ಜಯಲಕ್ಷ್ಮೀ ಪಾಟೀಲ್ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ
ಒಂದೆರಡು ದಿನಗಳ ನಂತರ ಅಪ್ಪಾ ದಾಡಿ ಮಾಡಿಟ್ಟುಕೊಂಡ ಟೋಪಾಜ್ ಬ್ಲೇಡನ್ನು ತೆಗೆದುಕೊಂಡು, ಬಲಗಡೆಯ ಮುಂದೆಲೆಯಲ್ಲಿನ ಕಿರುಬೆರಳು ಗಾತ್ರದ ಕೂದಲನ್ನು ಕಣ್ಣೆದುರು ಎಳೆದು ತಂದು ಕರ್ರ್ ಕರ್ರ್ ಎಂದು ಕತ್ತರಿಸಿಕೊಂಡು, ಶಾಂತಾ ಹೇಳಿದಂತೆ, ಅದಕ್ಕೆ ನೀರು ಸೋಕಿಸಿ ಬೆರಳಲ್ಲಿ ಸುರಳಿ ಸುತ್ತಿಹಿಡಿದು ಬಿಟ್ಟೆ. ಅವಳಂತೆ ಗುಂಗುರಾಗದೆ ಕತ್ತರಿಸಿದ ಕೂದಲು ಹಾಗೆಲ್ಲ ಸುಲಭದಲ್ಲಿ ಮಣಿಯಲಾರೆವು ಎಂದು ಸೆಟೆದು ನಿಂತಿದ್ದವು. ಮತ್ತೆ ಮತ್ತೆ ಪ್ರಯತ್ನಿಸುವ ನನ್ನ ಸರ್ಕಸ್ ಅಪ್ಪಾರ ಕಣ್ಣಿಗೆ ಬಿತ್ತು. ಏನದು? ಅಂದರು. ಯಾವುದೇ ಅಳುಕಿಲ್ಲದೇ ನಾನು, ಶಾಂತಾ ಮಾಡಿಕೊಂಡಿದ್ದನ್ನು ನೋಡಿ ನನಗೂ ಆಸೆಯಾಗಿ ಹೀಗೆ ಮಾಡಿಕೊಂಡಿದ್ದೇನೆ ಎಂದೆ.
ಜಯಲಕ್ಷ್ಮೀ ಪಾಟೀಲ್ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ ನಿಮ್ಮ ಓದಿಗೆ

