೆಯಾಗಬೇಕು, ಆಗ ಆ ಹುಡುಗಿ ತಿರುಪಗಡೆ ಹಾಕಿ ಕೂತಳು. ತಾನು ಈಗಾಗಲೇ ಒಬ್ಬನನ್ನು ಪ್ರೀತಿಸುತ್ತಿರುವುದಾಗಿಯೂ, ಅವನನ್ನೇ ಮದುವೆಯಾಗುವುದಾಗಿಯೂ ಹಟ ಮಾಡಿ, ನಿಶ್ಚಯವಾಗಿದ್ದ ಮದುವೆಯನ್ನು ಮುರಿದುಕೊಂಡಳು. ಹುಡುಗಿಯ ಅಪ್ಪ ಅಂದರೆ ಜ್ಯೋತ್ಸ್ನಾಳ ಗ್ರನೈಟ್ ಅಂಗಡಿಯ ಓನರಿಗೆ ಇಬ್ಬಂದಿ. ಈ ಇಬ್ಬಂದಿತನದಲ್ಲಿ ಅವರ ಕಣ್ಣೆದುರೇ ಕೆಲಸ ಮಾಡುತ್ತಿದ್ದ ಜ್ಯೋತ್ಸ್ನಾ ಅರ್ಹ ವಧುವಾಗಿ ಕಂಡಳಿರಬೇಕು. ಆ ಇಂಗ್ಲೆಂಡಿನ ಹುಡುಗನನ್ನು ಲಗ್ನವಾಗುವ ಬಗ್ಗೆ ಪ್ರಸ್ತಾಪ ಮಾಡಿದರು. ಫಾರಿನ್ನಿನಲ್ಲಿ ಸೆಟ್ಲ್ ಆದ ಹುಡುಗನ ಸಂಬಂಧವನ್ನು ಜ್ಯೋತ್ಸ್ನಾಳ ಎದುರಿಟ್ಟು ‘ನನ್ನ ಮಗಳಿಗಿಂತ ನೀನು ಬೇರೆಯಲ್ಲ’ ಎಂದು ಆಗೀಗ ಹೇಳುತ್ತಿದ್ದ ಮಾತಿನಂತೆ ನಡೆದುಕೊಂಡರು. ಜತೆಗೇ ತಮ್ಮ ಸರೀಕರ ನಡುವೆ ಮೂಗನ್ನೂ, ಮೀಸೆಯನ್ನೂ ಉಳಿಸಿಕೊಂಡರು. ಜ್ಯೋತ್ಸ್ನಾಳ ಅಪ್ಪನಂತೂ ಅತ್ಯಂತ ಸಂತೋಷದಲ್ಲಿ ಧಾರೆಯೆರೆದುಕೊಟ್ಟ.
ಅಂತೂ ಜ್ಯೋತ್ಸ್ನಾ ಎಂಬೋ ಅಪ್ಪಟ ಹಳ್ಳಿ ಮುಗುದೆ ಹರೀಶನೆಂಬ ಎನ್‌ಆರ್‌ಐಅನ್ನು ಮದುವೆಯಾಗಿ ಹೀಥ್ರೋ ವಿಮಾನ ನಿಲ್ದಾಣದ ಹತ್ತಿರವಿರುವ ಸನ್‌ಬರಿಯಲ್ಲಿ ಸಂಸಾರ ಹೂಡಿದಳು. ಕೆಂಪು ಡಬಲ್ ಡೆಕ್ಕರ್ ಬಸ್ಸುಗಳು, ಶಿಸ್ತಿನಲ್ಲಿ ಗೆರೆ ಹೊಡೆಸಿಕೊಂಡು ಮಲಗಿದ ಕಪ್ಪು ರಸ್ತೆಗಳು, ತಲೆ ಅಲ್ಲಾಡಿಸಿ ತುಟಿಯ ತಿರುವಿನಲ್ಲಿ ಮಾತ್ರ ನಗುವ ಬಿಳಿಯರು. ಇಷ್ಟು ಸಸಾರ ಜೀವನದೊಂದಿಗೆ ಹೊಂದಿಕೊಳ್ಳದೇ ತನಗೇನು ಧಾಡಿ ಎಂದುಕೊಂಡೇ ಇಂಗ್ಲೆಂಡಿನಲ್ಲಿ ತಳವೂರತೊಡಗಿದಳು.
ಹೈಸ್ಟ್ರೀಟಿನಲ್ಲಿ ಅವರ ಸ್ಟುಡಿಯೊ ಅಪಾರ್ಟ್‌ಮೆಂಟ್. ಬಾಗಿಲಿಗೆ ಎದುರು ಸುಮಾರಾದ ವಿಂಡೋ. ಸಣ್ಣ ಕಿಚನ್ ಕೌಂಟರ್. ಫೋಲ್ಡಬಲ್ ಗಾಜಿನ ಗೋಡೆಯ ಆ ಬದಿಯಲ್ಲಿ ಕ್ವೀನ್‌ಸೈಝಿನ ಮಂಚ. ಗಾಜಿನ ಬಣ್ಣ ಹಸಿರಿದ್ದ ಕಾರಣವಿರಬಹುದು ಬೆಡ್ ಸರಿಯಾಗಿ ಕಾಣುತ್ತಿರಲಿಲ್ಲ, ಗೋಡೆಯನ್ನು ಮಡಚಿದ ಹೊರತು. ತೋರ ಆಸಾಮಿಗಳು ಬಂದರೆ ಮೈ ಹಿಡಿಯದಂತಹ ಇಡೂವಾದ ಬಚ್ಚಲು ಒಂದು ಮೂಲೆಯಲ್ಲಿ. ಇಬ್ಬರ ಸಂಸಾರಕ್ಕೆ ಕೊರತೆಯೇನೂ ಆಗದಂಥ, ಬಿದ್ದುರುಳಿ ಸಂಭ್ರಮಿಸಲು ಜಾಗವೂ ಇಲ್ಲದಂಥ ಮನೆ ಅದು.
ಹರೀಶ ಅಂತರ್ಮುಖಿ. ಶುರುವಿನಲ್ಲಿ ಹಿಂಜರಿಕೆಯಿಂದ ಜ್ಯೋತ್ಸ್ನಾ ಜಾಸ್ತಿ ಮಾತನಾಡಲಿಲ್ಲ. ಅವ ಆಫೀಸಿನಿಂದ ಮನೆಗೆ ಬರುವಾಗ ಎಂಟು ಮೀರಿರುತ್ತಿತ್ತು. ಮಾಡಿಟ್ಟ ಅಡುಗೆಯನ್ನು ಕೋಳಿ ಹೆಕ್ಕಿದಂತೆ ತಿನ್ನುತ್ತಿದ್ದ. ಪ್ರತಿಯೊಂದರ ಹದ ಹಿಡಿಯುವುದಕ್ಕೆ ತಿಂಗಳೇ ಬೇಕಾಯಿತು. ರಾತ್ರಿ ಎಲ್ಲ ಯಾಂತ್ರಿಕ. ಬಟ್ಟೆ ಬಿಚ್ಚಲು ಮಾತ್ರ ಸಿಗುವ ಸ್ವಲ್ಪ ಸಹಾಯ ಬಿಟ್ಟರೆ ಬಾಕಿ ಎಲ್ಲವೂ ಕತ್ತಲಿನಲ್ಲಿ ಗುಂಡು ಹೊಡೆದಂತೆ. ಕ್ರಮೇಣ ಅವಳಿಗೆ ಗೊತ್ತಾಗುತ್ತ ಹೋದದ್ದು ಹರೀಶನ ಮುಂಗೋಪ, ಮುಖಕ್ಕೆ ಹೊಡೆದಂತೆ ಆಡುವ ಮಾತುಗಳು, ಸ್ವಚ್ಛತೆಯ ಗೀಳು ಇತ್ಯಾದಿ. ಎಲ್ಲವೂ ಒಂದಕ್ಕೆ ಇನ್ನೊಂದು ಫ್ರೀ ಆಫರ್‌ನಲ್ಲಿ ಬಂದಂತೆ. ಏಕಾಂತದ ಸಲಿಗೆಯಲ್ಲೂ ಅವಳು ಮೈಮರೆಯುವಹಾಗಿಲ್ಲ.
