ಇದು ಮಾಯೆ, ಇದಕ್ಕೆ ಬಲಿಬೀಳಬಾರದು ಅನ್ನುವ ಎಚ್ಚರದಲ್ಲಿ ಲಕ್ಷ್ಮಣ ಇದ್ದ. ಹೇಳಿಯೂ ಹೇಳಿದ. ಆದರೆ ಸೀತೆಯನ್ನು ಆಗಲೇ ಮಾಯೆ ಮುಸುಕಿತ್ತು. ಸತ್ಯಾಸತ್ಯದ ವಿವೇಕ ಮರೆಯಾಗಿತ್ತು. ರಾಮನನ್ನು ಕಳುಹಿಸಿದಳು. ಇಬ್ಬರು ಮಾಯೆಯ ಪ್ರಭಾವಕ್ಕೆ ಒಳಗಾದ ವ್ಯಕ್ತಿಗಳ ನಡುವೆ ಅದರಿಂದ ಹೊರತಾಗಿ ಉಳಿದ ಲಕ್ಷ್ಮಣ ಅಸಹಾಯಕತೆ, ಆರ್ತತೆ, ಬಳಲಿಕೆಯನ್ನು ತೋರ್ಪಡಿಸುವ ಒಂದು ಪ್ರತಿಮೆಯಾಗಿ ಅದ್ಭುತ ಪದವಾಗಿ, ಓ ಲಕ್ಷ್ಮಣಾ ಓ ಲಕ್ಷ್ಮಣಾ ಅನ್ನುವ ಒಂದು ಕೂಗು ಈ ಇಡೀ ಪ್ರಸಂಗದಲ್ಲಿ ಮತ್ತೆ ಮತ್ತೆ ಅನುರಣಿಸುತ್ತದೆ. ಕಾಡುತ್ತದೆ.
ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಯ ಒಂದು ಭಾಗದ ಕುರಿತು ಬರೆದಿದ್ದಾರೆ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

“ಮಾಯೆಯನೆಂತು ಸಂಹರಿಸದೆಯೆ ಪಿಡಿವುದಯ್ ನನ್ನಿ…?”

ಮಾಯಾಜಿಂಕೆಯ ಬೆನ್ನಟ್ಟಿದ ರಾಮ ಅದರ ಹಿಂದೆ ಓಡುತ್ತಾ ಓಡುತ್ತಾ ಈಗ ಸಿಗುತ್ತದೆ ಈಗ ಸಿಗುತ್ತದೆ ಇನ್ನೇನೂ ಸಿಕ್ಕಿಯೇ ಬಿಟ್ಟಿತು ಅನ್ನುವ ಭ್ರಮೆಯಿಂದ ಇಲ್ಲ, ಇನ್ನು ಇದು ಜೀವಂತ ಸಿಗುವುದಿಲ್ಲ ಬಾಣ ಹೂಡುವುದೊಂದೇ ಉಳಿದಿರುವ ಮಾರ್ಗ ಅನ್ನುವ ನಿರ್ಧಾರಕ್ಕೆ ಬರುವಾಗ ಬರುವ ಮಾತಿದು. ಅಂದರೆ ಅಲ್ಲಿಯವರೆಗೆ ರಾಮನಿಗೂ ಇದು ಮಾಯೆ, ನಿಜವಾದ ಜಿಂಕೆಯಲ್ಲ ಅನ್ನುವ ಸಂಗತಿ ಅರಿವಾಗದಂತಹ ಮಾಯೆ ಮುಸುಕಿತ್ತು. ಮಾಯೆಯನ್ನು ಕಳೆಯದೇ, ಅದನ್ನು ಸಂಹರಿಸದೇ ಸತ್ಯದರ್ಶನ ಸಾಧ್ಯವಿಲ್ಲ ಅನ್ನುವ ಅರಿವು ಮೂಡಿದಾಗ ಮಾಯೆಯ ಮುಸುಕು ಸರಿಯಿತು.

