Advertisement
ಬಿಸಿಬೆಳಕು -ತಂಪುಬೆಳಕಿನ ಸಂಗಮ, ಸಂಭ್ರಮ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಬಿಸಿಬೆಳಕು -ತಂಪುಬೆಳಕಿನ ಸಂಗಮ, ಸಂಭ್ರಮ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಝಗ್ಗನೆ ‘ಸೀರಿಯಲ್ ಸೆಟ್’ ಹತ್ತಿಕೊಂಡಂತೆ ಹತ್ತಿಕೊಂಡು, ಮತ್ತೆ ರಪ್ಪನೆ ಆಫ್ ಆಗಿ, ಮಿಂಚುಹುಳುಗಳ ಈ ಮಾಯಕ ಮೋಡಿಯಲ್ಲಿ ಸಮಯ ಉರುಳುತ್ತಿದ್ದುದೇ ತಿಳಿಯಲಿಲ್ಲ; ಅದರಲ್ಲೂ ಲಕ್ಷಾಂತರ ಮಿಂಚುಹುಳುಗಳ ಈ ನರ್ತನವನ್ನು ಮೊದಲಬಾರಿಗೆ ಕಣ್ದುಂಬಿಸಿಕೊಳ್ಳುತ್ತಿದ್ದ ಕಾವ್ಯಳ ಕುಟುಂಬ, ಬಿಟ್ಟ ಬಾಯಿ ಬಿಟ್ಟಂತೆಯೇ ಈ ಅಮೋಘ ಅನುಭವದಲ್ಲಿ ಕಳೆದುಹೋಗಿದ್ದರು. ನಡುನಡುವೆ ವಿಜ್ಞಾನದ, ಪರಿಸರದ ಬಗ್ಗೆ ಮಾತುಕತೆ, ಮತ್ತೆ ಅಚಾನಕ್ಕಾಗಿ ಮೌನ ಮತ್ತು ಮಾಯೆ! ಹೀಗೇ ಸಾಗಿತ್ತು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಎಂಟನೆಯ ಕತೆ

ಬಿರುಬೇಸಿಗೆಯ ಏಪ್ರಿಲ್ಲಿನಲ್ಲೂ ಕೊಡಗಿನ ಬೆಳಗು ತಂಪಾಗಿಯೇ ಇತ್ತು.  ಗೆಳತಿ ಋತುಪರ್ಣಳ ಜೊತೆ ಹರಟುತ್ತಾ ತಡವಾಗಿ ಮಲಗಿದ್ದ ಕಾವ್ಯಳಿಗೆ, ಜೋಡಿ ಸೂರಕ್ಕಿಗಳ(sun birds) ಕಲರವ ಕಣ್ತೆರೆಸಿತು. ನಿದ್ದೆ ಸಾಕಾಗಿಲ್ಲದಿದ್ದರೂ, ಅಂದಿಗೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ನೆನೆದು ಉತ್ಸಾಹದಿಂದ ಮೇಲೆದ್ದಳು ಕಾವ್ಯ. ಕೊಡಗಿಗೆ ಬಂದಿದ್ದ ಮುಖ್ಯಕಾರಣ ತನ್ನ ಗೆಳತಿಯನ್ನು ಭೇಟಿ ಮಾಡುವುದಾಗಿದ್ದರೂ, ಮತ್ತೊಂದು ಮುಖ್ಯ ಕಾರಣ ‘ಮಿಂಚುಹುಳಗಳ ಭೇಟಿ’.

