Advertisement
 ಇಂದಿಗೂ ಬಂಧಿತಳಾದ ಹೆಣ್ಣು ಹಾಗೂ ನೇಮಿಚಂದ್ರರ ಕಥೆಗಳ ನೆನಪು…..: ಡಾ. ಎಲ್.ಜಿ. ಮೀರಾ ಅಂಕಣ

 ಇಂದಿಗೂ ಬಂಧಿತಳಾದ ಹೆಣ್ಣು ಹಾಗೂ ನೇಮಿಚಂದ್ರರ ಕಥೆಗಳ ನೆನಪು…..: ಡಾ. ಎಲ್.ಜಿ. ಮೀರಾ ಅಂಕಣ

“…..ಮಹಿಳೆ ತನ್ನ ಕೆಲಸವನ್ನು ಮಾಡುವುದು ತನ್ನ ಖುಷಿಗೆ, ತನ್ನ ವಿದ್ಯೆ ಓದಿನ ಸದುಪಯೋಗಕ್ಕೆ, ತನ್ನದಾದ ಪ್ರತ್ಯೇಕ ವ್ಯಕ್ತಿತ್ವ ವಿಕಾಸಕ್ಕೆ, ತನ್ನ ಸಾಮರ್ಥ್ಯ, ಯೋಗ್ಯತೆಗಳ ಪೂರ್ಣ ಉಪಯೋಗಕ್ಕೆ ಎಂಬುದು ನಮ್ಮಲ್ಲಿ ಅಪರಿಚಿತ ವಿಷಯ… ಮಹಿಳೆಯ ಬಾಲ್ಯದಿಂದ ಯೌವನದವರೆಗೆ ಅಕೆಯ ಪ್ರತಿ ತಯಾರಿ ಎಂದೋ ಬರುವ ಗಂಡನ ಬೇಡಿಕೆ, ಬಯಕೆಗಳಿಗೆ ಅನುಕೂಲಕರವಾಗಿ ತನ್ನನ್ನು ತಾನು ರೂಪಿಸಿಕೊಳ್ಳುವುದು. ನಾನು ಚಿತ್ರಿಸಿದ ಸ್ತ್ರೀಪಾತ್ರವು ಇಂಥ ಎರಡನೆ ಅಸ್ತಿತ್ವವನ್ನೊಮ್ಮೆ ಝಾಡಿಸಿ, ಗಂಡ ಮಕ್ಕಳ ಬೆಳಕಲ್ಲೆ ಬೆಳಗಬೇಕಾದ ಗ್ರಹವಾಗಿ ತಾನೇನೂ ಉಳಿಯಬೇಕಿಲ್ಲ, ತನಗೂ ಸ್ವಯಂಪ್ರಭೆ ಇದೆ ಎಂಬ ಅರಿವು ಮೂಡಿ, ತನ್ನ ದಿಗ್ವಿಜಯಕ್ಕೆ ಹೊರಟವಳು ಎನ್ನಬಹುದು”.
ಡಾ.
ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತೆರಡನೆಯ ಬರಹ

ಈಚೆಗೆ ನಾನು ಒಂದು ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಒಬ್ಬರೊಂದಿಗೆ ಮಾತಾಡುತ್ತಿದ್ದೆ. ಏಳೆಂಟು ವರ್ಷಗಳ ಹಿಂದೆಯೇ ಸ್ನಾತಕೋತ್ತರ ಪದವಿ ಪೂರೈಸಿದ್ದರೂ ಬೇಗ ಮದುವೆಯಾಗಿ, ಎರಡು ಮಕ್ಕಳೂ ಬೇಗಬೇಗ ಆಗಿದ್ದರಿಂದ ಕೆಲಸಕ್ಕೆ ಸೇರಲಾಗದೆ ಈಗಷ್ಟೇ ಹೊಸದಾಗಿ ಆ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಸೇರಿದ್ದರು ಆಕೆ.