“ವ್ಯಾಕರಣ ಛಂದಸ್ಸಲಂಕಾರ ಸೂತ್ರಂಗಳಿಂ ಕಬ್ಬವೆಣ್ಣಂ ಕಟ್ಟುವೆಗ್ಗತನಮಂ ಬಿಟ್ಟು ಹೃದಯದಾವೇಶಮನೆ ನೆಚ್ಚುವ ಮಹಾಕವಿಯ ಮಾರ್ಗದಿಂ…”

ವ್ಯಾಕರಣ ಛಂದಸ್ಸು ಅಲಂಕಾರ ಜ್ಞಾನದಿಂದ ಕಾವ್ಯರಚಿಸಲು ಸಾಧ್ಯ ಅನ್ನುವ ದಡ್ಡತನವನ್ನು ಬಿಟ್ಟು ಕಾವ್ಯರಚಿಸಲು ತನ್ನ ಹೃದಯದ ಆವೇಶವನ್ನು ನೆಚ್ಚುವ ಕವಿಯ ಮಾರ್ಗದಂತೆ ಬಿಲ್ಲುಬಾಣಗಳನ್ನು ಹಿಡಿದು ಚಿನ್ನದ ಜಿಂಕೆಯನ್ನು ಹಿಡಿಯಲು ಸಾಧ್ಯವಿಲ್ಲ…. ಬಾಣ ಪ್ರಯೋಗಿಸುವುದೊಂದೇ ಮಾರ್ಗ ಅನ್ನುವ ಅರಿವಾಗಿ ರಾಮ ಬಾಣ ಪ್ರಯೋಗಕ್ಕೆ ಮುಂದಾಗುತ್ತಾನೆ. ಬಾಣ ಹೂಡಿದ. ಅಲ್ಲಿಗೆ ಚಿನ್ನದ ಜಿಂಕೆ ಅನ್ನುವ ಮಾಯೆ ಕಳೆದು ಮಾರೀಚನೆಂಬ ಸತ್ಯದ ಅನಾವರಣ!

(ಕುವೆಂಪು)

ಅರಣ್ಯವಾಸದ ಅಂತಿಮ ದಿನಗಳವು. ಅಯೋಧ್ಯೆಗೆ ಮರಳುವ ನಿರ್ಧಾರ ಮಾಡಿ ಸಡಗರದಿಂದ ತಯಾರಾಗುತ್ತಿದ್ದ ಘಳಿಗೆ. ಅದು ಅವರ ಗುರಿಯಾಗಬೇಕಿತ್ತು. ಅಂತಹ ಸಮಯದಲ್ಲಿಯೇ ಸೀತೆಯ ಕಣ್ಣುಗಳನ್ನು ಈ ಬಂಗಾರದ ಜಿಂಕೆ ಕೆಣಕಿತು. ಆ ಕ್ಷಣದ ಅವಳ ಗುರಿ ಬದಲಾಯಿತು.

ಒಂದುಮೆಟುಕದು ಕೈಗೆ; ಏನೋ ಕಣ್ಕೆಣಕುವುದು;
ಸಂದಿಯವೆ ನಮ್ಮ ಗತಿ! – ಮಂಕುತಿಮ್ಮ

“ಕೋಳು ಹೋಹರೆ, ಅತ್ತಿಗೆ ಈ ಕಾಳ್ಮಿಗದ ಕಾಂಚನ ಕೈತವತೆಗೆ?”

ಇದು ಮಾಯೆ, ಇದಕ್ಕೆ ಬಲಿಬೀಳಬಾರದು ಅನ್ನುವ ಎಚ್ಚರದಲ್ಲಿ ಲಕ್ಷ್ಮಣ ಇದ್ದ. ಹೇಳಿಯೂ ಹೇಳಿದ. ಆದರೆ ಸೀತೆಯನ್ನು ಆಗಲೇ ಮಾಯೆ ಮುಸುಕಿತ್ತು. ಸತ್ಯಾಸತ್ಯದ ವಿವೇಕ ಮರೆಯಾಗಿತ್ತು. ರಾಮನನ್ನು ಕಳುಹಿಸಿದಳು. ಇಬ್ಬರು ಮಾಯೆಯ ಪ್ರಭಾವಕ್ಕೆ ಒಳಗಾದ ವ್ಯಕ್ತಿಗಳ ನಡುವೆ ಅದರಿಂದ ಹೊರತಾಗಿ ಉಳಿದ ಲಕ್ಷ್ಮಣ ಅಸಹಾಯಕತೆ, ಆರ್ತತೆ, ಬಳಲಿಕೆಯನ್ನು ತೋರ್ಪಡಿಸುವ ಒಂದು ಪ್ರತಿಮೆಯಾಗಿ ಅದ್ಭುತ ಪದವಾಗಿ, ಓ ಲಕ್ಷ್ಮಣಾ ಓ ಲಕ್ಷ್ಮಣಾ ಅನ್ನುವ ಒಂದು ಕೂಗು ಈ ಇಡೀ ಪ್ರಸಂಗದಲ್ಲಿ ಮತ್ತೆ ಮತ್ತೆ ಅನುರಣಿಸುತ್ತದೆ. ಕಾಡುತ್ತದೆ. ಅಷ್ಟರಮಟ್ಟಿಗೆ ಈ ಪ್ರಕರಣವನ್ನು ಮತ್ತೆ ಹೊಸದಾಗಿ ಕಟ್ಟಿಕೊಟ್ಟಿದ್ದಾರೆ ಕವಿ ಕುವೆಂಪು. ಇಡಿಯ ಪ್ರಸಂಗದಲ್ಲಿ ಭರಿಸಲಾಗದ ದುಃಖಕ್ಕೆ ಒಳಗಾಗುವ ಪಾತ್ರ ಲಕ್ಷ್ಮಣ.