‘ಇದೇನು ಮಿಂಚುಹುಳುಗಳನ್ನು ಭೇಟಿಯಾಗಲು ಯಾರಾದರೂ ಊರಿಂದೂರಿಗೆ ಬರಬೇಕೇ?’ ಎಂದು ನಿಮ್ಮಲ್ಲಿ ಕೆಲವರು ಹುಬ್ಬುಹಾರಿಸಬಹುದು. ಆದರೆ, ಕಾವ್ಯಳಿಗೆ ಈ ‘ಮಿಂಚುಹುಳುಗಳ ಹಬ್ಬ’ದ ಬಗ್ಗೆ ಎಲ್ಲಿಲ್ಲದ ಆಸಕ್ತಿ, ಅದರಲ್ಲೂ ಗೆಳತಿ ಋತುಪರ್ಣ, ಮತ್ತವಳ ಪತಿ ಸಿದ್ಧಾರ್ಥ್ ಆಸಕ್ತಿಕರವಾಗಿ ವಿವರಿಸಿದ್ದನ್ನು ಕೇಳಿ ಮತ್ತಷ್ಟು ಹುಕಿ ಬಂದಿತ್ತು ಕಾವ್ಯಳಿಗೆ. ಬೆಳಗಿನ ‘ಗುಡ್ ಮಾರ್ನಿಂಗ್’ ಮತ್ತು ಅಪ್ಪುಗೆಯ ನಂತರ ಗೆಳತಿಯರ ಮಾತಿಗೆ ಚಾಲನೆ ಸಿಕ್ತು. ಜೊತೆಗೆ ಋತುಪರ್ಣಳ ಪತಿ ಸಿದ್ಧಾರ್ಥ್ ಮಾಡಿದ ಬ್ಲ್ಯಾಕ್ ಕಾಫಿಯ ಕಪ್ ಕೂಡ ಮಾತುಕತೆಯಲ್ಲಿ ಪಾಲ್ಗೊಂಡಿತ್ತು. ಅಂದಿನ ಸಂಜೆಗೆ ಪ್ಲ್ಯಾನ್ ರೆಡಿಯಾಗಿತ್ತು. ತಮ್ಮ ತಮ್ಮ ಕೆಲಸಗಳನ್ನು ಬೇಗೆ ಬೇಗ ಮುಗಿಸುತ್ತಾ ಎಲ್ಲರೂ ಸಂಜೆಗೇ ಕಾಯುತ್ತಿದ್ದರು. ಇನ್ನೇನು ಮಿಂಚುಹುಳಗಳನ್ನು ಕಾಣಲು ಹೊರಡಬೇಕು, ಅಷ್ಟರಲ್ಲಿ ಕಾರ್ ಬಂದ ಸದ್ದಾಯಿತು. ಬೆಟ್ಟ, ಹಸಿರು ಮರಗಳು, ಹೂಗಿಡಗಳೂ ಸುಂದರವಾಗಿ ಕಾಣಿಸುತ್ತಿದ್ದ ಕಿಟಕಿಯ ಬಳಿ ಬಂದು, ಯಾರು ಬಂದರೆಂದು ಕೆಳಗೆ ಬಗ್ಗಿ ನೋಡಿದಾಗ, ಕಾವ್ಯಳಿಗೆ ಆಶ್ಚರ್ಯ! ಕಾವ್ಯಳ ಪತಿ ಪ್ರಕಾಶ್, ಮಗ ಸಮುದ್ರ ಬಂದಿದ್ದರು. ಕಾರಿಂದಿಳಿಯುತ್ತಾ, “ಹೇಗೆ ಸರ್ಪ್ರೈಸ್?’ ಎನ್ನುತ್ತಲೇ ಓಡಿ ಬಂದ ಮಗನನ್ನು ನೋಡಿ, ಕಾವ್ಯಳಿಗೆ ಆನಂದವಾಯಿತು. ಅವರನ್ನು ಬರಮಾಡಿಕೊಳ್ಳುತ್ತಾ ಋತು ಮತ್ತು ಸಿದ್ಧಾರ್ಥ್ ಮಾತಾಡಿದ್ದನ್ನು ನೋಡಿ, ಕಾವ್ಯಳಿಗೆ ‘ಸರ್ಪ್ರೈಸ್’ ತನಗೆ ಮಾತ್ರವೆಂದೂ, ಈ ಯೋಜನೆಯಲ್ಲಿ ಇವರೆಲ್ಲರ ಕೈವಾಡವಿದೆ ಎಂದು ಅರ್ಥವಾಯಿತು! ಆಗ ಕಾವ್ಯ “ಸರಿ, ಇದೊಂದು ಫ್ಯಾಮಿಲಿ ಪಿಕ್ನಿಕ್ ಆಯ್ತಲ್ಲ?! ನಡೀರಿ, ಹತ್ತಿ ಕಾರು, ಹೊರಡೋಣ, ಮಿಂಚುಹುಳಗಳ ಹಬ್ಬಕ್ಕೆ!” ಎಂದಳು ಉತ್ಸಾಹದಿಂದ.

ಋತುಪರ್ಣಳ ಮನೆಯಿಂದ ೨೦ ಕಿಲೋಮೀಟರ್ ದೂರವಿದ್ದ ಅಭಿರಾಮ್-ಡೈಸಿ ಅವರ ಎಸ್ಟೇಟ್ ತಲುಪುವಷ್ಟರಲ್ಲಿ, ‘ಸಂಜೆ’ಯು ಮೆಲ್ಲನೇ ಜಾಗ ಖಾಲಿ ಮಾಡುತ್ತಾ, ‘ರಾತ್ರಿ’ಗೆ ಎಡೆಮಾಡಿಕೊಡುತ್ತಿತ್ತು. ಕಾರ್ ಇಳಿದ ಇವರೆಲ್ಲರೂ ಅವರ ನಿಸರ್ಗದ ಮಡಿಲಲ್ಲಿದ್ದ ಮನೆಗೆ ನಡೆದರು. ಅಲ್ಲಿ ಗೆಳೆಯರ ಭೇಟಿ, ಉಪಾಹಾರ ಸೇವನೆಯ ನಂತರ ಅಂದಿನ ಪ್ಲ್ಯಾನಿನ ಪ್ರಕಾರ ಎಲ್ಲರೂ ಮೆಲ್ಲನೇ ಅವರ ಎಸ್ಟೇಟಿನ ಭಾಗವಾಗಿದ್ದ ಗದ್ದೆಯ ಕಡೆಗೆ ನಡೆದರು. ಅಲ್ಲಿತ್ತು ನೋಡಿ ನಿಜವಾದ ಸರ್ಪ್ರೈಸ್. ನಿಮ್ಮ ಬಾಲ್ಯದಲ್ಲಿ ಅಥವಾ ಈಗಲೂ ನೀವು ಮಾಲಿನ್ಯವಿಲ್ಲದ ಸ್ಥಳದಲ್ಲಿ ವಾಸ ಮಾಡುತ್ತಿದ್ದರೆ ಮಿಂಚುಹುಳಗಳನ್ನು ನೋಡಿರುತ್ತೀರ. ಆದರೆ ಇಲ್ಲಿ ಈ ಗೆಳತಿಯರ ಕುಟುಂಬಕ್ಕೆ ಕಾಣಿಸಿದ್ದು ಹತ್ತಲ್ಲ, ನೂರಲ್ಲ, ಸಾವಿರವೂ ಅಲ್ಲ, ಲಕ್ಷಾಂತರ ಮಿಂಚುಹುಳಗಳು! ಲೈಟ್ ಪೊಲ್ಯೂಶನ್ ಇಲ್ಲದ ಕಡುಗತ್ತಲೆಯ ರಾತ್ರಿಯಲ್ಲಿ ಗದ್ದೆಯ ಮೇಲೆ, ಅಲ್ಲಿ ಬದುವಿನಲ್ಲಿ ಇದ್ದ ಮರಗಳ ಮೇಲೆ, ಸುತ್ತಲೂ ಇದ್ದ ಕಾಡಿನ ಪುರಾತನ ಮರಗಳ ಮೇಲೆ ಬೆಳಕಿನ ಕವಿತೆಯೇ ಬರೆಯಲಾಗಿತ್ತು. ಮಿಂಚುಹುಳಗಳ ಈ ಹಬ್ಬವನ್ನು ಕಣ್ತುಂಬಿಸಿಯೇ ಅನುಭವಿಸಬೇಕೇ ಹೊರತು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ಸುಂದರ ದೃಶ್ಯವನ್ನು ಮುಂಚೆ ಕಂಡಿದ್ದ ಋತುಪರ್ಣ, ಸಿದ್ಧಾರ್ಥ್, ಅಭಿರಾಮ್, ಡೈಸಿಯಾಗಲೀ, ಮೊಟ್ಟಮೊದಲ ಬಾರಿ ಕಣ್ದುಂಬಿಸಿಕೊಳ್ಳುತ್ತಿದ್ದ ಕಾವ್ಯಳ ಕುಟುಂಬವಾಗಲೀ, ಎಲ್ಲರೂ ಮಾತಿಲ್ಲದೇ ಸ್ಥಬ್ದ! ಪ್ರತಿಯೊಂದು ಬಾರಿಯೂ ಮಿಂಚುಹುಳುಗಳ ಮೆರವಣಿಗೆ ಒಂದು ಹೊಸ ಅನುಭವವನ್ನೇ ಸೃಷ್ಟಿಸುತ್ತಿತ್ತು, ನಿಸರ್ಗದ ಅಚ್ಚರಿಯ ಮೋದ ಎಲ್ಲರ ಮೈಮರೆಯುವಂತೆ ಮಾಡುತ್ತಿತ್ತು.