ಮೂವತ್ತು ವರ್ಷಗಳಿಂದ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಯಂ ಕೆಲಸದಲ್ಲಿದ್ದು, ರಾಜ್ಯದ ಬೇರೆ ಬೇರೆ ಕಾಲೇಜುಗಳಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿರುವ ನನಗೆ `ಅತಿಥಿ ಉಪನ್ಯಾಸಕರು’ ಎಂಬ ಪದನಾಮದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳ ಕಷ್ಟಪರಂಪರೆಯ ಪರಿಚಯವಿದೆ. ಖಾಯಂ ಅಧ್ಯಾಪಕರಿಗೆ ಹೋಲಿಸಿದರೆ ತೀರಾ ಕಡಿಮೆ ಸಂಬಳ, ಸೇವಾ ಭದ್ರತೆಯೇ ಇಲ್ಲದಿರುವುದು, ಇದೇ ಕಾರಣಕ್ಕಾಗಿ ಕಾಲೇಜುಗಳಲ್ಲಿ ಅವರಿಗೆ ಉಂಟಾಗುವ ಸ್ಥಾನಮಾನ-ಗೌರವಗಳ ಕೊರತೆ, ಪ್ರತಿ ವರ್ಷವೂ ಕಾಡುವ ಅನಿಶ್ಚಿತತೆ ಇವೆಲ್ಲವುಗಳಿಂದ ತುಂಬ ಮಾನಸಿಕ ತಳಮಳಕ್ಕೊಳಗಾಗುವ ವೃತ್ತಿಜೀವನಸ್ಥಿತಿ ಅವರದು. ಈ ಹಿನ್ನೆಲೆಯಲ್ಲಿ ಮೇಲೆ ಹೇಳಿದ ಅಧ್ಯಾಪಕಿಯ ಬಗ್ಗೆ ನನಗೆ ತುಂಬ ಖೇದವೆನ್ನಿಸಿತು. ಆಕೆ ಸ್ನಾತಕೋತ್ತರ ಪದವಿ ಮುಗಿಸಿದ ತಕ್ಷಣ ಕೆಲಸಕ್ಕೆ ಸೇರಲು ಪ್ರಯತ್ನ ಮಾಡಿದ್ದರೆ ಇನ್ನೂ ಉತ್ತಮ ಭದ್ರತೆ, ನಿಶ್ಚಿತತೆ ಇದ್ದ ಉದ್ಯೋಗಕ್ಕೆ ಸೇರಬಹುದಿತ್ತಲ್ಲ ಅನ್ನಿಸಿತು. ಹಾಗಾಗಿ ಅವರನ್ನು ನಾನು ನೇರವಾಗಿ ಈ ಬಗ್ಗೆ ಪ್ರಶ್ನಿಸಿ ನೋವು ಮಾಡಬಾರದೆಂದು, “ನೀವು ಓದ್ತಾ ಇದ್ದಾಗ ನಿಮ್ಗೆ ಏನಾಗಬೇಕು, ಯಾವ ರೀತಿಯ ಉದ್ಯೋಗ ಮಾಡಬೇಕು ಅಂತ ಆಸೆ ಇತ್ತು?” ಎಂದು ಪರೋಕ್ಷವಾಗಿ ಕೇಳಿದೆ. ಉತ್ತರವಾಗಿ ಆಕೆ, “ಮೇಡಂ, ನಂಗೆ ವಿದೇಶದಲ್ಲಿ ಓದು ಮುಂದುವರಿಸ್ಬೇಕು, ಅಲ್ಲಿ ಕೆಲಸಾನು ಮಾಡ್ಬೇಕು ಅಂತ ಬಹಳ ಆಸೆ ಇತ್ತು” ಎಂದರು. “ಮತ್ತೆ.. ಏನಾಯ್ತು? ಆ ಕನಸನ್ನು ನನಸು ಮಾಡಿಕೊಳ್ಳಕ್ಕೆ ನಿಮ್ಗೆ ಅನುಕೂಲ ಆಗ್ಲಿಲ್ವಾ?” ಎಂದು ಕೇಳಿದೆ. “ಅಯ್ಯೋ … ಏನು ಮಾಡೋದು ಹೇಳಿ ಮೇಡಂ? ನಮ್ಮಪ್ಪಾನೇ ಸರ್ಕಾರೀ ಕಾಲೇಜು ಮೇಷ್ಟ್ರು. ಆದ್ರೆ ಬೇಗ ತಮ್ಮ ಜವಾಬ್ದಾರಿ ಕಳ್ಕೋಬೇಕು ಅನ್ನೋ ದೃಷ್ಟಿಯಿಂದ, ನಾನು ಮಾಸ್ಟರ್ ಡಿಗ್ರಿ ನಾಲ್ಕನೇ ಸೆಮಿಸ್ಟರ್‌ನಲ್ಲಿದ್ದಾಗ್ಲೇ ಅವ್ರು ನಂಗೆ ಮದುವೆಗೆ ಗಂಡು ಹುಡುಕಕ್ಕೆ ಶುರು ಮಾಡಿದ್ರು. ಗಂಡೂ ಬೇಗ ಸಿಕ್ಕಿಬಿಡ್ತು. ಮದುವೆ ಆಗೇ ಬಿಡ್ತು. ಮಕ್ಳೂ ಬೇಗ ಆದ್ವು. ನನ್ನ ಅಮ್ಮಂಗೆ ನಾನು ಅತ್ತೆ ಮನೇಲಿ ಒಳ್ಳೆಯ ಸೊಸೆಯಾಗಿ ಜೈ ಅನ್ನಿಸ್ಕೋಬೇಕು ಅಂತ ಬಹಳ ಆಸೆ ಇತ್ತು. ಹೀಗಾಗಿ ನನ್ನ ಓದು, ಕೆಲಸ, ಕನಸು ಎಲ್ಲ ಹಿಂದೆ ಉಳ್ಕೊಂಡು ಮನೆ ಕೆಲ್ಸ, ಅತ್ತೆ ಮಾವ, ಗಂಡ ಮಕ್ಳು ಅಂದ್ಕೊಂಡು ಹೀಗೆ ಇಷ್ಟು ವರ್ಷ ಕಳೆದೇ ಹೋದ್ವು. ದಿಸ್ ವೇ ಐ ಥಿಂಕ್ ಐ ಮಿಸ್ಡ್ ದ ಬಸ್ ಆಫ್ ಅ ಗುಡ್ ಪ್ರೊಫೆಷನ್ ಅಂಡ್ ಕೆರಿಯರ್. ತಾಯಿ ಮನೆ, ಅತ್ತೆ ಮನೆಯಲ್ಲಿ ಒಳ್ಳೆ ಹುಡುಗಿ ಅನ್ನಿಸಿಕೊಳ್ಬೇಕಿತ್ತಲ್ಲ ಮೇಡಂ?” ಎಂದು ಹೇಳಿ ನಿಟ್ಟುಸಿರಿಟ್ಟರು.