ರಾಮಬಾಣಕ್ಕೆ ಸಿಕ್ಕಿ ಸಾಯುವ ಮುನ್ನ ಮಾರೀಚ ಓ ಲಕ್ಷ್ಮಣಾ ಓ ಲಕ್ಷ್ಮಣಾ ಅನ್ನುವ ಆರ್ತನಾದ ಮಾಡುತ್ತಾ ತನ್ನ ಪಾಲಿನ ಅಭಿನಯವನ್ನು ಸಾವಿನಲ್ಲೂ ಮೆರೆದ. ಅವನು ನೈಜ ಕಲಾವಿದ ಅನ್ನುತ್ತಾರೆ ಲಕ್ಷ್ಮೀಶ ತೋಳ್ಪಾಡಿ. ಜೀವ ಹೋಗುವ ಕಾಲಕ್ಕಾದರೂ ಸತ್ಯ ಹೇಳ್ಬೇಕಲ್ವಾ. ಆ ಸಮಯದಲ್ಲೂ ನಿಜವಾದ ಕಲಾವಿದನಿಗೆ ಬೇಕಾದ ಅದ್ಭುತ ಸಂಯಮವನ್ನು ತೋರಿ ತನ್ನ ಪಾಲಿನ ಪಾತ್ರವನ್ನು ಅಭಿನಯಿಸಿ ಕೃತಾರ್ಥನಾದ.

ವ್ಯಾಕರಣ ಛಂದಸ್ಸು ಅಲಂಕಾರ ಜ್ಞಾನದಿಂದ ಕಾವ್ಯರಚಿಸಲು ಸಾಧ್ಯ ಅನ್ನುವ ದಡ್ಡತನವನ್ನು ಬಿಟ್ಟು ಕಾವ್ಯರಚಿಸಲು ತನ್ನ ಹೃದಯದ ಆವೇಶವನ್ನು ನೆಚ್ಚುವ ಕವಿಯ ಮಾರ್ಗದಂತೆ ಬಿಲ್ಲುಬಾಣಗಳನ್ನು ಹಿಡಿದು ಚಿನ್ನದ ಜಿಂಕೆಯನ್ನು ಹಿಡಿಯಲು ಸಾಧ್ಯವಿಲ್ಲ…. ಬಾಣ ಪ್ರಯೋಗಿಸುವುದೊಂದೇ ಮಾರ್ಗ ಅನ್ನುವ ಅರಿವಾಗಿ ರಾಮ ಬಾಣ ಪ್ರಯೋಗಕ್ಕೆ ಮುಂದಾಗುತ್ತಾನೆ. ಬಾಣ ಹೂಡಿದ.

“ಧಿಗಿಲೆಂದುದೆದೆ ರಾಮಂಗೆ…” ಅನ್ನುತ್ತಾರೆ ಕವಿ. ಕಲಾವಿದನಾಗಿ ಮಾರೀಚ ಗೆದ್ದ ಬಗೆ ಅದು. ರಾಮನಿಗೇ ಹಾಗೆ ಅನ್ನಿಸಿರಬೇಕಾದರೆ ಇನ್ನು ಕೇಳಿದ ಸೀತೆಯ ಗತಿ ಏನಾಗಿರಬೇಡ? ಅಂದುಕೊಂಡಂತೆ ವರ್ತಿಸಿದಳು ಸೀತೆ.