ಒಂದು ರಾತ್ರಿ ಆಗಿದ್ದು ಹೀಗೆ. ಎಲ್ಲ ಮುಗಿದು ಹರೀಶ ಇನ್ನೇನು ಬಾತ್ರೂಮಿನೊಳಗೆ ಹೋಗುತ್ತಿದ್ದ. ಅಷ್ಟೊತ್ತಿಗೆ ಸಿಂಕಿನ ಕೆಳಗೆ ಸುರುಳಿಸುತ್ತಿ ಬಿದ್ದಿದ್ದ ಸ್ಯಾನಿಟರಿಪ್ಯಾಡ್ ಅವನ ಕಣ್ಣಿಗೆ ಬಿತ್ತು. `ಗಲೀಜು’ ಎಂದು ಗೊಣಗಿ ಕಾಲಲ್ಲಿ ತಳ್ಳಿದ. ‘ಓಹ್, ಮರ್ತು ಹೋದೆ. ಬೆಳಗ್ಗೆ ಬಿನ್‌ಗೆ ಹಾಕ್ತೇನೆ. ಅದು ಗಲೀಜೇನಾಗಿಲ್ಲ’ ಎಂದುಬಿಟ್ಟಳು ಜ್ಯೋತ್ಸ್ನಾ. ಅಷ್ಟೇ ಸಾಕಾಯ್ತು. ಮುಂದಿನ ಮೂರುದಿನ ಜ್ವಾಲಾಮುಖಿ ಬಿಸಿಯುಗ್ಗುತ್ತಲೇ ಇತ್ತು. ಕಂಬಳಿ ಸುರುಳಿಯಂತ ಹುಬ್ಬನ್ನ ಗಂಟಿಕ್ಕಿ ಏರುದನಿಯಲ್ಲಿ ಹರೀಶ ಮಾತಾಡುವಾಗ ಜ್ಯೋತ್ಸ್ನಾ ಪೂರ್ತಿ ತಬ್ಬಿಬ್ಬು. ಅವಳೆದೆಯ ಮೂಲೆಯಲ್ಲಿ ಯಾತನೆ. ಅಷ್ಟಾದರೂ ತಾನು ಇದನ್ನೆಲ್ಲ ಗೆಲ್ಲಬಲ್ಲೆ ಎಂಬ ಉಮೇದು.
ಗೂಡು ಚದುರಿದ ಗುಬ್ಬಚ್ಚಿಯಂತಾದ ಇಂಥದ್ದೇ ದಿನಗಳಲ್ಲಿ ಊರಿನ ಮನೆಯಲ್ಲಿರುವ ಮೇಲಿನಮೆತ್ತು ಎಂದು ಕರೆಸಿಕೊಳ್ಳುವ ಉಪ್ಪರಿಗೆಯ ಕೋಣೆ ಮತ್ತು ಅದಕ್ಕಿದ್ದ ಒಂದೇ ಒಂದು ಮುದ್ದು ಮಾಂತ್ರಿಕ ಕಿಟಕಿ ತುಂಬ ನೆನಪಾಗುತ್ತಿತ್ತು ಜ್ಯೋತ್ಸ್ನಾಳಿಗೆ. ಅವಳ ಹರೆಯದಲ್ಲಿ, ಬೇಸರದ ದಿನಗಳಲ್ಲಿ ಮೇಲಿನಮಾಳಿಗೆ ಹತ್ತಿ ಕೂತ ಅರ್ಧ ಗಂಟೆಗೆಲ್ಲ ಕಂಬಿ ಬಿಟ್ಟು ಖಿನ್ನವಾದ ಮನಸ್ಸು ಮತ್ತೆ ಕಂಬಿಗೆ ವಾಪಾಸ್ಸಾದ ದಿನಗಳು ಸಾಕಷ್ಟಿದ್ದವು. ಹಿಸೆ ಪಂಚಾಯ್ತಿಯಲ್ಲಿ ಚಿಕ್ಕಪ್ಪನ ಶಾಣೆತನದಿಂದ ದಿನಬಳಕೆಗೆ ಏನೇನೂ ಅನುಕೂಲವಾಗದಂತಹ ಈ ದೊಡ್ಡದಾದ ಮೇಲಿನಮಾಳಿಗೆ ಅಪ್ಪನ ಪಾಲಿಗೆ ಬಂದಿದ್ದನ್ನ ಕಣ್ಣಾರೆ ಕಂಡಿದ್ದಳು. ಮುತ್ತಜ್ಜನ ಕಾಲದಲ್ಲಿ ಚೌತಿಯ ಗಮ್ಮತ್ತಿಗೆ ಗಣೇಶನನ್ನು ಕೂಡ್ರಿಸಲು ಬಳಸುತ್ತಿದ್ದ ಹುರುಬಲೆದ್ದ ಮೆಟ್ಟಿಲುಗಳು, ಬಾವಲಿಗಳ ಹಿಕ್ಕೆಯಿಂದ ಅಲಂಕೃತ ಕೋಳು ಕಂಬ, ಆ ಕಂಬಕ್ಕೆ ಕಟ್ಟಿದ – ಅಪ್ಪ ಅಮ್ಮ, ಚಿಕ್ಕಮ್ಮ ಚಿಕ್ಕಪ್ಪರ ಮದುವೆಯದೇ ಇರಬೇಕು – ಬಣ್ಣಗೆಟ್ಟ ಬಾಸಿಂಗ ತೊಂಡ್ಲು, ಮುತ್ತಜ್ಜಿಯ ನುಗ್ಗಾದ ಟ್ರಂಕು, ಹೊಗೆ ಹಿಡಿದ ಬೆತ್ತದಪೆಟ್ಟಿಗೆಗಳು, ಅದರಲ್ಲಿದ್ದ ಬಾಯೊಡಕು ಮೈಯ್ಯೊಡಕಿನ ಹಿತ್ತಾಳೆ ಪಾತ್ರೆಗಳು ಇವೂ ಎಲ್ಲ ಅವಳ ಅಪ್ಪಅಮ್ಮನ ಪಾಲಿಗೇ ಬಂದಿತ್ತು ಮೇಲಿನಮಾಳಿಗೆಯೊಂದಿಗೆ. ಈ ಮೇಲಿನಮೆತ್ತೆಂದರೆ ಜ್ಯೋತ್ಸ್ನಾಳ ಅಂತಃಪುರ. ಇಲ್ಲಿದ್ದ ಒಂದೇ ಒಂದು ಮರದ ಚಿತ್ತಾರದ ಕಿಟಕಿ ಎಂದರೆ, ಒಳಗಿನ ಹುಳುಕನ್ನು ಅಲ್ಲಿಗೇ ಮುಗಿಸಿ ಹೊರಗಿನ ಸೊಬಗನ್ನು ಮಾತ್ರ ಕಾಣತೋರುವ ಗಾರುಡಿಗ. ಆ ಕಿಟಕಿಯ ಪಟ್ಟಿಯ ಮೇಲೆ ಒಂದರ್ಧಗಂಟೆ ಕಾಲು ಮಡಚಿ ಕೂತು ಹೊಸ ಹುರುಪಿನಿಂದ ಕೆಳಗಿಳಿದು ಬರುತ್ತಿದ್ದಳು.
ಇಂಥ ಅತೀಂದ್ರಿಯ ಶಕ್ತಿಯಿದ್ದ ಕಿಟಕಿಯೊಂದು ಇಂಗ್ಲೆಂಡಿನ ಇರುವಿನಲ್ಲಿ ಇರದೇ ಇದ್ದುದು ಜ್ಯೋತ್ಸ್ನಾಳನ್ನು ತುಂಬ ಕಾಡುತ್ತಿತ್ತು.
ಹರೀಶ ಬೆಳಗ್ಗೆ ಆಫೀಸಿಗೆ ಹೊರಟನೆಂದರೆ ಜ್ಯೋತ್ಸ್ನಾ ಹೈಸ್ಟ್ರೀಟ್‌ಗುಂಟ ನಡೆಯುತ್ತಿದ್ದಳು. ಎಲ್ಲ ಸಾಲಂಗಡಿಗಳ ಮೇಲೂ ಕಣ್ಣೋಡಿಸುತ್ತಿದ್ದಳು. ವೇಕೆನ್ಸಿ ತಲೆಬರಹದ ಅಡಿ ಇರುವ ಈಮೇಲ್ ಐಡಿಗಳನ್ನು ನೋಟ್ ಮಾಡಿಟ್ಟುಕೊಳ್ಳುತ್ತಿದ್ದಳು. ಹೀಗೆ ನಡೆಯುತ್ತ ಮಹಾಮೇರು ಸನ್‌ಬರಿ ಕೌಂಟಿ ಲೈಬ್ರರಿ ತಲುಪುತ್ತಿದ್ದಳು. ಪತ್ರಿಕೆಗಳನ್ನು ಅರ್ಥವಾದಷ್ಟು ಓದಿ ನಂತರ ಓಹೆನ್ರಿಯ ಪುಸ್ತಕವನ್ನು ಹಿಡಿದು ವಾಲ್-ಮೌಂಟೆಡ್ ಹೀಟರಿನ ಬಳಿ ಕೂಡ್ರುತ್ತಿದ್ದಳು. ಕಾಲೇಜಿನ ದಿನಗಳಲ್ಲಿ ಕೇಳಿದ, ಓದಿದ ಓಹೆನ್ರಿ ಈ ದೇಶದಲ್ಲಿ ಅವಳಿಗೆ ನೆಂಟನಂತೆ ಅನ್ನಿಸುತ್ತಿದ್ದ.