ಸುಮಾರು 29-30 ವಯಸ್ಸಿನ ಆ ಹೆಣ್ಣುಮಗಳು ಹಾಗೆ ನಿಡುಸುಯ್ದದ್ದು ನೋಡಿ ನನಗೆ ಬಹು ಬೇಸರವಾಯಿತು. ತೊಂಬತ್ತರ ದಶಕದ ವರ್ಷಗಳಲ್ಲಿ ಸ್ತ್ರೀಸ್ವಾತಂತ್ರ್ಯ, ಅವಳ ಸ್ವಾಯತ್ತತೆ ಹಾಗೂ ಉದ್ಯೋಗಗಳ ಬಗ್ಗೆ ಸ್ತ್ರೀವಾದಿ ನೆಲೆಯಿಂದ ಗಂಭೀರವಾಗಿ ಆಲೋಚಿಸಿ ತಮ್ಮ ಕಥೆಗಳಲ್ಲಿ ಸ್ವಂತ ಆಯ್ಕೆಗಳ ದೃಷ್ಟಿಯಿಂದ ಅನೇಕ ರೀತಿಯ `ಹೊಸ ಹುಟ್ಟು’ಗಳನ್ನು ಪಡೆದ ಸ್ತ್ರೀಪಾತ್ರಗಳನ್ನು ಸೃಷ್ಟಿಸಿದ ಕನ್ನಡ ಲೇಖಕಿ ನೇಮಿಚಂದ್ರ ಅವರ ನೆನಪು ತೀವ್ರವಾಗಿ ಆಯಿತು. ಎಂಬತ್ತು-ತೊಂಬತ್ತರ ದಶಕಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನಮ್ಮ ಪೀಳಿಗೆಯ ಸಾಹಿತ್ಯಾಸಕ್ತ ಹುಡುಗಿಯರಿಗೆ ಈ ಲೇಖಕಿ ಸ್ಫೂರ್ತಿಯ ಮಿಂಚಾಗಿದ್ದರು. ಸ್ತ್ರೀಬಿಡುಗಡೆಯ ಬಗ್ಗೆ ಅತ್ಯಾಸಕ್ತಿಯಿಂದ ಬರೆದ ಈ ಪ್ರಖರ ಲೇಖಕಿಯನ್ನು ಈ ಕಾಲದ ನಮ್ಮ ಹುಡುಗಿಯರು ಗಂಭೀರವಾಗಿ ಓದಬೇಕಲ್ಲವೆ ಅನ್ನಿಸಿತು. ಈ ಯಂತ್ರಜ್ಞಾನಿ-ವಿಜ್ಞಾನಾಸಕ್ತ ಬರಹಗಾರ್ತಿಯ ಸಿಡಿಲಿನಂತಹ ಬರವಣಿಗೆಯನ್ನು ಮನಸ್ಸು ನೆನೆಯಿತು. ಈ ಕೆಳಗೆ ಅದನ್ನು ಪರಿಚಯಿಸಲು ಪ್ರಯತ್ನಿಸಿದ್ದೇನೆ.

*****

ನೇಮಿಚಂದ್ರ ಅವರ ಸಾಹಿತ್ಯಕ ಸಾಧನೆಗಳನ್ನು ಕುರಿತು ಪರಿಚಯಿಸುವಾಗ ಎರಡು ರೀತಿಯಲ್ಲಿ ಪರಿಚಯಿಸಬಹುದು. ಮೊದಲನೆಯದು ಕಾದಂಬರಿ, ಕಥಾಸಂಕಲನ, ಸಂಪಾದನೆ, ಅಂಕಣ ಬರಹ, ವಿಜ್ಞಾನ, ಮಹಿಳಾ ಅಧ್ಯಯನ, ಭಾಷಾಂತರ – ಹೀಗೆ ಕನ್ನಡ ಗದ್ಯದ ಹೆಚ್ಚು ಕಡಿಮೆ ಎಲ್ಲ ಪ್ರಕಾರಗಳಿಗೂ ಕೊಡುಗೆ ನೀಡಿದ ಒಬ್ಬ ಬರಹಗಾರ್ತಿಯಾಗಿ ಎಂದು. ಇನ್ನೊಂದು, ಎಂಬತ್ತರ ದಶಕದಲ್ಲಿ ಬದಲಾಗುತ್ತಿದ್ದ ಕರ್ನಾಟಕದ ಸಾಹಿತ್ಯಕ-ಸಾಮಾಜಿಕ ಸಂದರ್ಭದಲ್ಲಿ, ತಮ್ಮ ಸಾಹಿತ್ಯದ ಮೂಲಕ ಹೆಣ್ಣಿನ ಹೊಸಹುಟ್ಟನ್ನು ದಾಖಲಿಸಿದ ಬರಹಗಾರ್ತಿಯಾಗಿ ಎಂದು. ನನಗೆ ಈ ಎರಡನೆಯ ರೀತಿ ಪ್ರಿಯವಾದುದು ಮತ್ತು ಹೃದಯಕ್ಕೆ ಹತ್ತಿರವಾದುದು.