ಮೊದಲೇ ಮಾಯೆ ಕವಿದ ಬುದ್ಧಿ. ಇದು ರಾಮನ ಕೂಗಲ್ಲ ಅನ್ನುವ ವಿವೇಕದ ಎಚ್ಚರಕ್ಕೆ ಬರಲು ಅವಳಿಗಾಗಲಿಲ್ಲ. ಆ ಕೂಗನ್ನು ಕೇಳಿಯೂ ಲಕ್ಷ್ಮಣನ ಧೃಡತೆ, ನಂಬಿಕೆ ಅಲುಗಾಡಲಿಲ್ಲ.

“ತಾಳ್ಮೆ ತಾಯೀ, ತಾಳ್ಮೆ. ರಕ್ಕಸನಸುರ ಮಾಯೆ ಕೂಗುತಿದೆ. ಅಗ್ರಜನ ಧ್ವನಿ ಅದಲ್ತು. ಭ್ರಾಂತಿಯಿಂ ನಡೆಯದಿರಿತರೆಯಂತೆ”
ಅಣ್ಣನ ಆಜ್ಞಾಪಾಲಕನಾಗಿ ನಿಶ್ಚಲನಾಗಿ ಧೃಢವಾಗಿ ನಿಂತ ಲಕ್ಷ್ಮಣ. ಇನ್ನೊಂದೆಡೆ ಮಾಯೆಯ ವಶವಾಗಿ ಗಾಬರಿಯಿಂದ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುವ ಸೀತೆ. ನಡುವೆ ಮತ್ತೆ ಮತ್ತೆ ಅನುರಣಿಸುವ ಕೂಗು “ಓ ಲಕ್ಷ್ಮಣಾ ಓ ಲಕ್ಷ್ಮಣಾ…”

ಪರಿಪರಿಯಿಂದ ಬೇಡಿಕೊಳ್ಳುತ್ತಾಳೆ ಸೀತೆ ಲಕ್ಷ್ಮಣನನ್ನು ಹೋಗಿ ನೋಡು, ನನ್ನ ರಾಮನಿಗೇನೋ ಆಗಿದೆ ಅನ್ನುವ ಕಳವಳದಲ್ಲಿ.

“ನೀಮಣ್ಣನಂ ಪ್ರೀತಿಸುವ ಮೊದಲೆ ಪ್ರೀತಿಸಿದೆ ನಾನಾತನಂ” ಅನ್ನುವ ಲಕ್ಷ್ಮಣನಿಗೆ ಗೊತ್ತು ರಾಮಮಹಿಮೆ. ಅದಕ್ಕೇ ಇಂತಹ ಪರಿಸ್ಥಿತಿಯಲ್ಲೂ ಧೃತಿಗೆಡದೇ ಸೀತೆಗೆ ಹೇಳುತ್ತಾನೆ, “ತಮ್ಮ ನಿಧಿಯ ಬೆಲೆ ತಮಗರಿಯದವರವೋಲಾಡುವಿರಿ! ಸಾಲ್ಗುಮೀ ಕಳವಳಂ” ಅಂತ.

ಲಕ್ಷ್ಮಣನ ಈ ನಿಶ್ಚಲತೆ ಸೀತೆಯನ್ನು ಕೆರಳಿಸುತ್ತದೆ. ಕಣ್ಕೆರಳಿ ವಿಕಟಮುಖಿಯಾಗಿ ಭೂತಿನಿಯಂತಾಗುತ್ತಾಳೆ. ಆದರೂ ಲಕ್ಷ್ಮಣನ ಚಿತ್ತ ಅಲುಗಾಡುವುದಿಲ್ಲ. ಅಣ್ಣನ ಮೇಲಿನ ಅಚಲ ನಂಬಿಕೆ, ಅಣ್ಣನ ಆಜ್ಞಾಧಾರಕನಾಗಿ ನಿಂತ ಲಕ್ಷ್ಮಣ. ತಮ್ಮ ನಿಧಿಯ ಬೆಲೆ ತಮಗೇ ಅರಿಯದ ಹಾಗೆ ಕಳವಳಿಸುವ ಸೀತೆಯ ಬಗಗೆ ಮರುಕದ ನೋಟ. ಅವನಿಗೆ ಗೊತ್ತು, “ರಾಮನಪ್ರಾಕೃತಂ! ರಾಮನಕ್ಷಯ ಮಹಿಮನಾತಂಗೆ ಪೇಳಣೆಯೆ ದೇವರ್ಕಳುಂ? ದನುಜರಾವ ಹೊಯಿಕೈ?” ದೇವತೆಗಳೇ ರಾಮನ ಪರಾಕ್ರಮದ ಮುಂದೆ ನಿಲ್ಲಲಾರರು. ಇನ್ನು ದಾನವರು ಯಾವ ಲೆಕ್ಕ?