ಒಂದು ಚಳಿಗಾಲದ ಗುರಿಯಿರದ ಮುಂಜಾನೆ ಅದು. ಜ್ಯೋತ್ಸ್ನಾ ಮನೆಗಳ ಮುಂದೆ ಸಿಂಗಾರಗೊಂಡ ಸೀರಿಯಲ್ ಸೆಟ್ ದೀಪಗಳನ್ನು ನೋಡುತ್ತ ಹೋಗುತ್ತಿದ್ದಳು. ರಾತ್ರಿ ಮಾತ್ರ ಉರಿಯುವ ಈ ದೀಪಗಳು ಬೆಳಗಿನ ಆ ಹೊತ್ತಲ್ಲಿ ಬಣ್ಣದ ಸಂಡಿಗೆಗಳನ್ನು ಬಳ್ಳಿಕಟ್ಟಿ ಜೋಡಿಸಿಟ್ಟಂತೆ ಕಾಣಿಸುತ್ತಿದ್ದವು. ಮನೆಗಳ ಸಾಲು ಮುಗಿದ ಮೇಲೆ ರಸ್ತೆಯ ಎಡಭಾಗದಲ್ಲಿ ಒಂದು ಗಿಡಗಳ ನರ್ಸರಿ. ಅಲ್ಲಿ ಗಾಜಿನ ಗೋಡೆಯಮೇಲೆ `ವೇಕೆನ್ಸಿ ಫಾರ್ ವಾಲಂಟರಿ ವರ್ಕ್’ ಎನ್ನುವ ಬೋರ್ಡ್ ಅವಳ ಕಣ್ಣಿಗೆ ಬಿತ್ತು. ಒಳಹೊಕ್ಕು ವಿಚಾರಿಸಿದಾಗ ನರ್ಸರಿಯ ಒಡತಿ ಲಿಂಡಾಳಿಗೆ ಗಿಡಗಳ ವಿಲೇವಾರಿಯ ಜತೆ ಕಚೇರಿಯ ಕೆಲವು ವ್ಯವಹಾರಗಳನ್ನು ನೋಡಿಕೊಳ್ಳಲು ತುರ್ತಾಗಿ ಸಹಾಯ ಬೇಕಿರುವುದು ಗೊತ್ತಾಯಿತು. ಮಾತುಕತೆ ಮುಂದುವರೆದು ಮರುದಿನವೇ ಜ್ಯೋತ್ಸ್ನಾಳ ವಿಳಾಸದ ಪುರಾವೆ, ಪಾಸ್ಪೋರ್ಟ್‌ತರಿಸಿ ನೋಡಿ ಕೆಲಸ ಖಾಯಂ ಮಾಡಿದಳು ಲಿಂಡಾ. ಆ ರಾತ್ರಿ ಹರೀಶನಿಗೆ ಜ್ಯೋತ್ಸ್ನಾ ವಿಷಯ ತಿಳಿಸಿದಾಗ `ಒಳ್ಳೆಯದೇ ಬಿಡು’ ಎಂದು ಚುಟುಕಾಗಿ ಹೇಳಿ ಮುಗಿಸಿದ. ಅಂದು ರಾತ್ರಿ ಊಟಕ್ಕೆ ಶ್ಯಾವಿಗೆ ಪಾಯಸ ಮಾಡಿದ್ದಳು.
ಮರುತಿಂಗಳಿನಿಂದಲೇ ಲಿಂಡಾ ಸಂಬಳ ಕೊಡತೊಡಗಿದಳು. ಜ್ಯೋತ್ಸ್ನಾಗೆ ಇದ್ದುದರಲ್ಲೇ ಸಮಾಧಾನದ ದಿನಗಳವು. ವೀಕೆಂಡ್ ಬಂತೆಂದರೆ ಹರೀಶ ಒಂದರ ಮೇಲೊಂದು ವೆಬ್‌ಸಿರೀಸ್ ಚಚ್ಚುತ್ತಿದ್ದ. ಅಪ್ಪಅಮ್ಮ, ಚಿಕ್ಕಮ್ಮಂದಿರಿಗೆ ಕುಶಲೋಪರಿಯ ಫೋನ್‌ಕಾಲ್ ಮಾಡಿ ಅವಳ ವಾರಾಂತ್ಯ ಕಳೆಯುತ್ತಿತ್ತು. ಊರಿನಲ್ಲಿ ನಡೆಯುತ್ತಿದ್ದ ಸುಖಕರವೂ ಮಂಗಳವೂ ಆದ ವಿಷಯಗಳನ್ನು ಎಳೆದೆಳೆದು ಹೇಳುವ ಅವಳ ಅಪ್ಪ ಬೇಸರದ ರಾಜಕೀಯಗಳನ್ನೂ ಅಷ್ಟೇ ವಿಸ್ತಾರವಾಗಿ ಹೇಳುತ್ತಿದ್ದ. ಅಂತಹ ವಿಷಯಗಳನ್ನು ಕೇಳಿದ ಆಕೆ ಆ ದಿನವೆಲ್ಲ ಊರಿನಲ್ಲಿಯೇ ಇದ್ದಂತೆ ಸಮಾಧಾನಪಡುತ್ತಿದ್ದಳು.
ವಾರದ ದಿನಗಳಲ್ಲಿ ನರ್ಸರಿಯ ಅಡ್ಮಿನ್ ಕೆಲಸವನ್ನು ಕಲಿಯುತ್ತ ಹೋದಂತೆ ಜ್ಯೋತ್ಸ್ನಾಳ ಒಳಗಿನ ದನಿಗೆ ಆಲಾಪದ ವಿಸ್ತಾರ ಸಿಕ್ಕಂತಾಯಿತು. ವರ್ಷ ಕಳೆಯುತ್ತಿದ್ದಂತೆ ಬೇರೆ ಕೆಲಸಕ್ಕೆ ಅರ್ಜಿ ಹಾಕತೊಡಗಿದಳು. ಆಗಲೇ ಅವಳಿಗೆ ಸಿಕ್ಕಿದ್ದು ನೀಲ್.
*****
ನೀಲ್ ಜ್ಯೋತ್ಸ್ನಾಳ ಮೊದಲ ಭೆಟ್ಟಿ ಪೂರ್ವನಿಯೋಜಿತವಾಗಿದ್ದರೂ ನಂತರ ಜರುಗಿದ ಘಟನೆಗಳು ದೈವೇಚ್ಛೆಯೇ ಇರಬಹುದಾ ಎನ್ನಬಹುದಾದಷ್ಟು ಅಚ್ಚರಿಯವು. ಇಂಟರ್ವ್ಯೂದ ಸಂದರ್ಭದಲ್ಲಿ ತನ್ನ ಬಾಯಿಗೆ ಆದಷ್ಟೂ ಕಡಿಮೆ ಕೆಲಸಕೊಟ್ಟ ನೀಲ್ ಜಾಸ್ತಿ ಮಾತನಾಡಿದ್ದು ಹಸಿರು ಕಣ್ಣುಗಳ ಮೂಲಕ ಎನ್ನುವುದು ಜ್ಯೋತ್ಸ್ನಾಳ ಅಭಿಪ್ರಾಯ. ವೆಬ್‌ಡಿಸೈನಿಂಗ್ ಕಂಪನಿಯಲ್ಲಿ ಡೈರೆಕ್ಟರ್ ಆಗಿರುವ ನೀಲ್, ಕೊನೆಯಲ್ಲಿ ‘ಇಫ್ ಐ ಟೇಕ್ ಯೂ ಆನ್ ಬೋರ್ಡ್, ಯೂ ವಿಲ್ ಹ್ಯಾವ್ ಟು ಬ್ರಿಂಗ್ ಇನ್ ಸಮೋಸಾಸ್ ರೆಗ್ಯೂಲರ್‌ಲಿ’ ಎಂದದ್ದು ಎಲ್ಲೂ ಅತಿಶಯವಾಗಿ ಜ್ಯೋತ್ಸ್ನಾಗೆ ಕಾಣಲಿಲ್ಲ. ನೀಲ್ ತನ್ನ ಕಂಪನಿಯ ಅಕೌಂಟ್ ವಿಭಾಗದಲ್ಲಿ ಅವಳಿಗೆ ಕೆಲಸ ಕೊಟ್ಟ. ಹೊಸತನ್ನು ಕಲಿಯುವ ಹುಮ್ಮಸ್ಸಿನಲ್ಲಿ ಯಾವುದೂ ವಜ್ಜೆಯೆನ್ನಿಸಲಿಲ್ಲ.
ಹೊಸ ಕೆಲಸದಲ್ಲಿ ಗಟ್ಟಿ ತಳವೂರಿದ ನಂತರ ಅವಳಿಗೆ ಹರೀಶನೊಂದಿಗೆ ಬದುಕು ಅಸಹನೀಯ ಎನ್ನಿಸತೊಡಗಿತು. ತಾನು ಬೇಯಿಸಿಡುವ ಅಡುಗೆಯೊಂದನ್ನು ಹೊರತುಪಡಿಸಿದರೆ ತನ್ನಿರುವಿನ ಅಗತ್ಯ ಅವನಿಗೆ ಇಲ್ಲ. ಎಲ್ಲರ ಸಮ್ಮುಖದಲ್ಲಿ ಮದುವೆಯಾಗಿ ಇಲ್ಲಿಗೆ ಬಂದು ಬೆರಳೆಣಿಕೆಯಷ್ಟು ಬಾರಿ ಹಾಸಿಗೆ ಹಂಚಿಕೊಂಡಿದ್ದು ಹೌದಾದರೂ ಡಿಪೆಂಡೆಂಟ್ ವೀಸಾದ ಲೆಕ್ಕಾಚಾರವನ್ನು ಬಿಟ್ಟರೆ ಹರೀಶ ತನಗೂ ಬೇಕಾಗಿಯೇ ಇಲ್ಲ ಎಂಬ ವಿಚಾರ ಅವಳಿಗೆ ಸ್ಪಷ್ಟವಾಗುತ್ತಹೋಯಿತು.