ಎಂಬತ್ತರ ದಶಕದ ವರ್ಷಗಳು ………

ವೀಣಾ ಶಾಂತೇಶ್ವರ ಅವರ `ಗಂಡಸರು’ ಕಿರು ಕಾದಂಬರಿಯ ಅಂತ್ಯದಲ್ಲಿ, ಪ್ರೇಮದ ವಿಷಯದಲ್ಲಿ ಗಂಡಿನ ಮೋಸದಿಂದ ನೊಂದ ನಾಯಕಿ ಕೊನೆಯಲ್ಲಿ ತನ್ನ ವರ್ತನೆಯಿಂದ, ತಾನೂ ಸಹ ತನಗೆ ಪರಿಚಿತರಾದ ಗಂಡಸರಂತೆ ಪ್ರೇಮವನ್ನು ಕ್ಯಾಶುವಲ್ ಎಂಬಂತೆ ನೋಡಬಲ್ಲೆ ಎಂಬ ಭಾವವನ್ನು ಓದುಗರಲ್ಲಿ ಹುಟ್ಟಿಸುತ್ತಾಳೆ. `ಗಂಡು ಆಡಬಲ್ಲ ಆಟವನ್ನು ಹೆಣ್ಣೂ ಆಡಬಲ್ಲಳು’ ಎಂಬ ಆ ಸಂದೇಶ ಎಂಬತ್ತರ ದಶಕದ ವರ್ಷಗಳಲ್ಲಿ ತುಂಬ ಕ್ರಾಂತಿಕಾರಕವಾಗಿ ಕಾಣಿಸಿತ್ತು. ನನಗೆ ಇಲ್ಲೂ ಥಟ್ಟನೆ ನೇಮಿಚಂದ್ರ ನೆನಪಾಗುತ್ತಾರೆ. ಏಕೆಂದರೆ `ಗಂಡು ಮಾಡಬಲ್ಲ ಕೆಲಸಗಳನ್ನು ಹೆಣ್ಣೂ ಮಾಡಬಲ್ಲಳು’ ಎಂಬ ಆತ್ಮವಿಶ್ವಾಸವನ್ನು ಅವರು ನನ್ನ ಪೀಳಿಗೆಯ ಅನೇಕ ಹುಡುಗಿಯರಲ್ಲಿ ತಮ್ಮ ಸಾಹಿತ್ಯದ ಮೂಲಕ ತುಂಬಿದರು. ಹೆಣ್ಣು ಇಂಜಿನಿಯರಿಂಗ್ ಓದಬಲ್ಲಳು. ಹೆಣ್ಣು ವಿಜ್ಞಾನದ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಬಲ್ಲಳು. ವಿಮಾನ ಕಾರ್ಖಾನೆಯಲ್ಲಿ ಹೆಲಿಕಾಪ್ಟರ್ ವಿಭಾಗದಲ್ಲಿ ದೊಡ್ಡ ಹುದ್ದೆಯಲ್ಲಿದ್ದು ಗಂಡುಲೋಕವೆಂದು ಕರೆಸಿಕೊಳ್ಳುತ್ತಿದ್ದ ಯುದ್ಧನೌಕೆಗಳಲ್ಲಿ ಪ್ರಯಾಣಿಸಬಲ್ಲಳು. ತನ್ನ ಕಾಲ ಮೇಲೆ ತಾನು ನಿಲ್ಲಬಲ್ಲಳು. ಹಾಸ್ಯಪ್ರಜ್ಞೆಯೊಂದಿಗೆ ಈ ಲೋಕದ ವೈಚಿತ್ರ್ಯವನ್ನು ವರ್ಣಿಸಬಲ್ಲಳು ಎಂದು ತಮ್ಮ ಸಾಹಿತ್ಯ ಮತ್ತು ನಿಜಬದುಕಿನಿಂದ ತೋರಿಸಿಕೊಟ್ಟ ಲೇಖಕಿ ಇವರು.