ಕಟಾವು ಮುಗಿದು, ಬೇಸಿಗೆಗೆ ಒಣಗಿದ್ದ ಗದ್ದೆಯ ಮೇಲೆ ಅಚ್ಚುಕಟ್ಟಾಗಿ ಕುಳಿತು ಈ ಮಿಂಚುಹುಳುಗಳ ಮಾಯಾಲೋಕದ ರಸಾನುಭವ ಪಡೆಯಲು ಎಲ್ಲರೂ ಸಜ್ಜಾದರು. ಕಡುಗತ್ತಲೆಯಲ್ಲಿ ಹಾವು-ಗೀವು ಬಂದಾತು ಎಂದು ಚಿಂತಿಸುವ ಅಗತ್ಯವೂ ಇರಲಿಲ್ಲ; ಏಕೆಂದರೆ ಜೊತೆಗೆ ಕಾವಲಿಗೆ ಬಂದಿತ್ತು ಕಡುಗಪ್ಪು ನಾಯಿ ಪಾಬ್ಲೋ.  ಆಗ ಮೆಲ್ಲಮೆಲ್ಲನೇ ಹೆಚ್ಚಾಯಿತು ಮಿಂಚುಹುಳುಗಳ ಹಾವಳಿ. ಸುತ್ತಲೂ ಒಮ್ಮೆ ಬೆಳಕು ಸೂಸುತ್ತಾ, ಒಮ್ಮೆ ಅವು ಇದ್ದದ್ದೇ ಸುಳ್ಳೆಂಬಂತೆ ಕತ್ತಲಾಗಿಸುತ್ತಾ, ಮತ್ತೆ ಪ್ರತ್ಯಕ್ಷವಾಗುತ್ತಾ ಗಂಧರ್ವಲೋಕವನ್ನೇ ಸೃಷ್ಟಿಸಿದ್ದವು. ಈ ದೃಶ್ಯವನ್ನು ಮತ್ತಷ್ಟು ಅದ್ಭುತಗೊಳಿಸಲು ಕಪ್ಪು ಆಗಸದ ತುಂಬಾ ಬೆಳ್ಳಿ ಚುಕ್ಕಿಗಳ ಕಾರುಬಾರು! ಇದನ್ನೇ ನೋಡುತ್ತಾ ಮೈಮರೆತಿದ್ದಾಗ, ಸಿದ್ಧಾರ್ಥ್ ಸಮುದ್ರನ ಕಡೆಗೆ ತಿರುಗಿ “ಸಮುದ್ರಾ, ಅಲ್ಲಿ ಮೇಲೆ ಕಾಣೋ ನಕ್ಷತ್ರದ ಬೆಳಕಿಗೂ, ಇಲ್ಲಿ ನಮ್ಮ ಸುತ್ತಲೂ ಇರುವ ಮಿಂಚುಹುಳುಗಳ ಬೆಳಕಿಗೂ ಏನು ವ್ಯತ್ಯಾಸ?” ಎಂದು ಪ್ರಶ್ನೆ ಎಸೆದ. ಆಗ, ಶಾಲೆಯಲ್ಲಿ ಕಲಿತ ವಿಜ್ಞಾನ ಮತ್ತು ಮನೆಯಲ್ಲಿ ಆಗಾಗ ನಡೆಯುತ್ತಿದ್ದ ಚರ್ಚೆಯನ್ನು ಜ್ಞಾಪಿಸಿಕೊಂಡ ಸಮುದ್ರ, “ಸಿದ್ಧಾರ್ಥ್ ಚಿಕ್ಕಪ್ಪ, ವ್ಯತ್ಯಾಸ ಅಷ್ಟು ಸರಿಯಾಗಿ ಗೊತ್ತಿಲ್ಲ; ಆದ್ರೆ, ಎರಡೂ ‘ಕೆಮಿಕಲ್ ರಿಯಾಕ್ಷನ್’ಗಳ ಫಲವೇ ಅಲ್ವಾ?. ಹೌದೂ.. ಏನು ವ್ಯತ್ಯಾಸ ಇವೆರಡಕ್ಕೂ?” ಎಂದು ಮರುಪ್ರಶ್ನಿಸಿದ. ಆಗ ಸಿದ್ಧಾರ್ಥ್ “ನೀನು ಹೇಳಿದ್ದು ಒಂದು ಬಗೆಯಲ್ಲಿ ನಿಜಾ. ಎರಡೂ ‘ರಿಯಾಕ್ಷನ್’ಗಳ ಫಲವೇ. ಆದ್ರೆ ಎರಡೂ ರಾಸಾಯನಿಕ ಕ್ರಿಯೆಗಳಾ? ಅಲ್ಲ ಅನ್ಬೇಕು. ಈ ಮಿಂಚುಹುಳುಗಳ ಒಳಗಿನದ್ದು ರಾಸಾಯನಿಕ ಪ್ರಕ್ರಿಯೆ. ಆದ್ರೆ ನಕ್ಷತ್ರಗಳ ಒಳಗೆ ‘ನ್ಯೂಕ್ಲಿಯರ್ ರಿಯಾಕ್ಷನ್’ ನಡೆಯತ್ತೆ. ನಾವು ಈಗ ಜಗತ್ತಿನ ಅತ್ಯಂತ ಬಿಸಿಯಾದ ಬೆಳಕು ಮತ್ತು ಅತ್ಯಂತ ತಂಪಾದ ಬೆಳಕುಗಳ ಬಗ್ಗೆ ಮಾತಾಡ್ತಾ ಇದೀವಿ. ನಕ್ಷತ್ರಗಳ ಒಳಗೆ ‘ನ್ಯೂಕ್ಲಿಯರ್ ಫ್ಯೂಶನ್’ ಅಂದ್ರೆ ಪರಮಾಣುಗಳ ಸಮ್ಮಿಲನ ನಡೀತಾ ಇರತ್ತೆ; ಇದರ ಫಲಿತಾಂಶವಾಗಿ ಅಪಾರವಾದ ಶಾಖ ಮತ್ತು ಬೆಳಕು ಹೊರಬರತ್ತೆ. ಅಲ್ಲಿ ಹೊರಬರುವ ಶಾಖ ಎಷ್ಟಿರಬಹುದು ಹೇಳು? ನೂರಲ್ಲ, ಸಾವಿರವಲ್ಲ, ಲಕ್ಷಾಂತರ ಡಿಗ್ರಿ ಸೆಲ್ಸಿಯಸ್!” ಎಂದನು.