ಲಕ್ಷ್ಮಣ ಎಚ್ಚರದಲ್ಲಿಯೇ ಇದ್ದಾನೆ. ಮಾಯೆಗೆ ಬಲಿಬೀಳಬಾರದೆನ್ನುವ ನಿರಂತರ ಎಚ್ಚರ. ಈ ಎಚ್ಚರದಲ್ಲಿಯೇ ಅವನಿದ್ದ ಸೀತೆ ಅದೆಷ್ಟು ನಿಂದಿಸಿದರೂ. ಆದರೆ ಸೀತೆ ಕೆರಳಿದ ಭೂತಿನಿಯಾಗಿ ಬಾಯ್ಬಡಿದುಕೊಳ್ಳುತ್ತಾ ಮತಿವಿಕಲೆಯಾಗಿ ತನ್ನ ಬಾಯ್ಗತ್ತಿಯಿಂದ ಲಕ್ಷ್ಮಣನ ನಿಶ್ಚಲತೆಯ ಬೇರನ್ನೇ ಕೊಯ್ಯುವವರೆಗೂ…

“ಎಳೆಯ ಕರು ಬೆಳೆದ ಮೇಲದರ ತಾಯನೆ ಬೆದೆಗೆ ಬಯಸಿದಪುದಯ್ಯೋ…!”

ತತ್ತರಿಸಿದುದು ಬುದ್ಧಿ ರಾಮಾನುಜನಿಗೆ. ಪೆಣ್ತನದ ಕಲ್ತನಕೆಲ್ಲೆ ಮೇಣೆಣೆಯುಂಟೆ? ಮತ್ತೆ ಅಲ್ಲಿ ಕ್ಷಣ ನಿಲ್ಲಲು ಸಾಧ್ಯವಾಗಲಿಲ್ಲ ಲಕ್ಷ್ಮಣನಿಗೆ.

ಅದೆಷ್ಟು ಅರ್ಥಗರ್ಭಿತ ಇಲ್ಲಿ ಕವಿ ಬಳಸುವ ರಾಮಾನುಜ ಅನ್ನುವ ಪದ. ರಾಮನ ತಮ್ಮ ಲಕ್ಷ್ಮಣ. ರಾಮನಿಗಾಗಿ ರಾಮನ ಪತ್ನಿಗಾಗಿ ಈ ದಂಪತಿಗಳ ಹಿತಕ್ಕಾಗಿ, ಅರಮನೆ ಊರ್ಮಿಳೆ ಎಲ್ಲವನ್ನೂ ಬಿಟ್ಟು ಬಂದಿದ್ದಾನೆ. ಅಂತಹ ಲಕ್ಷ್ಮಣನಿಗೆ ಸೀತೆ ಆಡುತ್ತಿರುವ ಪ್ರತಿಯೊಂದು‌ ಮಾತು ಕೂಡಾ ಎದೆಗೆ ಚುಚ್ಚುವ ಬಾಣ!