ಚಿತ್ರದುರ್ಗದಲ್ಲಿ ಹುಟ್ಟಿ ತುಮಕೂರು, ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ಬೆಂಗಳೂರಿಗೆ ಬಂದು ಉನ್ನತ ವಿದ್ಯಾಭ್ಯಾಸ ಮಾಡಿದವರು ಈ ಲೇಖಕಿ. ತಮ್ಮ ಪರಿಸರ ಮತ್ತು ಬದುಕಿನ ಅನುಭವಗಳಿಂದ ಪ್ರಬಲವಾದ ಸ್ತ್ರೀಪರ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದವರು. ಬೆಂಗಳೂರಿನ ನಗರದ ಬದುಕು, `ಅಚಲ’ ಪತ್ರಿಕೆಯ ಮೂಲಕ ಉಂಟಾದ ಸ್ತ್ರೀಪರ ಚಿಂತಕ ಗೆಳತಿಯರ ಬಳಗ, ಎಲ್ಲವನ್ನೂ ಪ್ರಶ್ನೆ, ಪ್ರಯೋಗಗಳ ಮೂಲಕ ನೋಡುವ ವೈಜ್ಞಾನಿಕ ಹಿನ್ನೆಲೆ, ಕರ್ನಾಟಕದಲ್ಲಿ ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಮಹಿಳಾ ಅಧ್ಯಯನ ಕ್ಷೇತ್ರ – ಇವು ನೇಮಿಚಂದ್ರ ಅವರನ್ನು ವಿಶಿಷ್ಟ ಲೇಖಕಿಯನ್ನಾಗಿ ರೂಪಿಸಿದವು.

ಇದು ಉತ್ತರ ಸ್ತ್ರೀವಾದದ ಕಾಲ. ಸ್ತ್ರೀವಾದದ ಮೂರು ಅಲೆಗಳ ನಂತರದ ಕಾಲ. ಎಲ್‌ಜಿಬಿಟಿ ಸಮುದಾಯದ ಹಕ್ಕುಗಳ ವಿಚಾರವು ಬಹುಚರ್ಚಿತ ಸಂಗತಿಯಾಗಿರುವ ಈ ಹೊತ್ತಿನಲ್ಲಿ ಸ್ತ್ರೀವಾದದ ಚರ್ಚೆ ಎಂಬತ್ತರ ದಶಕದ ವರ್ಷಗಳಂತೆ ಬಿರುಸಿನಿಂದ ನಡೆಯದೆ ಇರಬಹುದು. ಆದರೆ ನಲವತ್ತು ವರ್ಷಗಳ ಹಿಂದೆ ಸ್ತ್ರೀವಾದ ಒಂದು ಪ್ರಬಲವಾದ ಚರ್ಚೆಯ ವಿಷಯವಾಗಿತ್ತು. ನೇಮಿಚಂದ್ರ ಅವರನ್ನಂತೂ ಬಹುವಾಗಿ ಪ್ರಭಾವಿಸಿರುವ ಒಂದು ಚಿಂತನಾನೆಲೆಯೆಂದರೆ ಸ್ತ್ರೀವಾದ. ಅವರ ಮಾತುಗಳಲ್ಲೇ ಇದನ್ನು ಹೇಳುವುದಾದರೆ “ನನ್ನ ಬರಹದ ಮೇಲೆ ತೀವ್ರವಾಗಿ ಪ್ರಭಾವ ಬೀರಿರುವ ಅಂಶ ಸ್ತ್ರೀವಾದ. ಸ್ತ್ರೀವಾದ ಎಂದರೇನು ಎಂದು ತಿಳಿಯುವ ಮೊದಲೇ ನಾ ಸ್ತ್ರೀವಾದಿಯಾಗಿದ್ದೆ”. `ಅರಿವು ಮೂಡಿದಾಗಿನಿಂದ ವಿದ್ಯೆಗೆ, ಆರ್ಥಿಕ ಸ್ವಾವಲಂಬನೆಗೆ ಹೆಚ್ಚು ಮಹತ್ವ ಕೊಟ್ಟ, ತಮ್ಮ ವ್ಯಕ್ತಿತ್ವವನ್ನು ಪ್ರತಿಪಾದಿಸಲು ಪದೇ ಪದೇ ಪ್ರಯತ್ನ ಪಟ್ಟ, ತಮ್ಮ ಮನಸ್ಸು ಹೇಳಿದಂತೆ ಬದುಕಲು ಬಯಸಿದ’ ವ್ಯಕ್ತಿ ಇವರು. ಹೆಣ್ಣಿನ ಅನಕ್ಷರತೆ, ಆರ್ಥಿಕ ಅವಲಂಬನೆ, ಆಕೆಯಿಂದ ಬದುಕಿನ ನಿರ್ಧಾರಗಳನ್ನು, ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲ ಹಕ್ಕನ್ನೇ ಕಿತ್ತುಕೊಂಡಿದೆ ಎಂದು ನನ್ನ ಹೊರಮನಸ್ಸಿಗೆ ತಿಳಿಯುವ ಮೊದಲೇ ಒಳಮನಸ್ಸಿಗೆ ಅರಿವಾಗಿತ್ತು’’.