ಆಗ ಸಮುದ್ರ, “ಹೌದು ಚಿಕ್ಕಪ್ಪ; ಸೂರ್ಯ ಕೂಡ ನಕ್ಷತ್ರವೇ ತಾನೆ? ಸೂರ್ಯನ ಒಳಗೆ ಹೈಡ್ರೋಜನ್ ಅಣುಗಳು ಸೇರಿ ಹೀಲಿಯಂ ಆಗೋ ರಾಸಾಯನಿಕ ಕ್ರಿಯೆಯಲ್ಲಿ, ಇದೇ ರೀತಿ ಬೆಳಕು, ಶಾಖ ಹೊರಬರೋದು ಅಲ್ವಾ?” ಎಂದ. ಇದನ್ನು ಕೇಳಿದ ಸಿದ್ಧಾರ್ಥ್, “ಗುಡ್; ಎಕ್ಸಾಕ್ಟ್ಲೀ! ಅತ್ಯಂತ ಬಿಸಿ ಇರುವ ನಕ್ಷತ್ರಗಳು ನೀಲಿ ಬಣ್ಣವನ್ನ ಹೊರಹಾಕುತ್ವೆ; ಅದಕ್ಕಿಂತಲೂ ತಣ್ಣಗಿರುವ ನಕ್ಷತ್ರಗಳು ಕ್ರಮವಾಗಿ ಬಿಳಿ, ಹಳದಿ, ಕೇಸರಿ ಬಣ್ಣ ಹೊರಹಾಕತ್ವೆ; ಅತ್ಯಂತ ತಂಪಾದ ನಕ್ಷತ್ರಗಳು ಕೆಂಪು ಬಣ್ಣದಲ್ಲಿರತ್ವೆ.” ಎಂದನು. ಆಗ ಋತುಪರ್ಣ “ಹೌದಲ್ವಾ? ಅಷ್ಟೆಲ್ಲಾ ಬಣ್ಣಬಣ್ಣದ ನಕ್ಷತ್ರಗಳು ನಮ್ಮ ಸಾಮಾನ್ಯ ಕಣ್ಣಿಗೆ, ಇಷ್ಟು ದೂರದಲ್ಲಿರುವಾಗ ತಂಪಾದ ಬಿಳಿ ಚುಕ್ಕಿಗಳಾಗಿ ಕಾಣತ್ವೆ. ಎಷ್ಟು ಅದ್ಭುತಾನಪ್ಪ ನಮ್ಮ ಪ್ರಪಂಚ!” ಎಂದಳು. ಆಗ ಸಿದ್ಧಾರ್ಥ್, “ನಿಜಾ ಋತು ನೀನು ಹೇಳಿದ್ದು; ಅವು ನಮಗೆ ಇಲ್ಲಿಂದ ತಂಪಾಗಿಯೇ ಕಂಡರೂ, ನಿಜವಾಗಲೂ ತಂಪಾದ ಬೆಳಕು ಈಗ ನಮ್ಮ ಸುತ್ತಲೂ ಇವೆಯಲ್ಲಾ? ಈ ಮಿಂಚುಹುಳಗಳದ್ದು. ಅದ್ರಲ್ಲಿ ಏನು ರಾಸಾಯನಿಕ ಕ್ರಿಯೆ ನಡ್ಯತ್ತೆ ಹೇಳಿ ಯಾರಾದ್ರು?” ಎಂದು ಪ್ರಶ್ನೆ ಎಸೆದನು.