ಆಫೀಸಿನಲ್ಲಿ ಮಾತನಾಡಿ ಕಂಪನಿಯ ವತಿಯಿಂದ ತನ್ನ ವರ್ಕ್‌ಪರ್ಮಿಟ್ ಫೈಲ್ ಮಾಡುವಂತೆ ವಿನಂತಿಸಿದಳು. ಎರಡೇ ತಿಂಗಳಿನಲ್ಲಿ ಡಿಪೆಂಡೆಂಟ್ ವೀಸಾದ ಬದಲು ವರ್ಕ್‌ಪರ್ಮಿಟ್ ವೀಸಾ ಬಂತು. ಅವಳು ಬೇರೆಯಾಗುವ ವಿಷಯವನ್ನು ಮುಂದಿಟ್ಟಾಗ ಹರೀಶ ಸಿಟ್ಟನ್ನಾಗಲೀ ಆಶ್ಚರ್ಯವನ್ನಾಗಲೀ ತೋರಿಸಲಿಲ್ಲ. ‘ನಿನ್ನನ್ನು ಮೊದಲೇ ಅಳೆದಿದ್ದೆ’ ಎನ್ನುವಂತೆ ನೋಡಿದ ಅಷ್ಟೆ. ನಂತರ ಗ್ಲಾಸ್ಗೋದ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತೆಂದು ಮನೆ ಖಾಲಿ ಮಾಡಿದ. ಅಪ್ಪಅಮ್ಮನಿಗೆ ತನಗೆ ಸರಿಕಂಡ ಧಾಟಿಯಲ್ಲಿ ನಡೆದದ್ದುನ್ನು ಹೇಳಿ ಸುಮ್ಮನಾದಳು. ಅವನ ಧಾಟಿಯಲ್ಲಿ ಅವನೂ ತನ್ನವರಿಗೆ ಹೇಳಿರಬಹುದಾದುದನ್ನ ಊಹಿಸಿ ತಣ್ಣಗಾದಳು.

ನೀಲ್ ಮತ್ತು ತಾನು ಹತ್ತಿರಾಗುವುದಕ್ಕೆ ತಮ್ಮಿಬ್ಬರ ವೈಯಕ್ತಿಕ ಯಾತನೆಯೇ ಕಾರಣ ಎಂಬುದು ಜ್ಯೋತ್ಸ್ನಾಳ ಬಲವಾದ ನಂಬಿಕೆ.
ನೀಲ್‌ನ ಕಂಪನಿಯಲ್ಲಿ ಅವಳು ಕೆಲಸ ಶುರು ಮಾಡಿದ ಹೊಸತರಲ್ಲಿ ತನ್ನ ಬಹುಕಾಲದ ಗೆಳತಿ ಏವಾಳನ್ನು ಅವನು ಮದುವೆಯಾಗಿದ್ದ. ಸೆಂಟ್ರಲ್ ಡಿಸ್ಟ್ರಿಕ್ಟಿನಲ್ಲಿ ಕೆಲಸಮಾಡುವ ಏವಾ ಪ್ರತಿ ಶುಕ್ರವಾರ ಸಂಜೆ ಇವರ ಆಫೀಸಿಗೆ ಬರುತ್ತಿದ್ದಳು. ಮೂವೀ ಡೇಟ್‌ನೈಟ್, ಮ್ಯೂಸಿಕ್ ಫೆಸ್ಟಿವಲ್ ಎನ್ನುತ್ತ ಇಬ್ಬರೂ ಖುಶಿಯಾಗಿದ್ದರು. ಹದಿನೈದೇ ಜನರಿದ್ದ ಇವರ ಆಫೀಸಿನಲ್ಲಿ ಯಾರೂ ಏನನ್ನೂ ಗುಟ್ಟು ಮಾಡಿದ್ದಿಲ್ಲ.
ಏವಾ ನೀಲ್‌ಗಿಂತ ಮೂರು ವರ್ಷ ದೊಡ್ಡವಳು. ಮದುವೆಯಾಗಿ ವರ್ಷವಾಗುವುದರೊಳಗೆ ಮಗ ಲಿಯೊ ಹುಟ್ಟಿದ್ದ. ಲಿಯೊ ಎರಡು ವರ್ಷದ ಮಗುವಾಗಿದ್ದಾಗ ಒಂದು ಹಿಮ ಮುಸುಕಿದ ಸಂಜೆ, ಮಗನನ್ನು ಮನೆಗೆ ಕರೆತರಲು ಚೈಲ್ಡ್ ಕೇರ್ ಸೆಂಟರಿಗೆ ಏವಾ ಹೊರಟಿದ್ದಳು. ರಸ್ತೆಯ ಮೇಲೆ ಬ್ಲ್ಯಾಕ್ ಐಸಿನ ತೆಳುಪರದೆ ಹರಡಿದ್ದೇ ನೆವ. ಏವಾಳ ಕಾರು ಗಿರಕಿ ಹೊಡೆಯುತ್ತ ಎದುರಿನ ಲೇನ್‌ನಲ್ಲಿ ಬರುತ್ತಿದ್ದ ಲಾರಿಗೆ ಹೋಗಿ ಕುಟ್ಟಿತ್ತು. ತಕ್ಷಣವೇ ಆಸ್ಪತ್ರೆ ಔಷಧ ಎಲ್ಲವೂ ನಡೆದರೂ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಮೂರು ದಿನಗಳ ನಂತರ ಆಸ್ಪತ್ರೆಯ ಬೆಡ್ಡಿನಲ್ಲಿ ಏವಾ ತೀರಿಕೊಂಡಿದ್ದಳು. ಕೊನೆಯ ಕಾರ್ಯಗಳನ್ನೆಲ್ಲ ಮುಗಿಸಿ ಎರಡು ವಾರದ ನಂತರ ಆಫೀಸಿಗೆ ಬಂದ ನೀಲ್, ವಿಷಾದದ ಬೆಟ್ಟವಾಗಿದ್ದ. ಪುಟಾಣಿ ಲಿಯೊನ ದೇಖರೇಖೆಯ ನಡುವೆ ಏವಾಳ ಸಾವು ತಂದಿಟ್ಟ ನಿರ್ವಾತ, ಶೋಕವನ್ನು ಕರುಳಿನಿಂದ ಹೊರದೂಡಲು ಬಹಳ ಕಷ್ಟವಾಗುತ್ತಿರುವುದು ಆಫೀಸಿನವರಿಗೆಲ್ಲ ಗೊತ್ತಾಗುತ್ತಿತ್ತು.
ಇಂಥದ್ದೇ ಒಂದು ದಿನ ಜ್ಯೋತ್ಸ್ನಾ ಮತ್ತು ನೀಲ್ ಹತ್ತಿರಾದದ್ದು. ಯಾವುದನ್ನೂ ಬಾಯೊಡೆದು ಹೇಳಬೇಕಾಗಿರಲಿಲ್ಲ. ಅವರ ಅರಿವಿಗೆ ಬಾರದೆ ಅವರು ಸೃಷ್ಟಿಸಿಕೊಂಡ ಸನಿಹ, ಆಪ್ತ ಸಂಭಾಷಣೆಗಳು, ಕಾಳಜಿ, ಗಮನಿಸುವಿಕೆ ಇವೆಲ್ಲವೂ ಇಬ್ಬರನ್ನು ಕೆಲಕಾಲ ಅವ್ಯಕ್ತಕ್ಕೆ ನೂಕಿದವು. ಬಲುಬೇಗ ಈ ವಹಿವಾಟು ವ್ಯಕ್ತವಾಗಿ ಕೂಡ ಬದಲಾಯಿತು. ನೋ ಸ್ಟ್ರಿಂಗ್ಸ್ ಅಟ್ಯಾಚ್ಡ್ ಎಂಬಂತೆ ಶುರುವಾದ ಅವರ ದೈಹಿಕ ಸೆಳೆತ ಪ್ರೀತಿಯಾಗಿ ಹರಿಯಲೂ ಸಮಯ ಹಿಡಿಯಲಿಲ್ಲ. ಯಾತನೆಯ ಹೊರೆ ಇಬ್ಬರನ್ನೂ ಸಾಕಷ್ಟು ಹೈರಾಣು ಮಾಡಿತ್ತಲ್ಲ, ಅದೇ ಕಾರಣವೆಂದುಕೊಂಡರು ಅವರು.