ತಮ್ಮ ಕಥೆಗಳಲ್ಲಿ ಮೂರು ಕಥೆಗಳ ರಚನೆಯ ಬಗ್ಗೆ ನೇಮಿಚಂದ್ರ ಹೇಳುವಾಗ ಅವರ ಸಂವೇದನೆಯ ಪರಿಚಯ ನಮಗೆ ಸ್ಪಷ್ಟವಾಗಿ ಸಿಗುತ್ತದೆ. `ಮತ್ತೆ ಬರೆದ ಕವನಗಳು’, `ಹೊಸ ಹುಟ್ಟು’. `ಬದುಕು ಕಾಯುವುದಿಲ್ಲ’ – ಈ ಮೂರು ಕಥೆಗಳು. ಸ್ತ್ರೀ ಲೈಂಗಿಕತೆ, ತಾಯ್ತನ, ಬದುಕಿನ ಸಾರ್ಥಕತೆ ಮುಂತಾದ ಮುಖ್ಯ ವಿಚಾರಗಳನ್ನು ಈ ಕಥೆಗಳಲ್ಲಿ ಚರ್ಚಿಸಲಾಗಿದೆ. ಯಾವುದೇ ಅಪರಾಧೀ ಪ್ರಜ್ಞೆ ಇಲ್ಲದೆ ಉದ್ಯೋಗಸ್ಥ ಹೆಣ್ಣೊಬ್ಬಳು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ, ಸ್ತ್ರೀಯ ಲೈಂಗಿಕತೆಯ ಬಗ್ಗೆ ಮಾತಾಡುವಲ್ಲಿ, ಹೆಣ್ಣಿನ ಮೇಲೆ ಯಾವುದೇ ಪುರುಷ ಅಹಂಕಾರವನ್ನು ತೋರದೆ ಎಲ್ಲ ಕೆಲಸಗಳನ್ನೂ ಹಂಚಿಕೊಂಡು ಸಮಾನಸ್ಕಂಧತೆಯಿಂದ ದಾಂಪತ್ಯ ಜೀವನ ನಡೆಸುವ ಪ್ರಬುದ್ಧ ಗಂಡನ ಚಿತ್ರಣದಲ್ಲಿ ನೇಮಿಚಂದ್ರ ತಮ್ಮ ಛಾಪು ಮೂಡಿಸಿದ್ದಾರೆ. ಇಂಥ ಗಂಡನಾಗಬೇಕಾದರೆ ಗಂಡಿಗೆ ವಿದ್ಯೆ ಬೇಕು, ಆರೋಗ್ಯಕರ ಮನಸ್ಸು ಬೇಕು, ಹೆಣ್ಣಿನ ಬಗ್ಗೆ ಅವನಲ್ಲಿ ಗೌರವ ಇರಬೇಕು ಮತ್ತು ಪಿತೃಪ್ರಧಾನ ವ್ಯವಸ್ಥೆಯಾಚೆಗೆ ನೋಡುವ ಮನಸ್ಸು ಬೇಕು. ನೇಮಿಚಂದ್ರ ಅವರ ಕಥೆಗಳಲ್ಲಿ ಗಂಡಂದಿರ ಇಂತಹ ಪಾತ್ರಗಳು ಬರುತ್ತವೆ. ಈ ವಿಷಯದಲ್ಲಿ ಇವರು ತನ್ನ ಕಾಲಕ್ಕಿಂತ ಮುಂದಿದ್ದರು ಎಂದು ನನಗೆ ಹಲವು ಬಾರಿ ಅನ್ನಿಸಿದೆ.

ಉದ್ಯೋಗಸ್ಥ ಮಹಿಳೆ. ಇವಳು ನೇಮಿಚಂದ್ರ ಅವರ ಸಾಹಿತ್ಯಕೃತಿಗಳಲ್ಲಿ ಬರುವ ಬಹು ಮುಖ್ಯ ಪಾತ್ರ. `ಗಂಡಿನ ಮೇಲೆ ಅವಲಂಬನೆಯಿಲ್ಲದೆ ಹೆಣ್ಣಿನ ಜೀವನ ನಡೆಯಬೇಕಾದರೆ ಅವಳು ವಿದ್ಯಾವಂತಳಾಗಿ ಉದ್ಯೋಗ ಗಳಿಸುವುದು ಮುಖ್ಯ’ ಎಂಬುದು ಇವರ ಕೇಂದ್ರ ಚಿಂತನೆಯಾಗಿದೆ. ಈ ವಿಷಯದಲ್ಲಿ ಇವರ ನಿಲುವು ಹೀಗೆ ಇದೆ –