ಆಗ ಕಾವ್ಯ “ಈ ನಮ್ಮ ಮಿಂಚುಹುಳಗಳು ‘ಬಯೋ ಲೂಮಿನಸೆನ್ಸ್’ ಅನ್ನೋ ವಿದ್ಯಮಾನವನ್ನ ಪ್ರದರ್ಶಿಸತ್ವೆ. ಅದನ್ನ ನಾವು ಸಾಮಾನ್ಯವಾಗಿ ‘ಜೈವಿಕ ಪ್ರಕಾಶ’ ಅಥ್ವಾ ‘ಜೀವ ಪ್ರಭೆ’ ಅಂತೀವಿ. ಸಾಮಾನ್ಯವಾಗಿ ಮಿಂಚುಹುಳುಗಳ ಬಹುಪಾಲು ಪ್ರಭೇದಗಳಲ್ಲಿ, ಅದರ ಹೊಟ್ಟೆಯ ಹಿಂಭಾಗದಲ್ಲಿ ‘ಲೂಸಿಫೆರಿನ್’ ಅನ್ನೋ ರಾಸಾಯನಿಕ ಇರತ್ತೆ; ಕೆಲವು ಪ್ರಭೇದಗಳಲ್ಲಿ ಇಂತಹದ್ದೇ ಬೇರೆ ರಾಸಾಯನಿಕ ಕೂಡ ಇರ್ಬಹುದು. ಈ ಲೂಸಿಫೆರಿನ್ ಇದ್ಯಲ್ಲ, ಅದರ ಮೇಲೆ, ‘ಲೂಸಿಫೆರೇಸ್’ ಅನ್ನೋ ಎನ್ಝೈಮ್ ಅಂದ್ರೆ ಕಿಣ್ವ ‘ಆಕ್ಸಿಡೇಶನ್’ ಅನ್ನೋ ರಾಸಾಯನಿಕ ಪ್ರಕ್ರಿಯೆ ನಡೆಸತ್ತೆ; ಆಗ ಉತ್ಪಾದನೆ ಆಗೋ ಶಕ್ತಿ ಇದ್ಯಲ್ಲ? ಅದು ೧೦೦ಕ್ಕೆ ೧೦೦% ಬೆಳಕಾಗಿ ಹೊರಬರತ್ತೆ!” ಅಂತ ವಿವರಿಸಿದಳು. ಆಗ ಸಮುದ್ರ “ಅಮ್ಮ, ೧೦೦ಕ್ಕೆ ೧೦೦% ಬೆಳಕಾಗಿ ಬದಲಾಗತ್ತೆ ಅಂದ್ರೆ? ನಕ್ಷತ್ರಗಳಲ್ಲಿ ಹಾಗಾಗಲ್ವಾ?” ಎಂದು ಕೇಳಿದ.

ಆಗ ಕಾವ್ಯ ಉತ್ತರಿಸುತ್ತಾ, “ಹೌದು ಕಂದಾ, ನಕ್ಷತ್ರಗಳಲ್ಲಿ ನಡೆಯುವ ಪರಮಾಣು ಸಮ್ಮಿಲನದಿಂದ ಹೊರಬರುವ ಶಕ್ತಿ ೯೫% ಶಾಖವೇ! ಆ ಶಾಖವೇ ಕೊಂಚ ಬೆಳಕಾಗಿ ಹೊರಹೊಮ್ಮತ್ತೆ. ಈಗ ನೀನು ಒಂದು ಕಬ್ಬಿಣದ ರಾಡ್ ತೊಗೊಂಡು ಬೆಂಕಿಯಲ್ಲಿ ಕಾಯಿಸಿದೆ ಅಂತಿಟ್ಕೋ; ಆಗ ಅದು ಬಿಸಿಯಾಗ್ತಾ, ಕೆಂಪಗಾಗತ್ತಲ್ವಾ? ಅಲ್ಲಿ ಕೂಡ, ಶಾಖದ ಫಲವಾಗಿ ಕಬ್ಬಿಣದ ರಾಡ್ ಕೆಂಪಗೆ ಬೆಳಕು ಸೂಸತ್ತೆ; ಇದ್ದಿಲು ಕೆಂಡವಾದಾಗ್ಲೂ ಅಷ್ಟೇ ತಾನೇ? ಕೆಂಪಗೆ ಹೊಳೆಯತ್ತೆ; ಆದ್ರೆ ಇಲ್ಲಿ ಕಬ್ಬಿಣವು ಬಿಸಿಯಾಗೋವಾಗ ಯಾವುದೇ ರಾಸಾಯನಿಕ ಕ್ರಿಯೆ ನಡೀತಾಯಿಲ್ಲ; ಕೇವಲ ಭೌತಿಕ ಕ್ರಿಯೆ. ಕೆಂಡದೊಳಗೆ ದಹನದ ರಾಸಾಯನಿಕ ಕ್ರಿಯೆ ನಡೀತಾ ಇದ್ರೂನೂ, ಕೆಂಪು ಬಣ್ಣಕ್ಕೆ ತಿರ್ಗೋದು ಭೌತಿಕ ಕ್ರಿಯೆ; ಶಾಖದ ಒಂದು ಭಾಗ ಬೆಳಕಾಗಿ ಹೊರಹೊಮ್ತಾ ಇದೆ ಅಷ್ಟೇ. ನಕ್ಷತ್ರಗಳಲ್ಲೂ ಹಾಗೇನೇ. ನ್ಯೂಕ್ಲಿಯರ್ ಕ್ರಿಯೆ ನಡೀತಾ ಇದ್ರೂ, ಶಾಖವು ಬೆಳಕಾಗಿ ಹೊರಬರೋದು ಇದೇ ‘ಇನ್ ಕ್ಯಾಂಡೆಸೆನ್ಸ್’ ಅನ್ನೋ ಭೌತಿಕ ಕ್ರಿಯೆಯಿಂದ.” ಎಂದಳು.

