ಚದುರಂಗದಾಟವೆದರೆ…
ಚದುರಂಗದಾಟವೆಂದರೆ
ರಾಜ- ರಾಜರುಗಳ ಆಟ ಮಾತ್ರವಲ್ಲ
ಕಪ್ಪು ಬಿಳುಪಿನ ಆಟ
ರಾಜರಕ್ಷಣೆಗಾಗಿ ನಿಂತವರ
ಬಲಿದಾನದ ಆಟ
ರಾಜರಾದರೋ ನಿಂತಿರುತ್ತಾರೆ
ಮೈಗಾವಲಿನ ಭಟರನ್ನು
ಮುಂದಿರಿಸಿಕೊಂಡು
ನಿರಾಳರಾಗಿ
ನಿಂತಲ್ಲಿಯೇ ನಿಂತು
ತಮ್ಮವರ ತಮ್ಮ ಶತ್ರುಗಳ
ಸಾವನ್ನು ಕಾಣುತ್ತಾರೆ ನಿರ್ಭಾವುಕರಾಗಿ
ರಾಜರ ಕಾಯುವ ಹೊಣೆ ಹೊತ್ತ
ಆನೆ ಕುದುರೆ ಒಂಟೆ
ಮಂತ್ರಿ ಕಾಲಾಳುಗಳದ್ದಂತೂ
ಎಡೆಬಿಡದ ಓಡಾಟ
ಹೆಜ್ಜೆ ಹೆಜ್ಜೆಯೂ ಮೀಸಲು
ರಾಜರ ರಕ್ಷಣೆಗಾಗಿ
ಓ ಅಲ್ಲಿ ಆ ಒಂಟೆ ಬಂದೀತು
ಇದನ್ನು ಅಡ್ಡ ಇಡು
ನೇರವಾಗಿ ಮುಂದೆ ಹೋಗಿ
ಆ ಆನೆಯನ್ನು ಕೊಲ್ಲು
ಮೂರು ಮತ್ತೊಂದು ಹೆಜ್ಜೆಯಿಡುವ
ಕುದುರೆಯನ್ನು ಬೇಗ ಕೊಂದಷ್ಟೂ ಒಳಿತು
ಮಂತ್ರಿಯಂತೂ ಭಲೇ ಚತುರ
ಹೇಗೆ ಬೇಕಿದ್ದರೂ ಬಂದಾನು ಎಚ್ಚರ!
ಇಂತಹ ಯೋಚನೆಗಳೇ ತುಂಬಿರುತ್ತವೆ
ಹೆಜ್ಜೆ ಹೆಜ್ಜೆಯಿಡುವಾಗಲೂ
ರಾಜರ ರಕ್ಷಣೆಯಲ್ಲಿಯೇ ತಮ್ಮ ಆಯುಷ್ಯ
ಮುಗಿದುಹೋಗುತ್ತಿರುವುದನು ಅರಿಯದ
ಬಡಪಾಯಿಗಳು ಇವರೆಲ್ಲಾ
ಎಲ್ಲರನ್ನೂ ಬಲಿಗೊಟ್ಟ ರಾಜರ
ಅಸ್ತಿತ್ವವೂ ಶಾಶ್ವತವೇನಲ್ಲ
ಒಬ್ಬ ಇನ್ನೊಬ್ಬನ ಕೈಯ್ಯಲ್ಲಿ ಸಾಯಬೇಕು
ಹಾಗೆ ಸಾಯದೇ ಉಳಿದರೆ
ಈಗಾಗಲೇ ಸತ್ತ ಆನೆ ಕುದುರೆ
ಒಂಟೆ ಮಂತ್ರಿ ಕಾಲಾಳುಗಳ
ಜೊತೆಗೆ ‘ಮರದ ಪೆಟ್ಟಿಗೆ’
ಸೇರಿಕೊಳ್ಳಬೇಕು

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