“…..ಮಹಿಳೆ ತನ್ನ ಕೆಲಸವನ್ನು ಮಾಡುವುದು ತನ್ನ ಖುಷಿಗೆ, ತನ್ನ ವಿದ್ಯೆ ಓದಿನ ಸದುಪಯೋಗಕ್ಕೆ, ತನ್ನದಾದ ಪ್ರತ್ಯೇಕ ವ್ಯಕ್ತಿತ್ವ ವಿಕಾಸಕ್ಕೆ, ತನ್ನ ಸಾಮರ್ಥ್ಯ, ಯೋಗ್ಯತೆಗಳ ಪೂರ್ಣ ಉಪಯೋಗಕ್ಕೆ ಎಂಬುದು ನಮ್ಮಲ್ಲಿ ಅಪರಿಚಿತ ವಿಷಯ… ಮಹಿಳೆಯ ಬಾಲ್ಯದಿಂದ ಯೌವನದವರೆಗೆ ಅಕೆಯ ಪ್ರತಿ ತಯಾರಿ ಎಂದೋ ಬರುವ ಗಂಡನ ಬೇಡಿಕೆ, ಬಯಕೆಗಳಿಗೆ ಅನುಕೂಲಕರವಾಗಿ ತನ್ನನ್ನು ತಾನು ರೂಪಿಸಿಕೊಳ್ಳುವುದು. ನಾನು ಚಿತ್ರಿಸಿದ ಸ್ತ್ರೀಪಾತ್ರವು ಇಂಥ ಎರಡನೆ ಅಸ್ತಿತ್ವವನ್ನೊಮ್ಮೆ ಝಾಡಿಸಿ, ಗಂಡ ಮಕ್ಕಳ ಬೆಳಕಲ್ಲೆ ಬೆಳಗಬೇಕಾದ ಗ್ರಹವಾಗಿ ತಾನೇನೂ ಉಳಿಯಬೇಕಿಲ್ಲ, ತನಗೂ ಸ್ವಯಂಪ್ರಭೆ ಇದೆ ಎಂಬ ಅರಿವು ಮೂಡಿ, ತನ್ನ ದಿಗ್ವಿಜಯಕ್ಕೆ ಹೊರಟವಳು ಎನ್ನಬಹುದು”. ಇಲ್ಲಿರುವ ಸ್ಪಷ್ಟತೆ ಮತ್ತು ಆತ್ಮವಿಶ್ವಾಸವನ್ನು ಗಮನಿಸಬೇಕು. ಹಿಂದಿನ ಪೀಳಿಗೆಯ ಕೆಲವು ಲೇಖಕಿಯರಲ್ಲಿದ್ದ ಉದ್ಯೋಗದ ಬಗೆಗಿನ ಅಳುಕಿಗೆ ಇದನ್ನು ಹೋಲಿಸಿದಾಗ ಇವರ ಚಿಂತನೆಯ ಪ್ರಖರತೆ ನಮ್ಮ ಅರಿವಿಗೆ ಬರುತ್ತದೆ.

ಇತಿಹಾಸದ ವಿವರಗಳನ್ನು ಆಧರಿಸಿ ಇವರು ಬರೆದ `ಯಾದ್ ವ ಶೇಮ್’ ಇತಿಹಾಸದ ಸೃಜನಶೀಲ ಮರುರಚನೆಗೊಂದು ಗಮನೀಯ ಪ್ರಯತ್ನ. ಇವರೊಳಗಿನ ಸತ್ಯಶೋಧಕಿ ವಿಜ್ಞಾನಿ ಮತ್ತು ಅರ್ಥಶೋಧಕ ಸಾಹಿತಿ ಒಟ್ಟೊಟ್ಟಿಗೆ ಕೆಲಸ ಮಾಡಿದ ಕೃತಿ ಇದು.

`ಒಂದು ಕನಸಿನ ಪಯಣ’ ಮತ್ತು `ಪೆರುವಿನ ಪವಿತ್ರ ಕಣಿವೆಯಲ್ಲಿ’ ಈ ಪ್ರವಾಸ ಕಥನಗಳಲ್ಲಿ ನೇಮಿಚಂದ್ರ ತಮ್ಮ ಸ್ವಂತಿಕೆಯನ್ನು ತೋರಿದ್ದಾರೆ. ಇವು ಕೇವಲ ನೋಡಿದ ಜಾಗಗಳ ವರದಿಗಳಲ್ಲ. ಬದಲಾಗಿ ಸ್ತ್ರೀಯೊಬ್ಬಳು ಇಂಥದನ್ನೇ ನೋಡಬೇಕು ಎಂದು ಯೋಜಿಸಿ ಆ ಕುರಿತು ಅಧ್ಯಯನ ಮಾಡಿ ದುಬಾರಿಯಲ್ಲದ ಪ್ರವಾಸವನ್ನು ಮಾಡಿ ತನ್ನ ಅರಿವನ್ನು ಹೆಚ್ಚಿಸಿಕೊಂಡ ಸಾರ್ಥಕ ಕಥನಗಳಿವು.

ಮೇರಿ ಕ್ಯೂರಿಯಿಂದ ಪ್ರಾರಂಭಿಸಿ ಅನೇಕ ಮಹಿಳಾ ವಿಜ್ಞಾನಿಗಳನ್ನು ಕುರಿತು ನೇಮಿಚಂದ್ರ ಬರೆದಿದ್ದಾರೆ. ಈ ಕಥನಗಳು ಇಂದಿಗೂ ಮಹಿಳೆಯರ ಮತ್ತು ವಿಜ್ಞಾನದ ವಿದ್ಯಾರ್ಥಿನಿಯರ ಆತ್ಮವಿಶ್ವಾಸವನ್ನು ಹೆಚ್ಚಿಸುವಂಥದ್ದು. ಪುರುಷ ಪ್ರಧಾನ ವ್ಯವಸ್ಥೆಯ ಸ್ತ್ರೀಚಿತ್ರಣದಲ್ಲಿ ಕಂಡುಬರುವ ಸಿದ್ಧಮಾದರಿಗಳನ್ನು ಮೀರುವ ನೇಮಿಚಂದ್ರರ ಸಾಹಿತ್ಯ ಪ್ರಯಾಣದಲ್ಲಿ ಇದು ಮತ್ತೊಂದು ಮೈಲಿಗಲ್ಲು.