“ಹಿಂದುಹಿಂದಕೆ ನೋಡುತೋಡಿದನ್…” ಬಹಳ ಇಕ್ಕಟ್ಟಿನ ಪ್ರಸಂಗ ಇದು ಲಕ್ಷ್ಮಣನಿಗೆ. ಇತ್ತ ಇರಲಾರದೇ ಅತ್ತ ಹೋಗಲಾರದೇ ಅನುಭವಿಸುವ ತಳಮಳವನ್ನು ಈ ಮಾತುಗಳಲ್ಲಿ ಕುವೆಂಪು ಅದೆಷ್ಟು ಶಕ್ತವಾಗಿ ಕಟ್ಟಿಕೊಡುತ್ತಾರೆ! ಅವನಿಗೆ ಗೊತ್ತು, ತನ್ನ ಅಗತ್ಯ ಇರುವುದು ಇಲ್ಲಿಯೇ ಅಂತ. ಇಲ್ಲಿ ಇಲ್ಲದಿದ್ದರೆ ಏನೋ ಕೇಡಾಗುವ ಶಂಕೆ ಇದೆ ಅವನಲ್ಲಿ. ಅಲ್ಲಿ ರಾಮನಿದ್ದಾನೆ. ಅಲ್ಲಿ ನನ್ನ ಅಗತ್ಯ ಇಲ್ಲ ಅನ್ನುವ ಅರಿವೂ ಅವನಿಗಿದೆ. ಆದರೂ ಬೇಕಾದ ಕಡೆಗೆ ಇರಲಾಗದ ಸಂದಿಗ್ಧತೆ. ಈಗ ಲಕ್ಷ್ಮಣನ ಮನದಲ್ಲೂ ಅದೇ ಕೂಗು… “ಓ‌ ಲಕ್ಷ್ಮಣಾ ಓ‌ ಲಕ್ಷ್ಮಣಾ…. ಇದೆಂಥ ಪರಿಸ್ಥಿತಿ ನಿನ್ನದು”

ಇಲ್ಲಿ ಲಕ್ಷ್ಮಣರೇಖೆಯ ಪ್ರಸಂಗವನ್ನು ಕೈಬಿಟ್ಟಿದ್ದಾರೆ ಕುವೆಂಪು. ಕತೆಗೊಂದು ಸಹಜಗತಿಯನ್ನು ತರುವ ಕವಿಯ ಉದ್ದೇಶ ಸರಿ ಇರಬಹುದು. ಆದರೆ ಮೂಲ ರಾಮಾಯಣದಲ್ಲಿ ಬರುವಂತೆ ರಾವಣ ಯತಿಯ ವೇಷ ಹಾಕಿದ್ದು ಸೀತೆಯನ್ನು ಲಕ್ಷ್ಮಣರೇಖೆಯಿಂದ ಹೊರಗೆ ಬರುವಂತೆ ಮಾಡುವುದಕ್ಕಾಗಿ. ಇಲ್ಲಿ ಅಂತಹ ಪ್ರಸಂಗವೇ ಇಲ್ಲ. ರಾವಣನಾಗಿಯೇ ಪುಷ್ಪಕವಿಮಾನದಿಂದ ಕೆಳಗಿಳಿಯಬಹುದಿತ್ತು. ತಡೆಯಲು ಲಕ್ಷ್ಮಣನಾಗಲಿ ಲಕ್ಷ್ಮಣರೇಖೆಯಾಗಲಿ ಇರಲಿಲ್ಲ. ಹಾಗಾಗಿ ಲಕ್ಷ್ಮಣರೇಖೆಯನ್ನು ಕೈಬಿಟ್ಟು ಯತಿಯ ವೇಷವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯೂ ಇರಲಿಲ್ಲ ಅಂತ ಫಕ್ಕನೆ ಅನ್ನಿಸಿತು. ಕಾವ್ಯಕ್ಕೆ ನಾಟಕೀಯತೆಯನ್ನು ತರುವ ಉದ್ದೇಶ ಇರಬಹುದೇನೋ.

ಅರಸಿ ಅರಸಿ ಸಿಕ್ಕ ರಾಮ. ಮಾಯೆ ಕಳೆದು ಮಾರೀಚನೆಂಬ ಸತ್ಯದರ್ಶನ ಕಂಡ ರಾಮ. “ಓ ಲಕ್ಷ್ಮಣಾ. ಕೇಡಾಯ್ತಲಾ! ದೇವಿಯೋರ್ವಳಂ ಬಿಟ್ಟೇಕೆ ಬಂದೆ? ಕೊರಳಂ ಕೊಯ್ದೆ! ಹಾ ಕೊಂದೆ ನೀ ಕೊಂದೆ!” ಅಂತಂದು ಮತ್ತೆ ಲಕ್ಷ್ಮಣನ ಬೇಗುದಿಯನ್ನು ಹೆಚ್ಚಿಸುತ್ತಾನೆ.