ಬರಿಯ ದೈಹಿಕ ಆಕರ್ಷಣೆಯಿಂದ ಇಬ್ಬರೂ ಹತ್ತಿರಾದಾಗ ಯಾವ ಬಗೆಯ ಹಿಂಜರಿಕೆಯೂ ಜ್ಯೋತ್ಸ್ನಾಳನ್ನು ಕಾಡಲಿಲ್ಲ. ಪ್ರೀತಿ, ಮಾಧುರ್ಯದ ಘಮ ಹರಡತೊಡಗಿತಲ್ಲ, ಆಗ ಅವಳ ಇನ್ಫಿರಿಯಾರಿಟಿ ಒಳಗಿನಿಂದ ಪುಟಿದೇಳುತ್ತಿತ್ತು. ನೀಲ್ ಅತಿಸಹಜವಾಗಿ ಕೇಳಿದ `ಕುಡಿಯಲೇನು ಕೊಡಲಿ?’ ಎಂಬ ಪ್ರಶ್ನೆ, ಅವಳ ಕೈಯಲ್ಲಿ ಅವನು ವೈನ್ ಗ್ಲಾಸ್ ಹಿಡಿಸಿದಾಗ ಆಗುವ ಮುಜುಗರ, ಅವನ ಮನೆಯಲ್ಲಿಯೇ ಉಳಿದ ಮರುದಿನ ಅಳುಕಿಲ್ಲದೆ ತನ್ನ ಒಳವಸ್ತ್ರಗಳನ್ನೂ ವಾಶಿಂಗ್‌ಮಶೀನಿಗೆ ಹಾಕುವ ಅವನ ದಿನಚರಿ, ಅವಕಾಶ ಸಿಕ್ಕಿದಾಗಲೆಲ್ಲ ಆಸ್ಥೆಯಿಂದ ತುಟಿಯ ಮೇಲೆ ಒತ್ತುತ್ತಿದ್ದ ಮುತ್ತು, ಮೆಟ್ಟಿಲು ಇಳಿಯುವಾಗ ಹಿಂದಿನಿಂದ ಬಂದು ತಬ್ಬಿ ತನ್ನ ಒಳದೋಳನ್ನು ಮುದ್ದಿಸುವ ನಯ, ಕಿಚನ್ನಿನ ಕಟ್ಟೆಯ ಮೇಲೆ ತನ್ನನ್ನು ಅನಾಮತ್ತು ಎತ್ತಿ ಕೂಡ್ರಿಸಿ ನಿಮಿಷಗಟ್ಟಲೇ ತುಟಿಯ ಮೇಲ್ಭಾಗವನ್ನ, ಕೆನ್ನೆಯ ಇಳಿಜಾರನ್ನ ಅಚ್ಛೆಯಿಂದ ಸವರುವಾಗ ಅವನ ಕಣ್ಣಲ್ಲಿರುವ ತೃಪ್ತಿ ಇವೆಲ್ಲವೂ ಜ್ಯೋತ್ಸ್ನಾಳನ್ನು ಸದಾ ಆತಂಕಕ್ಕೆ ಈಡುಮಾಡುತ್ತಿತ್ತು. ನೀಲ್‌ನ ಋಣಭಾರದಲ್ಲಿ ಬಿದ್ದಂತೆ ಭಾಸವಾಗುತ್ತಿತ್ತು. ಕಾಸಿನಕಡ್ಡಿ ಪ್ರಯೋಜನವಿಲ್ಲದ ಮಾತಿಗೆ ತಾನು ಹಟಮಾರಿ ಮಗುವಂತೆ ರಚ್ಚೆ ಹಿಡಿದಾಗ ಅವನು ತಲೆನೇವರಿಸಿ ತೋರುವ ಕಾಳಜಿ, ಪ್ರಣಯದ ಉತ್ಕಟತೆಯಲ್ಲಿ ಸದಾ ತನ್ನನ್ನೇ ಗೆಲ್ಲಿಸುವ ಅವನ ನಡೆ ಅವಳಿಗೆ ತಾಯ್ತನದಂತೆ ಭಾಸವಾಗುತ್ತಿತ್ತು.
ಎಷ್ಟೋ ರಾತ್ರಿ, ಲಿಯೊ ಮಲಗಿದ ಮೇಲೆ ಬಾಲಿವುಡ್ ಸಿನಿಮಾಗಳನ್ನ, ಡಾಕ್ಟರ್ ರಾಜಕುಮಾರ್ ಸಿನಿಮಾಗಳನ್ನ ನೀಲ್ ಜತೆಯಲ್ಲಿ ನೋಡುತ್ತ ಸೀನುಗಳನ್ನು ಜ್ಯೋತ್ಸ್ನಾ ವಿವರಿಸುತ್ತಿದ್ದಳು. ಫೋನಿನಲ್ಲಿ ಅಪ್ಪ ಹೇಳಿದ್ದ ಊರಿನ ಕತೆಗಳನ್ನೆಲ್ಲ ಅಭಿನಯದೊಂದಿಗೆ ತೋರಿಸಿ ಅರ್ಥ ಮಾಡಿಸಲು ಹೆಣಗಾಡುತ್ತಿದ್ದಳು. ಭಾಷಾಂತರ ಸಾಧ್ಯವಿಲ್ಲದ ಪದಗಳನ್ನು ಭಾವಾಂತರವಾಗಿಸಿ ಹಗುರಾಗುತ್ತಿದ್ದಳು. ಇಂತ ಸನ್ನಿವೇಶಗಳಲ್ಲಿ ಜಾದೂ ಮಾಡಿದಂತೆ ತನ್ನ ಋಣಭಾರ ಕಡಿಮೆಯಾದ ಅನುಭವವಾಗಿ ಆಶ್ಚರ್ಯಪಡುತ್ತಿದ್ದಳು. ಇದಕ್ಕೆಲ್ಲ ಕಾರಣ ಹುಡುಕಿ ಸಿಗದೇ ಪೆಚ್ಚಾಗುತ್ತಿದ್ದಳು.
ಕಣ್ಣಳತೆಯ ದೂರದಲ್ಲಿರುವುದು ನಾಯಿಯಾ ನರಿಯಾ ಅಥವಾ ತೋಳವಿದ್ದರೂ ಇರಬಹುದಾ ಎಂಬ ತಾಕಲಾಟದಲ್ಲಿ ಇರುವಾಗಲೆಲ್ಲ ತನ್ನೂರಿನ ಮನೆಯ ಮಾಯ್ಕಾರನಂತಿದ್ದ ಮೇಲಿನಮಾಳಿಗೆಯ ಮರದ ಕಿಟಕಿಯ ಹಂಬಲ ಅವಳನ್ನು ಮತ್ತೆ ಮತ್ತೆ ಕಾಡುತ್ತಿತ್ತು. ಈ ಮಾಯ್ಕಾರನ ಮೈಮೇಲಿನ ಚಿತ್ತಾರದ ಮೇಲೆ ಕೈಯ್ಯಾಡಿಸಿದರೆ ಆಗುವ ಸಮಾಧಾನಕ್ಕಾಗಿ ಇನ್ನಿಲ್ಲದೆ ಹಪಹಪಿಸುತ್ತಿದ್ದಳು.
ಇಂಥದ್ದೇ ಒಂದು ಸಂಜೆ, ರೆಸ್ಟುರಾದಲ್ಲಿ ಊಟಕ್ಕೆಂದು ಭೇಟಿಯಾಗಿ ನೀಲ್ ತನ್ನ ಅಪ್ಪಅಮ್ಮನಿಗೆ ಜ್ಯೋತ್ಸ್ನಾಳನ್ನು ಪರಿಚಯ ಮಾಡಿಕೊಟ್ಟ. ಮಗನ ಸಂಕಟವನ್ನ ಕಂಡಿದ್ದ ತಾಯಿ, ಹುಡುಗಿಯೊಬ್ಬಳೊಂದಿಗೆ ಮಗ ಖುಶಿಯಾಗಿದ್ದುದನ್ನು ನೋಡಿ ತಾನೂ ಖುಶಿಯಾದಳು.
ಜ್ಯೋತ್ಸ್ನಾ ಅಪ್ಪಅಮ್ಮನಿಗೆ ಫೋನ್ ಮಾಡಿ ನೀಲ್‌ನ ವಿಷಯ ತಿಳಿಸಿದಳು. ಅವರು ಸಮಾಧಾನದಿಂದ ಕೇಳಿಸಿಕೊಂಡರು. ಇಂಗ್ಲೆಂಡಿನಲ್ಲಿ ಕೈತುಂಬ ಸಂಪಾದಿಸುವ, ಮೂವತ್ತರ ಎಡಬಲದಲ್ಲಿರುವ ಮಗಳಿಗೆ ಬದುಕಿನ ಇಳಿಜಾರಿನಲ್ಲಿರುವ ತಾವೇನು ಹೇಳಲಾದೀತು ಎಂಬಂತೆ ಸುಮ್ಮನಾಗಿದ್ದರು. ಗದ್ದೆಮೂಲೆಯ ರಮೂನ ಮನೆಯವರಿಗೂ ಕೆರೆತುದಿಯ ನಾಲ್ಕೈದು ಮನೆಯವರಿಗೂ ರಮೂನ ಮದುವೆಯ ಕಾರಣವಾಗಿ ಗಲಾಟೆಯಾಗಿರುವ ವಿಷಯವನ್ನು ಸಹಜವಾಗಿಯೇ ಹೇಳಿ ಮಗಳ ಜೀವನದ ಗಂಭೀರ ಸಂದರ್ಭವನ್ನು ಹಗುರಮಾಡಲು ನೋಡಿದ್ದರು.