ಆಗ ಪ್ರಕಾಶ್ ದನಿಗೂಡಿಸುತ್ತಾ “ಇದನ್ನ ಸಮ್ಮರೈಸ್ ಮಾಡ್ಬೇಕಂದ್ರೆ, ಯಾವುದಾದ್ರೂ ವಸ್ತು ಬಿಸಿಯಾಗಿ, ಆ ಬಿಸಿಯ ಪ್ರಭಾವದಿಂದ ಬೆಳಕು ಸೂಸಿದ್ರೆ, ಆ ವಿದ್ಯಮಾನವನ್ನ ‘ಇನ್ ಕ್ಯಾಂಡೆಸೆನ್ಸ್’ ಅಂದ್ರೆ ‘ಪ್ರಕಾಶಮಾನತೆ’ ಅನ್ನಬಹುದು. ಇನ್ನು, ರಾಸಾಯನಿಕ ಕ್ರಿಯೆಯ ಫಲವಾಗಿ ಅಥವಾ ಮಾತ್ಯಾವುದಾದರೂ ಪ್ರಕ್ರಿಯೆಯ ಫಲವಾಗಿ ಶಾಖವಿಲ್ಲದೇ, ಕೇವಲ ತಂಪುಬೆಳಕು ಹೊರಬಂದ್ರೆ ಅದನ್ನ ‘ಲೂಮಿನೆಸೆನ್ಸ್’ ಅಂದ್ರೆ ತಂಪುಕಾಂತಿ ಅಂತೀವಿ.” ಎಂದು ಸರಳವಾಗಿ ವಿವರಿಸಿದನು.

ಇಷ್ಟೆಲ್ಲಾ ಮಾತುಕತೆಯೂ ಮೆಲುದನಿಯಲ್ಲೇ ನಡೀತಾ ಇತ್ತು; ಕಾಡಿನಲ್ಲೇಕೆ, ನಾಡಿನಲ್ಲೂ ನಾಗರಿಕರು ಪಾಲಿಸಬೇಕಾದ ಮುಖ್ಯ ನಿಯಮ ಅದು. ಮತ್ತೊಬ್ಬರ ಬೌದ್ಧಿಕ, ಮಾನಸಿಕ ‘ಸ್ಪೇಸ್’ಅನ್ನು ಆಕ್ರಮಿಸಿಕೊಳ್ಳುವ ಹಾಗೆ ಜೋರಾಗಿ ಮಾತಾಡುವುದು ಖಂಡಿತವಾಗಿ ಅನಾಗರೀಕತೆಯೇ! ಅದರಲ್ಲೂ ಪ್ರಾಣಿ, ಪಕ್ಷಿ, ಹುಳು-ಹುಪ್ಪಟೆ, ನಿಸರ್ಗದ ತಮ್ಮತನವನ್ನು ನಮ್ಮತನದಿಂದ, ನಮ್ಮ ಬೌದ್ಧಿಕ ದೀವಾಳಿತನದಿಂದ ಹಾಳುಮಾಡಬಾರದಲ್ಲ? ಅಂತಹದ್ದೇ ಮನಸ್ಥಿತಿಯ ಈ ಗುಂಪು, ಪರಿಸರಕ್ಕೆ ಮತ್ತು ಪರಸ್ಪರ ಗೌರವಪೂರ್ವಕವಾಗಿ, ಮೆಲುದನಿಯಲ್ಲಿಯೇ ಚರ್ಚೆ ಮಾಡುತ್ತಿತ್ತು.