ಝಗಝಗಿಪ ಕೆಂಡದುರಿಚೆಲ್ವಿಗೆ “ಮರುಳುಗೊಳುತ್ತದನೋತು ಸೆರಗಿನೊಳಿರುಂಕಿ ಕದ್ದೋಡುವಣುಗಿಯ ತೆರದಿ ಹಾರಿದನು ಬಾನ್ದೇರನೇರಿ. ಓ ಲಕ್ಷ್ಮಣಾ! ಲಕ್ಷ್ಮಣಾ! ಲಕ್ಷ್ಮಣಾ! ಲಕ್ಷ್ಮಣಾ ಓ! ಎಂದೆಂದು ಬಗ್ಗನಿಂ ಪಿಡಿಗೊಂಡೆರಳೆವೆಣ್ಣೊರಲ್ವಂತೆವೋಲ್ ಹೊಮ್ಮಿತುಕ್ಕಿತು ಹರಿದು ಹಬ್ಬಿತಾಕ್ರಂದನಂ ದೇವಿಯ ಕೊರಲ್ ಬುಗ್ಗೆಯಿಂ ನೆತ್ತರೋಲಂತೆ ಚಿಮ್ಮಿ….”

ಝಗಮಗನೆ ಹೊಳೆಯುವ ಕೆಂಡದ ಉರಿಯ ಚೆಲ್ವಿಗೆ ಮರುಳುಗೊಂಡು ಅದನ್ನು ತನ್ನ ಸೆರಗಿನಲ್ಲಿ ಬಚ್ಚಿಟ್ಟು ಕದ್ದೋಡುವ ಮಗಳಂತೆ ಸೀತೆಯನ್ನು ರಾವಣ ಅಪಹರಿಸಿದ ಅನ್ನುತ್ತಾರೆ ಕವಿ. ರಾವಣನ ಬಾಳ್ದಿಟ್ಟಿ ಮೈಥುಲಿಯ ಬೈತಲೆಯ ಬಟ್ಟೆಯೊಳ್ ಕಣ್ಗೆಟ್ಟವೋಲ್…! ಮೋಹವೆಂಬ ಮಾಯೆ ರಾವಣನಿಗೂ ಮುಸುಕಿತು.

“ಎಲ್ಲರುಂ ಜಿತಮನಸ್ಕರೆ ದೈವ ವಿಧಿ ಮಾಯೆ
ಚೆಲ್ವುರೂಪಿನಂ ಬಂದು ಕಣ್ಕುಕ್ಕುವನಕ”

ಬಹುಶಃ ಮಂಕುತಿಮ್ಮನ ಈ ಸಾಲು ಸೀತೆಯ ಚಿನ್ನದಜಿಂಕೆಯ ಮೋಹಕ್ಕೂ ರಾವಣನ ಸೀತೆಯ ಮೋಹಕ್ಕೂ ಉತ್ತರ ಕೊಡುತ್ತದೆ. ಮನಸ್ಸನ್ನು ಗೆಲ್ಲುವುದು ಅಷ್ಟು ಸುಲಭವಲ್ಲ ಎಂಥವರಿಗೂ.

ರಾಮನ ವಿನಾ ಏನನ್ನೂ ಬಯಸದಿದ್ದ ಭೂಮಿಯ ಮಗಳಾದ ಸೀತೆಯ ಮನಸ್ಸೇ ಚಂಚಲವಾಯ್ತು ಬಂಗಾರದ ಜಿಂಕೆ ಕಂಡಾಗ. ವಾರಿಧಿಯೊಳಡಗಿ ನಿದ್ರಿಪ ಬಾಡವವೋ ತೃಷ್ಣೆ; ಆರದನು ಕೆರಳಿಪರೊ?

ಅತ್ಯಂತ ಉತ್ಕಟವಾದ ತೀವ್ರವಾದ ಭಾವಸಂಘರ್ಷವಿರುವ ರಾಮಾಯಣ ದರ್ಶನಂ ಮಹಾಕಾವ್ಯದ ಭಾಗ ಇದು. “ಓ ಲಕ್ಷ್ಮಣಾ ಓ ಲಕ್ಷ್ಮಣಾ..” ಅನ್ನುವ ಕೂಗು ಇಡೀ ಅಧ್ಯಾಯದೊಳಗೆ ಅನುರಣಿಸುತ್ತಾ ಹೋಗುತ್ತದೆ. ಹೊಸದಾಗಿ ಅಷ್ಟೇ ಅದ್ಭುತವಾಗಿ ಕಟ್ಟಿಕೊಟ್ಟ ರಾಮಾಯಣದ ಭಾಗ ಇದು. ಇದು ರಸ ಋಷಿ ಕಾಣ್ಕೆ!