ಮುಂದೆ ತಿಂಗಳೊಪ್ಪತ್ತಿನಲ್ಲೇ ಒಂದು ಭಾನುವಾರದ ನಡುಮುಂಜಾನೆ, ನೀಲ್‌ನ ಮನೆಯ ಬ್ಯಾಕ್ ಗಾರ್ಡನ್‌ನಲ್ಲಿ ಹಾಕಿದ್ದ ಬಿಳಿಯ ಗಝೀಬೊದ ಕೆಳಗೆ ಕೆಲವಷ್ಟೇ ಆತ್ಮೀಯರ ಸಮ್ಮುಖದಲ್ಲಿ, ರಜಿಸ್ಟ್ರಾರ್ ಎದುರು ಮದುವೆ ರಜಿಸ್ಟ್ರೇಷನ್ನಿನ ಪತ್ರಕ್ಕೆ ಜ್ಯೋತ್ಸ್ನಾ ಮತ್ತು ನೀಲ್ ಸಹಿ ಮಾಡಿದರು. ಅದೇ ಸಂಜೆ ಡಡ್ಲಿಯ ತಿರುಮಲ ದೇವಸ್ಥಾನದಲ್ಲಿ ಗೋಧೂಳಿ ಮುಹೂರ್ತಕ್ಕೆ ಸರಿಯಾಗಿ ಹಾರ ಬದಲಾಯಿಸಿಕೊಂಡರು. ವಾರ, ತಿಂಗಳುಗಳು ಇವರ ಮೇಲೆ ದಯೆಯಿರಿಸಿ ಹಾಯಾಗಿ ಕಳೆದುಹೋಗುತ್ತಿದ್ದವು.
*****
ಬೆಂಗಳೂರಿಗೆ ನೀಲ್ ಮತ್ತು ನೀಲ್‌ನ ಜೋಹ್ ಬಂದಿಳಿದಾಗ ಸಂಜೆ ಆರು ಗಂಟೆ. ಬೇರೆ ಹಲವು ದೇಶಗಳನ್ನು ತಿರುಗಿದ್ದ ನೀಲ್‌ಗೆ ಭಾರತದ ಪ್ರಯಾಣ ಹೊಸದು. ತನ್ನೂರಿನ ಬಗ್ಗೆ, ತನ್ನವರ ಬಗ್ಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿ ಸಾಕಷ್ಟು ತಯಾರಿ ನಡೆಸಿದ್ದಳಾದರೂ ಜ್ಯೋತ್ಸ್ನಾಗೆ ಒಂಚೂರು ಕಸಿವಿಸಿ. ನೀಲ್ ಅವಳ ತದ್ವಿರುದ್ಧ. ಲಿಯೊನನ್ನು ತನ್ನ ತಾಯಿಯೊಂದಿಗೆ ಬಿಟ್ಟುಬಂದ ಅಳುಕೊಂದನ್ನು ಹೊರತುಪಡಿಸಿ ಇನ್ಯಾವ ಚಿಂತೆಯೂ ಅವನಲ್ಲಿ ಇದ್ದಂತಿರಲಿಲ್ಲ. ಜ್ಯೋತ್ಸ್ನಾಳನ್ನು ಲಲ್ಲೆಗರೆಯುತ್ತ, ಪ್ರತಿಯೊಂದು ಹೆಜ್ಜೆಗೂ ಅವಳ ಕಣ್ಸನ್ನೆಯ ಒಪ್ಪಿಗೆ ಕಾಯುತ್ತ ಅವಳ ಹಿಂದೆಮುಂದೆಯೇ ಸುತ್ತುತ್ತಿದ್ದ.
ಇಬ್ಬರೂ ಊರು ತಲುಪಿದಾಗ ಚುಮುಚುಮು ಬೆಳಗು. ನೀಲ್ ರಾತ್ರಿಯಿಡೀ ಹೊರಗೆ ನೋಡುತ್ತ ಕುಳಿತಿದ್ದ. ಪ್ಯಾರಾಡೈಮ್ ಶಿಫ್ಟಿಗೆ ರೆಡಿಯಾಗಿಯೇ ಬಂದಿದ್ದೇನೆ ಎನ್ನುವ ಭರವಸೆಯನ್ನು ಕಣ್ಣಿನಲ್ಲೇ ಜ್ಯೋತ್ಸ್ನಾಗೆ ವರ್ಗಾಯಿಸುತ್ತಿದ್ದ.
ಬಿಳಿಯನೊಬ್ಬ ಅಳಿಯನಾಗಿ ಮನೆಯಲ್ಲಿ ಉಳಿಯಲು ಬಂದರೆ ಅವರ ಕೈಯ್ಯಲ್ಲಿ ಏನೇನು ವ್ಯವಸ್ಥೆ ಮಾಡಲು ಸಾಧ್ಯವೋ ಆ ವ್ಯವಸ್ಥೆಗಳನ್ನು ಅಪ್ಪಅಮ್ಮ ಶಕ್ತಿ ಮೀರಿ ಮಾಡಿದ್ದು ಜ್ಯೋತ್ಸ್ನಾಳ ಕಣ್ಣಿಗೆ ರಾಚುತ್ತಿತ್ತು. ಪ್ಲಾಸ್ಟಿಕ್ಕನ್ನ ಬಿಚ್ಚಿಸಿಕೊಳ್ಳದ ಕರ್ಲಾನ್ ಬೆಡ್ಡು, ಪೇಟೆಮೇಲಿನ ನೆಂಟರು ಬಂದಾಗ ಮಾತ್ರ ಹೊರಬೀಳುವ ಡಾಂಬರುಗುಳಿಗೆ ಪರಿಮಳದ ಟರ್ಕಿಸ್ ಟುವಾಲು, ಏಳಡಿಗೆ ಎತ್ತರವೇರಿಸಿಕೊಂಡ ಬಚ್ಚಲಿನ ಗೋಡೆ ಇವೆಲ್ಲ ಅವಳ ಅನುಭವಕ್ಕೆ ಬಂದಂಥವು. ಇನ್ನೂ ಹಲವು ಇಬ್ಬರ ಭಾವವನ್ನು ಮಾತ್ರ ತಾಕಿದಂಥವು.
ಊರವರು, ಸಂಬಂಧಿಗಳು ಎಲ್ಲರೂ ಮೇಕಿಯ ಮೇಲೆ ಮನೆಗೆ ಬಂದು ಹೋದರು. ಬಿಳಿಯ ಗಂಡಸನ್ನು ಮದುವೆಯಾದ ಜ್ಯೋತ್ಸ್ನಾಳ ಅದೃಷ್ಟವನ್ನು ನೋಡಬೇಕಿತ್ತಲ್ಲ! ಹೊತ್ತಿಗೊಂದು ಕತೆಕಟ್ಟಿದರು. ಕೆಲವು ಸಂಭಾಷಣೆಗಳ ಹರಿವನ್ನು ನೋಡಿಯೇ ನೀಲ್ ಏನಾಗಿರಬಹುದೆಂದು ಊಹಿಸುತ್ತಿದ್ದ. ‘ಯುವರ್ ಹೋಮ್‌ಲ್ಯಾಂಡ್ ಇಸ್ ನಾಟ್ ಲೈಕ್ ವಾಟ್ ಐ ಥಾಟ್ ಜೋಹ್. ನೌ, ಐ ನೋ ವ್ಹೇರ್ ಯುವರ್ ಇಂಟರ್‌ಪ್ರಿಟೇಶನ್ಸ್ ಕಮ್ ಫ್ರಂ’ ಎಂದು ಎಳೆಗರುವಿನಂತೆ ಮುಖ ಮಾಡಿದಾಗ ಅವಳು ಇನ್ನಷ್ಟು ಮೋಹಕ್ಕೆ ಬಿದ್ದಳು.
ನೀಲ್, ಜ್ಯೋತ್ಸ್ನಾ ಇಂಗ್ಲೆಂಡಿಗೆ ತಿರುಗಿ ಹೊರಡಲು ಇನ್ನೆರಡೇ ದಿನಗಳು ಉಳಿದಿದ್ದವು. ರಾತ್ರಿ ಊಟದ ನಂತರ ನೀಲ್ ಬೇಗ ಮಲಗಿಬಿಟ್ಟಿದ್ದ. ಜ್ಯೋತ್ಸ್ನಾ ಮನೆ ಹೊರಗಿನ ಹೇಡಿಗೆಯ ಮೇಲೆ ಕೂತು ಅರಳೀಕಟ್ಟೆಯ ಮೂಲೆಯಿಂದ ಬರುತ್ತಿದ್ದ ‘ರುಮ್ಮು ರುಮ್ಮು’ ಎಂಬ ತಮಟೆಯ ಶಬ್ದಕ್ಕೆ ಕಿವಿಯಾಗಿದ್ದಳು. ಆ ದಿನ ಟಾರುರಸ್ತೆಯ ಕೂಡುದಾರಿ ಗುಡಿಯ ದುರ್ಗಮ್ಮನಿಗೆ ಹುಣ್ಣಿಮೆ ಪಲ್ಲಕ್ಕಿ ಉತ್ಸವ. ಊರಮೇಲೆ ಮೆರವಣಿಗೆ ಹೊರಟ ದುರ್ಗಮ್ಮನ ಹಿಂದೆ ಅರ್ಧ ಊರೇ ಜೈಕಾರ ಹಾಕುತ್ತ ನಡೆದಿದ್ದನ್ನು ಜ್ಯೋತ್ಸ್ನಾ ನೀಲ್ ಸಂಜೆಯ ಹೊತ್ತಲ್ಲಿ ಮನೆಯ ಅಂಗಳದ ತುದಿಗೆ ನಿಂತು ನೋಡಿದ್ದರು. ಮೆರವಣಿಗೆಯೆಲ್ಲ ಮುಗಿದು ಈ ರಾತ್ರಿಯ ಸಮಯದಲ್ಲಿ ಇನ್ನೇನು ದುರ್ಗಮ್ಮ ಅರಳೀಕಟ್ಟೆಯ ಗದ್ದುಗೆಯೇರಿ ಕೂತ ಮೇಲೆ ನೈವೇದ್ಯವಾಗಬೇಕು, ಪೂಜೆಯಾಗಬೇಕು. ಅದರದೇ ತಯಾರಿಯಲ್ಲಿ ರುಮ್ಮು ರುಮ್ಮು ರುಮ್ಮು ಎಂದು ನಿಧಾನಗತಿಯ ತಮಟೆಯ ಶಬ್ದ.