ಝಗ್ಗನೆ ‘ಸೀರಿಯಲ್ ಸೆಟ್’ ಹತ್ತಿಕೊಂಡಂತೆ ಹತ್ತಿಕೊಂಡು, ಮತ್ತೆ ರಪ್ಪನೆ ಆಫ್ ಆಗಿ, ಮಿಂಚುಹುಳುಗಳ ಈ ಮಾಯಕ ಮೋಡಿಯಲ್ಲಿ ಸಮಯ ಉರುಳುತ್ತಿದ್ದುದೇ ತಿಳಿಯಲಿಲ್ಲ; ಅದರಲ್ಲೂ ಲಕ್ಷಾಂತರ ಮಿಂಚುಹುಳುಗಳ ಈ ನರ್ತನವನ್ನು ಮೊದಲಬಾರಿಗೆ ಕಣ್ದುಂಬಿಸಿಕೊಳ್ಳುತ್ತಿದ್ದ ಕಾವ್ಯಳ ಕುಟುಂಬ, ಬಿಟ್ಟ ಬಾಯಿ ಬಿಟ್ಟಂತೆಯೇ ಈ ಅಮೋಘ ಅನುಭವದಲ್ಲಿ ಕಳೆದುಹೋಗಿದ್ದರು. ನಡುನಡುವೆ ವಿಜ್ಞಾನದ, ಪರಿಸರದ ಬಗ್ಗೆ ಮಾತುಕತೆ, ಮತ್ತೆ ಅಚಾನಕ್ಕಾಗಿ ಮೌನ ಮತ್ತು ಮಾಯೆ! ಹೀಗೇ ಸಾಗಿತ್ತು. ಆಗ ಸಮುದ್ರ, “ಈ ಹುಳುಗಳು ಯಾಕೆ ಮಿಂಚುತ್ವೆ? ಅದ್ರಲ್ಲೂ ಒಂದಕ್ಕೊಂದು ಸಿಂಕ್ ಆಗಿ, ಒಟ್ಟಿಗೇ ಮಿಂಚಿ, ಒಟ್ಟಿಗೇ ಆಫ್ ಆಗಿ, ಒಳ್ಳೆ ನಮ್ಮ ಶಾಲೆಯ ‘ಆನ್ಯುವಲ್ ಡೇ’ಲಿ, ಕೊರಿಯಾಗ್ರಫಿ ಮಾಡಿ, ನಮ್ಮ ಡ್ಯಾನ್ ಟೀಚರ್ ಡ್ಯಾನ್ಸ್ ಮಾಡಿಸ್ತಾರಲ್ಲ? ಹಾಗೇ ಒಟ್ಟೊಟ್ಟಿಗೇ ಮಿನುಗುತ್ವೆ, ಮತ್ತೆ ಒಟ್ಟೊಟ್ಟಿಗೇ ಸುಮ್ಮನಾಗತ್ವೆ. ಯಾಕೆ ಹೀಗೆ?” ಎಂದು ಕೇಳಿದ.

ಪ್ರಕಾಶ್ ಇದಕ್ಕೆ ಉತ್ತರಿಸುತ್ತಾ, “ಹೌದು ಕಂದಾ; ಯಾರೂ ಹೇಳಿಕೊಡದೇ ಹೇಗೆ ಒಟ್ಟಿಗೇ ನರ್ತಿಸತ್ವೆ ನೋಡು! ಇಲ್ಲಿ ಸಾಮಾನ್ಯವಾಗಿ ಮೇಲೆ ಹಾರ್ತಾ ಇರೋದು ಗಂಡುಹುಳುಗಳು; ಅವು ಕೆಳಗೆ ಇರುವ ಹೆಣ್ಣುಹುಳುಗಳನ್ನು ಅಟ್ರ್ಯಾಕ್ಟ್ ಮಾಡೋಕೆ ಹೀಗೆ ಬೆಳಕು ಚೆಲ್ಲುತ್ವೆ. ಅಷ್ಟೇ ಅಲ್ಲಾ, ಒಂದು ಗಂಡು ಹುಳು ಮತ್ತೊಂದು ಗಂಡು ಹುಳುವಿಗೆ ಕಾಂಪಿಟೇಶನ್ ಕೊಡ್ತಾ, ‘ನಾನು ಹೆಚ್ಚಾ, ನೀನು ಹೆಚ್ಚಾ?’ ಅಂತ ಅದರ ಜೊತೆಗೇ ಮಿಂಚತ್ತೆ, ಅದರ ಜೊತೆಗೇ ಆಫ್ ಆಗತ್ತೆ; ಹೀಗಾಗಿ ಒಟ್ಟೊಟ್ಟಿಗೇ ಲಕ್ಷಾಂತರ ಗಂಡುಮಿಂಚುಹುಳುಗಳ ಕಾಂಪಿಟೇಶನ್ ನಡ್ಯತ್ತೆ ನೋಡು. ಇದಕ್ಕೆ ಪ್ರತ್ಯುತ್ತರವಾಗಿ ಕೆಳಗಿರುವ ಹೆಣ್ಣುಹುಳುಗಳೂ ಮಿಂಚುತ್ತಾ ಉತ್ತರ ಕೊಡತ್ವೆ. ಅಷ್ಟೇ ಅಲ್ಲಾ, ಈ ಬೆಳಕನ್ನ ಅವು ಕೇವಲ ಒಬ್ಬರನ್ನೊಬ್ಬರು ಸೆಳೆಯೋಕೆ ಮಾತ್ರ ಅಲ್ಲ, ಬೇಟೆಗಾರ ಜೀವಿಗಳನ್ನು ಹೆದರಿಸಲು, ತಮ್ಮನ್ನು ತಾವು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಕೂಡ ಬಳಸತ್ವೆ.” ಎಂದು ವಿವರಿಸಿದ.