ತೊಂಬತ್ತರ ನಂತರದ ಭಾರತ. ಇದು ಖಂಡಿತವಾಗಿ ಬದಲಾದ ದೇಶ. ಬೇಕುಗಳ ರಾವು ಬಡಿಸಿಕೊಂಡ ಕೊಳ್ಳುಬಾಕ ಸಂಸ್ಕೃತಿಯ ಕಾಲದಲ್ಲಿ ನಾವಿದ್ದೇವೆ. ಅನಾರೋಗ್ಯಕರ ಜೀವನ ಶೈಲಿಯಿಂದಾಗಿ ಅನೇಕ ರೋಗಗಳ ದಾಸರಾಗಿದ್ದೇವೆ. ನೇಮಿಚಂದ್ರ ಅವರ `ಬದುಕು ಬದಲಿಸಬಹುದು’ ಕೃತಿ ಈ ರೋಗಗ್ರಸ್ತ ಜೀವನಶೈಲಿ ಮತ್ತು ಮನೋನೆಲೆಯನ್ನು ತಿದ್ದಿ ವಿವೇಕವನ್ನು ಊಡುವ ಕೆಲಸವನ್ನು ಮಾಡುತ್ತಿದ್ದಾರೆ.

ನೇಮಿಚಂದ್ರ ಅವರು ಇಷ್ಟದಿಂದ ಮಾಡುವ ಕೆಲಸವೆಂದರೆ ಅಮೃತಬಳ್ಳಿ, ಲಕ್ಷ್ಮೀ ತರು ಮುಂತಾದ ಆರೋಗ್ಯವರ್ಧಕ ಗಿಡಗಳನ್ನು ತಮ್ಮ ಪರಿಚಿತರಿಗೆ ಕೊಡುವುದು. ಇದು ಅವರ ಸಾಹಿತ್ಯರಚನೆಗೆ ಒಂದು ರೂಪಕ ಎನ್ನಬಹುದು. ಮೊದಲು ಅವರು ಸಮಾಜದ ಪುರುಷ ಪ್ರಧಾನ ವ್ಯವಸ್ಥೆಗೆ ಸ್ತ್ರೀವಾದದ ಮದ್ದು ನೀಡಲು ಹೊರಟರು. ಅಬಲತೆಯ ಭೂತವನ್ನು ತಮ್ಮ ಮೇಲೆ ಆವಾಹಿಸಿಕೊಂಡ ಸ್ತ್ರೀಯರಿಗೆ ತಮ್ಮ ಕಥೆ ಮತ್ತು ಮಹಿಳಾ ಚಿಂತನೆಯ ಪ್ರಬಂಧಗಳಿಂದ ಸಬಲತೆಯ ಕಷಾಯವನ್ನು ನೀಡಿದರು. ಈಗ ಕೊಳ್ಳುಬಾಕ ಸಂಸ್ಕೃತಿಯು ತರುತ್ತಿರುವ ರೋಗಗಳಿಗೆ ವಿವೇಕದ ಅಮೃತಬಳ್ಳಿಯನ್ನು ನೀಡುತ್ತಿದ್ದಾರೆ.

ಹೀಗೆ ನೇಮಿಚಂದ್ರ ಅವರ ಸಾಹಿತ್ಯ ಮತ್ತು ಅದನ್ನು ಅವರು ಸೃಷ್ಟಿಸಿದ ಹಿನ್ನೆಲೆಯ ವ್ಯಕ್ತಿತ್ವ ನೆನಪಾಗುತ್ತಿದ್ದಂತೆ, ನಾನು ಈ ಪ್ರಬಂಧದ ಪ್ರಾರಂಭದಲ್ಲಿ ಪ್ರಸ್ತಾಪಿಸಿದ ಅತಿಥಿ ಉಪನ್ಯಾಸಕಿಯ ವಿದ್ಯಾರ್ಥಿದೆಸೆಯಲ್ಲಿ ನೇಮಿಚಂದ್ರರ ಸಾಹಿತ್ಯದ ಪರಿಚಯ ಆಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲ ಅನ್ನಿಸಿತು. ಈಗ ನಿಡುಸುಯ್ಯುವ ಸರದಿ ನನ್ನದಾಯಿತು. `ಸ್ತ್ರೀವಾದವು ಹಚ್ಚಿರುವ ದೀಪದ ಬೆಳಕು ನಮ್ಮ ಸಮಾಜದ ಕೆಲವು ಮೂಲೆಗಳನ್ನು ತಲುಪುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ. ಏಕೆ?’ ಎಂಬ ಪ್ರಶ್ನೆ ಮನಸ್ಸನ್ನು ತುಂಬ ಕಾಡುತ್ತಿದೆ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