ಅರಳೀಕಟ್ಟೆಯಲ್ಲಿ ಒಮ್ಮೆಲೇ ತಮಟೆಯ ಸದ್ದು ನಿಂತು ಗಲಾಟೆ, ಜಗಳ ಶುರುವಾದಂತಾಯಿತು. ಜಗುಲಿಯಲ್ಲಿ ಧಾರಾವಾಹಿ ನೋಡುತ್ತ ಕೂತ ಜ್ಯೋತ್ಸ್ನಾಳ ಅಪ್ಪ ಅಮ್ಮ ಹೇಡಿಗೆಗೆ ಬಂದರು. ಮೊಬೈಲು ತೀಡುತ್ತ ಕುಳಿತ ಅವಳ ತಮ್ಮ ಮನು ‘ಗದ್ದೆಮೂಲೆಯ ರಮೂನ ನಂಬ್ರವೇ ಹೊಗರಿರಬೇಕು’ ಅಂದ.
ಊರಿನೆಲ್ಲರ ಗದ್ದೆ ಮುಗಿದ ಮೇಲೆ, ಮಾಲ್ಕಿ ಬೇಣ ಶುರುವಾಗುವ ಮೊದಲು ಮೂಲೆಯ ಜಾಗದಲ್ಲಿ ಇತ್ತೀಚೆಗೆ ಬಿಡಾರದಂಥ ಮನೆ ಕಟ್ಟಿಕೊಂಡಿರುವ ಶಾಂತಲಾ ಹಾಗೂ ಅವಳ ಮಗ ರಮೂ. ಐವತ್ತು ವರ್ಷಕ್ಕೇ ಮುದುಕಿಯಾದಂತಿದ್ದ ಶಾಂತಲಾ, ಹುಟ್ಟಿದಾರಾಭ್ಯವೂ ಊರಿನ ಅವರಿವರ ಜಮೀನಿನಲ್ಲಿ ಕೂಲಿ ಮಾಡಿದ್ದೆ ನಿಜವೇನೋ ಎಂಬಂತೆ ಊರವರಿಗೆಲ್ಲ ಸದಾ ಬೇಕಾಗಿ ಇದ್ದವಳು. ಅವಳ ಮಗ ರಮೂ, ಅಲ್ಲೆಲ್ಲೋ ತೀರ್ಥಳ್ಳಿ ಕಡೆಯ ಹುಡುಗಿಯನ್ನ ಮದುವೆಯಾಗಿ ಬಂದದ್ದೇ ನೆಪವಾಗಿ ಮದುಮಕ್ಕಳು ಊರಿಗೆ ಬಂದಾಗಿನಿಂದ ಕೆಲವು ಮನೆಯವರು ಒಟ್ಟಾಗಿ ಶಾಂತಲಾಳ ಮನೆಯವರಿಗೆ ತೊಂದರೆ ಕೊಡುತ್ತಿದ್ದ ವಿಷಯ ಊರಲ್ಲಿ ಸ್ವಲ್ಪ ಹಳೆಯದು.
ಸಂಜೆ ಹಾಲಿನ ಡೈರಿಗೆ ಹೋದಾಗ ಅವನಿಗೆ ಸಿಕ್ಕ ಸುದ್ದಿಗೆ ಬೇಗಡೆ ಕಾಗದ ಸುತ್ತಿ ಯಾರೂ ಕೇಳದೆಯೂ ಸಂಜೆ ಏನಾಯಿತು ಎಂದು ಜ್ಯೋತ್ಸ್ನಾಳ ತಮ್ಮ ಮನು ಹೇಳತೊಡಗಿದ. ‘ಮೆರವಣಿಗೆಗೆಂದು ಊರ ಮೇಲೆ ಬಂದ ದುರ್ಗಮ್ಮನ ಪಲ್ಲಕ್ಕಿ ರಮೂನ ಮನೆಯನ್ನ ನುಗ್ಗಿದೆ. ಪಲ್ಲಕ್ಕಿ ಹೊತ್ತ ಇಬ್ಬರು ಗಂಡಸರು ಪಲ್ಲಕ್ಕಿಯೊಂದಿಗೇ ರಮೂನ ಹೆಂಡತಿಯ ಮೈಮೇಲೆ ಏರಿ ಹೋಗಿದ್ದಾರೆ. ಆ ಹೆಂಗಸು ಕೈಗೆ ಸಿಕ್ಕ ಪಾತ್ರೆಯನ್ನೇ ಏರಿ ಬಂದ ಗಂಡಸರ ಮೇಲೆ ಚಚ್ಚಿದ್ದಾಳೆ. ಎಲ್ಲರೆದುರು ಹೊಡೆತ ತಿಂದ ಆ ಗಂಡಸರು, ರಮೂನ ಹೆಂಡತಿಯನ್ನು ಬಲವಾಗಿ ಮೂಲೆಗೆ ತಳ್ಳಿ ಪಲ್ಲಕ್ಕಿಯೊಂದಿಗೆ ಮುಂದಿನ ಮನೆಗೆ ಹೋಗಿದ್ದಾರೆ. ರಮೂನ ಹೆಂಡತಿ ತಕ್ಷಣವೇ ಗಂಡನ ಬೈಕಿನಲ್ಲಿ ಶಿರಸಿಯ ಠಾಣೆಗೆ ಹೋಗಿ ಕಂಪ್ಲೇಂಟ್ ಕೊಟ್ಟು ಬಂದಿದ್ದಾಳೆ. ಈಗಿನ ಗಲಾಟೆ, ಬಹುಶಃ ಸಂಜೆ ನಡೆದ ಗಲಾಟೆಯ ಮುಂದುವರಿದ ಭಾಗ’ ಎಂದು ಅತ್ತಂದಿತ್ತಿನವರೆಗಿನ ಘಟನೆಯನ್ನು ಉದ್ದಕ್ಕೆ ಹೇಳಿದ.
ಗಲಾಟೆ ದೊಂಬಿಯಾಗಿ ಬದಲಾಗಿ ಇನ್ನಷ್ಟು ಚುರುಕಾದಂತೆ ಕೇಳತೊಡಗಿತು. ಜ್ಯೋತ್ಸ್ನಾಳ ಅಪ್ಪ ಅಮ್ಮ ತಮ್ಮ ಮನು ಮೂವರೂ ಅಂಗಳ ದಾಟಿ ಮೆಟ್ಟಿಲಿಳಿದು ರಸ್ತೆಗೆ ಹೋಗಿ ನಿಂತರು. ಇವರು ಕೆಳಗಿಳಿದು ಹೋದದ್ದು ಅಗತ್ಯ ಬಿದ್ದರೆ ಸಹಾಯ ಮಾಡಲೋ, ಇನ್ನಷ್ಟು ವಿಷಯ ತಿಳಿದುಕೊಳ್ಳಲೋ ಎಂಬ ಗೊಂದಲದಲ್ಲಿ ಮತ್ತೆರಡು ನಿಮಿಷ ಹೇಡಿಗೆಯಲ್ಲೇ ಜ್ಯೋತ್ಸ್ನಾ ಕೂತಳು.
ನಂತರ ಅಲ್ಲಿಂದ ಎದ್ದು ಹೊರಜಗುಲಿ ಹಾದು ಇಕ್ಕಟ್ಟಾದ ಒಳಜಗುಲಿಗೆ ಬಂದಳು. ನೀಲ್ ಚಂದದ ನಿದ್ದೆಯಲ್ಲಿದ್ದ. ಹಸ್ತದ ಬೆರಳುಗಳನ್ನು ಹೆಣೆದು ಅವನ್ನು ಎದೆಯ ಮೇಲಿಟ್ಟು ಮೊಳಕಾಲಿನ ಮೇಲಷ್ಟೇ ಹೊದಿಕೆ ಹೊದ್ದು ಮಲಗಿದ್ದವನನ್ನು ಹಗುರಾಗಿ ಮುದ್ದಿಸಿದಳು. ಒಮ್ಮೆ ಅವನ ಕಿವಿಯ ಸಂದಿನಲಿ ತನ್ನ ತುಟಿಗಳನ್ನು ಊರಿದಳಷ್ಟೆ, ನೀಲ್ ಅರೆ ಎಚ್ಚರದಲ್ಲೇ ಜ್ಯೋತ್ಸ್ನಾಳನ್ನು ತೆಕ್ಕೆಗೆ ಎಳೆದುಕೊಂಡ. ಅವನೆದೆಯ ಮೇಲೆ ಇಟ್ಟ ತಲೆ ಎತ್ತಿ ಅವನ ಕಣ್ಣುಗಳಿಗಷ್ಟೇ ತನ್ನ ಕೈಯ್ಯನ್ನು ಬೊಗಸೆ ಮಾಡಿ ‘ಕಮ್ ವಿಥ್ ಮೀ ಹನೀ’ ಎಂದಳು. ನೀಲ್ ಅರೆಬೆಳಕಿನಲ್ಲಿಯೇ ಒಮ್ಮೆ ಅವಳ ಮುಖವನ್ನು ದಿಟ್ಟಿಸಿದ. ಅವನ ನಿದ್ದೆ ಎದ್ದು ಓಡಿಹೋಗಿದ್ದು ಖಾತ್ರಿಯಾಯಿತು. ಅವಳನ್ನು ಹಿಂಬಾಲಿಸಿದ.