ಇದಕ್ಕೆ ಸಿದ್ಧಾರ್ಥ್ ಕೂಡ ದನಿಗೂಡಿಸುತ್ತಾ, “ನಿಜಾ; ಈ ಹುಳುಗಳು ಹಾರುವ ‘ಮಿಂಚುಹುಳು’ ಅಂದ್ರೆ ‘ಫೈರ್ ಫ್ಲೈ’ ಆಗುವ ಮುನ್ನ, ಇನ್ನೂ ಲಾರ್ವಾ ಹಂತದಲ್ಲಿರುವಾಗ ಕೂಡ ಹೀಗೇ ಬೆಳಕು ಸೂಸುತ್ವೆ; ಆಗ ಅವಕ್ಕೆ ಇನ್ನೂ ರೆಕ್ಕೆ ಬಂದಿರಲ್ಲ; ಅವುಗಳನ್ನ ‘ಗ್ಲೋ ವರ್ಮ್’ ಅಂತಾರೆ ಆಗ. ಅವು ತಮ್ಮನ್ನ ಪ್ರೊಟೆಕ್ಟ್ ಮಾಡಿಕೊಳ್ಳೋಕೆ ಹೀಗೇ ಬೆಳಕು ಹೊರಹಾಕತ್ವೆ.” ಎಂದು ವಿವರಿಸಿದ.

ಹೀಗೆ ನಮ್ಮ ಸುತ್ತಲೂ ಇರುವ ವೈಜ್ಞಾನಿಕ ಸತ್ಯಗಳನ್ನು ಮೆಲುಕು ಹಾಕುತ್ತಾ, ಜೊತೆಗೆ ಅತ್ಯದ್ಭುತ ಬೆಳಕಿನ ಬೆರಗನ್ನು ಮನದೊಳಗೆ ಇಳಿಸಿಕೊಳ್ಳುತ್ತಾ ಆಹ್ಲಾದಮಯವಾಗಿ ಸಮಯ ಕಳೆದರು ಈ ಸಮಾನಮನಸ್ಕರು. ‘ವಿಜ್ಞಾನ’ವು ಕಣ್ಣಿಗೆ ಕಾಣುವುದನ್ನು, ಕಾಣದ್ದನ್ನು ವಿವರಿಸಿದರೂ, ‘ಕಲೆ’ಯು ಅನುಭವವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವುದಲ್ಲವೇ? ಈ ಮಿಂಚುಹುಳುಗಳ ಮಹಾಸಂಭ್ರಮವನ್ನು ಕಣ್ದುಂಬಿಸಿಕೊಳ್ಳುತ್ತಿದ್ದ ಕಾವ್ಯಳ ಮನದಲ್ಲಿ ಕವಿತೆಯೊಂದು ಜೀವತಳೆದಿತ್ತು, ಋತುಪರ್ಣಳ ಮನದಲ್ಲಿ ಈ ಅನಿರ್ವಚನೀಯ ರಾತ್ರಿಯನ್ನು ತೈಲಚಿತ್ರದ ರೂಪಕ್ಕಿಳಿಸುವ ಇರಾದೆ ಮೊಳಕೆಯೊಡೆದಿತ್ತು. ಮಿಂಚುಹುಳುಗಳು ನಕ್ಷತ್ರದೆಡೆಗೆ ನೋಡಿ ಕಣ್ಣುಹೊಡೆದವಾ ಎಂದು ಕಾಡು ಗಮನಿಸುತ್ತಿತ್ತು!

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)
(ಹಿಂದಿನ ಕಂತು: ಕೇಳಿದ್ದು ಸುಳ್ಳಾಗಬಹುದು, ರುಚಿಸಿದ್ದೂ ಸುಳ್ಳಾಗಬಹುದೇ?)

About The Author

ಕ್ಷಮಾ ವಿ. ಭಾನುಪ್ರಕಾಶ್

ವಿಜ್ಞಾನ ಶಿಕ್ಷಕಿ, ಲೇಖಕಿ ಹಾಗೂ ಸಂವಹನಕಾರರಾದ ಕ್ಷಮಾ ಭಾನುಪ್ರಕಾಶ್, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿತ ಯೋಜನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಸಂವಹನ ವೇದಿಕೆಯಾದ Research Matters ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.  i wonder ವಿಜ್ಞಾನ ನಿಯತಕಾಲಿಕೆಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲಿಷ್–ಕನ್ನಡ ಅನುವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯ ನಿತ್ಯ ವಿಜ್ಞಾನ ಮತ್ತು ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗೆ ಲೇಖಕಿ ಹಾಗೂ ನಿರೂಪಕಿಯಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ 800ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಇವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಗೌರು ಭಟ್ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿ ಎಂಟು ವಿಜ್ಞಾನ ಪುಸ್ತಕಗಳು ಹಾಗೂ ಒಂದು ಕವನ ಸಂಕಲನದ ಲೇಖಕಿ. ಇವರ 'ಜೀವಿಜ್ಞಾನ' ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ೨೦೨೫-೨೬ನೆ ಸಾಲಿನ 'ಶ್ರೇಷ್ಠ ಪುಸ್ತಕ' ಪ್ರಶಸ್ತಿ ಲಭಿಸಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI) ಸಾಧನಗಳ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು ರಂಗಭೂಮಿ ಕಲಾವಿದೆ ಮತ್ತು ಕಂಠದಾನ ಕಲಾವಿದೆಯೂ ಹೌದು.

1 Comment

  1. vasanthakumar kalyani

    ಕತ್ತಲೆಯ ಕ್ಯಾನ್ವಾಸಿನ ಮೇಲೆ ಲಕ್ಷಾಂತರ ಮಿಂಚು ಹುಳುಗಳ ನರ್ತನದ ಕಲ್ಪನೆಯೇ ರೋಚಕ! ಬೆಂಗಳೂರೆಂಬ ರಕ್ಕಸ ಬೆಳಕಿನ ಊರಿನ ಜನಕ್ಕೆ ಊಹೆಗೂ ನಿಲುಕದ್ದು!!

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