ಪುನರುತ್ಥಾನ
ಈ ಕವಿತೆಯಲ್ಲಿ ಹೊಸದೇನಿದೆ?
ಅದೇ ಲಯ, ಅದೇ ಪ್ರಾಸ
ಅಲಂಕಾರ ಛಂದಸ್ಸು ರೂಪಕ ಪ್ರತಿಮೆ
ಅಹಂಕಾರ ಒಲ್ಲದ ಒಲುಮೆ
ಎಂದಂದುಕೊಂಡು ಬದಿಗೆ ಸರಿಸುವಷ್ಟರಲ್ಲಿ ! ….
ತಿರುಗಿ ನಿಲ್ಲುತ್ತದೆ
ವಿಶ್ವರೂಪ ತೋರುತ್ತ
ಯಾರದೋ ನೋವಾಗುತ್ತೆ
ಯಾರದೋ ನಲಿವಿಗೆ ಕಾರಣವಾಗುತ್ತೆ.
ಯಾರದೋ ದನಿ, ದನಿಯ ಬನಿ, ಬನಿಯ ಹನಿ, ನಿ..ನಿ..ನೀ
ನೋವಾಗುತ್ತೆ ಅಂತ ಈಗೊಮ್ಮೆ ಹೇಳಿದೆ
ಅದು ಅಷ್ಟು ಸುಲಭಕ್ಕೆ ಹೇಳಿ ಮುಗಿಸುವಂತದ್ದಲ್ಲ
ನೋವಾಗುತ್ತೆ, ಕಾವಾಗುತ್ತೆ
ಕಾವಿಗೆ ಕರಗುವ ಮಂಜಾಗುತ್ತೆ
ಮಂಜಿಗೆ ನಡುಗುವ ಕಳೇಬರವಾಗುತ್ತೆ..
ಅಷ್ಟು ಸಾಕಲ್ಲ ಕವಿತೆಗೆ?
ನನಗೆ ನಾನೇ ಹೇಳಿಕೊಂಡು ಏಳುವಷ್ಟರಲ್ಲಿ
ಕೈ ಹಿಡಿಯುತ್ತದೆ
ಕರೆದು ಕೂರಿಸುತ್ತದೆ.
ಬೆನ್ನು ಸವರುತ್ತ ಇನ್ನು ಮುಂದಿದೆಯೆನ್ನುತ್ತ
ಇನ್ನೂ ಹಾಡುವುದುಳಿದಿದೆ
ಕಡುಕತ್ತಲಿನೊಳಗೆ ತಡಕಾಡುತಿದೆಯಾ
ಹಾಡು
ನೋಡು
ಒಳಗಿದೆ ಹೊಸದು
ಜೀವ ಜೀವಗಳ ಬೆಸೆದು
ಜೀವ ಭಾವಗಳ ಹೊಸೆದು ಹೊಸೆದು
ಕದ ತಳ್ಳಿಕೊಂಡು ಬಂದಿತು ಕವಿತೆ ಮತ್ತೆ ಜಿಗಿದು

ಚನ್ನಪ್ಪ ಅಂಗಡಿ ಧಾರವಾಡದಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂದ ಬೆಳಕಿನ ಸಾಂತ್ವನ (ಕವಿತೆಗಳು), ಭೂಮಿ ತಿರುಗುವ ಶಬ್ದ (ಕವಿತೆಗಳು), ಇನ್ನು ಕೊಟ್ಟೆನಾದೊಡೆ (ಕವಿತೆಗಳು), ಮಣ್ಣಿನೊಳಗಿನ ಮರ್ಮ (ಕತೆಗಳು), ಕಿಬ್ಬದಿಯ ಕೀಲುಳುಕಿ (ಕತೆಗಳು), ಸ್ತೋಮ (ಕತೆಗಳು), ಚತುರಂಗ (ವಿಮರ್ಶಾ ಲೇಖನಗಳು), ನೆಲದ ತೇವ (ವಿಮರ್ಶಾ ಲೇಖನಗಳು), ಎದೆಯ ಒಕ್ಕಲಿಗ (ವಚನ ಸಾಹಿತ್ಯ), ಕೃಷಿ ಕಾರಣ (ಕೃಷಿ ಲೇಖನಗಳು), ನಾ.ಸು. ಹರ್ಡೀಕರ್ (ಜೀವನ ಚರಿತ್ರೆ) ಹಾಗೂ ಹಲವು ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ.