ಜ್ಯೋತ್ಸ್ನಾ ನೀಲ್‌ನ ಕೈ ಹಿಡಿದೆಳೆದು ಹೊರಜಗುಲಿಯ ತುದಿಯಲ್ಲಿದ್ದ ವೃತ್ತಾಕಾರದ ಮೆಟ್ಟಿಲುಗಳನ್ನು ಓಡಿಕೊಂಡೇ ಹತ್ತಿದಳು. ಅಲ್ಲಿಂದ ಮುಂದೆ ಗೌವ್ವೆನ್ನುವ ಕತ್ತಲನ್ನು ಖುಷಿಯಿಂದ ಅನುಭವಿಸುತ್ತ ನಿಂತ ಕಂಭಗಳ ಕೋಣೆ. ವರ್ಷಗಳೇ ಸಂದಿದ್ದರೂ ಅವಳ ಹೆಜ್ಜೆ ತಪ್ಪಲಿಲ್ಲ, ಯಾವ ಕಂಭಕ್ಕೂ ಹೊಡಾಯದೆ ಮೇಲಿನಮಾಳಿಗೆಯ ಏಣಿ ತಲುಪಿದಳು. ಅವನ ಕೈಯ್ಯನ್ನು ಭದ್ರವಾಗಿ ಹಿಡಿದೇ ಆ ಏಣಿಯನ್ನು ಹತ್ತಿದಳು. ತಲೆಗೆ ತಾಕಿದ ತಗಡಿನ ಬಾಗಿಲನ್ನು ತುಸುವೆ ಓರೆ ಮಾಡಿ ಕುತ್ತಿಗೆಯನ್ನು ಮಾತ್ರ ಎತ್ತಿ ಮೇಲಿನಮಾಳಿಗೆಯ ಘಮ ನೇರ ಕಪಾಲಕ್ಕೆ ಉಗ್ಗುವಂತೆ ಉಸಿರೆಳೆದುಕೊಂಡಳು. ಎರಡು ಮೆಟ್ಟಿಲ ಕೆಳಗೆ ಅವಳ ಕೈ ಹಿಡಿದು ನಿಂತ ನೀಲ್. ಸಪ್ತಪದಿ ತುಳಿಯಲು ಸಿದ್ಧವಾಗಿ ನಿಂತಂತಿತ್ತು ಅವನ ನಿಲುವು. ಜ್ಯೋತ್ಸ್ನಾ ಅವನ ಕೈ ಜಗ್ಗಿದ ರಭಸಕ್ಕೆ ಒಂದೇ ಏಟಿಗೆ ಇಬ್ಬರೂ ಮೇಲ್ಮೆತ್ತಿಯ ಚಿತ್ತಾರದ ಕಿಟಕಿಯೆದುರಿಗೆ ನಿಂತರು. ಸ್ವಲ್ಪವೇ ತೆರೆದ ಕಿಟಕಿಯ ಬಾಗಿಲಿನ ಆಸುಪಾಸಲ್ಲಿ ಸಮುದ್ರದ ನೊರೆಯಂಥ ಬೆಳದಿಂಗಳು. ಜತೆಗೆ ದೂರದಲ್ಲಿ ಕೇಳಿಬರುತ್ತಿದ್ದ ಗಂಡಸರ ಹೆಂಗಸರ ಜಗಳದಂಥ ಗಲಾಟೆ. ನಡುವಲ್ಲಿ ಒಮ್ಮೊಮ್ಮೆ ಮೋಟಾರಿನ ಸದ್ದು.
ಅರೆತೆರೆದ ಚಿತ್ತಾರದ ಕಿಟಕಿಯ ಬಾಗಿಲನ್ನು ಸಶಬ್ದವಾಗಿ ಪೂರ್ತಿ ತೆರೆದಳು ಜ್ಯೋತ್ಸ್ನಾ.
ಮೂಲೆಯಲ್ಲಿ ಗುಪ್ಪೆ ಬಿದ್ದಿರಬಹುದಾದ ಬಾವಲಿಗಳ ಹಿಕ್ಕೆಯ ವಾಸನೆ, ಬೆತ್ತದಪೆಟ್ಟಿಗೆಯಲ್ಲಿ ಬೆಚ್ಚಗೆ ಕೂತಿರಬಹುದಾದ ಆಸ್ತಿಯ ಹರಕಲು ಕಾಗದ ಪತ್ರಗಳ ಪರಿಮಳ, ತಿಂಗಳ ಹಿಂದೆ ಸಗಣಿ ಸಾರಣೆ ಮಾಡಿರಬಹುದಾದ ನೆಲದ ಕಂಪು, ತುಸುವೇ ಗೆದ್ದಲು ಹಿಡಿದಿರಬಹುದಾದ ಕೋಳ್ಕಂಬದಿಂದ ಸೂಸುತ್ತಿದ್ದ ಸೊಗಡು, ಇವೆಲ್ಲದರ ಜತೆ ಸರಣಿಯಲ್ಲಿ ನಡೆದ ಅನಿರೀಕ್ಷಿತ ಘಟನೆಗಳಿಂದಾಗಿ ಏದುಸಿರು ಬಿಡುತ್ತ ಒತ್ತರಿಸಿದಂತೆ ನಿಂತ ತನ್ನ ನೀಲ್‌ನ ಬೆವರಿನ ಗಂಧ. ಎಲ್ಲವನ್ನೂ ಇಡಿಯಾಗಿ ಆಸ್ವಾದಿಸಿದಳು. ಇವೆಲ್ಲವೂ ನರನಾಡಿಗಳಲ್ಲಿ ಒಮ್ಮೆಲೇ ಹೊಕ್ಕಿದಂತಾಯಿತು. ನೀಲ್‌ನ್ ಕಂಕುಳು ಬಳಸಿ ತನ್ನ ಪೂರ್ತಿ ಭಾರವನ್ನು ಬೇಕೆಂತಲೇ ಅವನ ಮೇಲೊಗೆದು ತೆಕ್ಕೆಬಿದ್ದಳು. ಚಿತ್ತಾರದ ಕಿಟಕಿಯನ್ನು ಆಧಾರವಾಗಿಟ್ಟುಕೊಂಡ ನೀಲ್ ತುಸುವೂ ಪ್ರತಿರೋಧ ತೋರದೆ ನೆಲಕ್ಕೊರಗಿದ. ಅವನ ಕುತ್ತಿಗೆಯ ಇಳುಕಲಿನ ಮಿದು, ತೋಳಿನ ಕಸು, ನಾಭಿಯಿಂದೆದ್ದ ಹುಯಿಲು, ಕಿಪ್ಪೊಟ್ಟೆಯ ಕಂಪನ, ತೊಡೆಯ ನಡುವಿನ ಗಡಸು ಅವಳನ್ನು ಕ್ಷಣಕ್ಷಣಕ್ಕೂ ಅಣಿಗೆಡಿಸುತ್ತಲೇ ಬಯಕೆಯನ್ನು ಚೆಲ್ಲಾಪಿಲ್ಲಿ ಮಾಡುತ್ತಲೇ ಸರಿದಾರಿ ರಹದಾರಿ ತೋರತೊಡಗಿದವು.

ಅದೇ ಮುಹೂರ್ತವೆಂಬಂತೆ, ಚಿತ್ತಾರದ ಕಿಟಕಿಯ ಮೂಲಕ ಸೋಕತೊಡಗಿದ ‘ರುಮ್ಮು ರುಮ್ಮು ರುಮ್ಮು’ ತಮಟೆಯ ಸದ್ದು ಒಮ್ಮೆಲೇ ತೀಕ್ಷ್ಣ ಲಯ ಪಡೆದು ಇಡೀ ಊರನ್ನೇ ವ್ಯಾಪಿಸಿಕೊಳ್ಳತೊಡಗಿತು.
(ಕೃತಿ: ರಸಮಲಾಯಿ (ಕಥಾಸಂಕಲನ), ಲೇಖಕರು: ಪೂರ್ಣಿಮಾ ಭಟ್ಟ ಸಣ್ಣಕೇರಿ, ಪ್ರಕಾಶನ: ಸಸಿ ಪ್ರಕಾಶನ, ಬೆಲೆ: 130/-)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


