ಪಾಪು ಕಳೆದು ಹೋಗಿದ್ದಾನೆ

ಪಪ್ಪಾ.. ಟೆಬಲ್ಸು ರೈಮ್ಸು ಹೇಳೊದ್ರಲ್ಲಿ ನಾನೆ ಪಸ್ಟು
ನಿಂಗೊತ್ತಾ! ಮಿಸ್ಸು ಉಪ್ಪಾ ಕೊಟ್ರು
ಮಗ ನಲಿಯುತ್ತಿದ್ದ, ಮನಸ್ಸು ಥೈ ತಕ
ಅದು ಅವನ ಗೆಲವು
ದೀಪಾ ಸೆಕೆಂಡು.. ಇವತ್ತು ಸುಮ್ಮನೆ ಕೂತಿದ್ದಳು
ಎಷ್ಟೊತ್ತು ವ್ಯೆವ್ವೆವ್ಯಾ… ಗೊತ್ತಾ?
ಗೊತ್ತು
ಅವತ್ತು ಇವನೂ ಹಾಗೆ ಕೂತಿದ್ದ
ಚಿತ್ರವೆಂಬುದು
ಸೋಲು ಗೆಲುವಾಗುವ ಗೆಲುವು ಸೋಲಾಗುವ ಕ್ಷಣಭಂಗುರ ವ್ಯಾಖ್ಯಾನ
ಮನ ಮರ್ಕಟದ ಮುಂದೆ ಮರುಕಳಿಸುವ ಮರುಕ

‘ಇತ್ತೀಚೆ ನಾಟೀ ನಾಟೀ ಆಗಿ ಆಡ್ತೀರ್ತಾನೆ.. ಗಮನಿಸಿ’
ಮಗನ ಡೈರಿ ಹೊಸ ಆತಂಕ ಹೊತ್ತು ತಂದಿತ್ತು
ದೀಪಾಗೆ ಐ ಲವ್ ಯೂ ಅಂದಿದ್ದ
ದೊಡ್ಡ ಮನುಷ್ಯ
ಕೆನ್ನೆಗೊಂದು ಉಪ್ಪಾ ಕೊಟ್ಟು ಬಾಯಿ ಮೇಲೆ ಕೈ ಇಟ್ಟುಕೊಂಡಿದ್ದ
ಹಾಗೇ ಮಾಡಿ ಇಡಿ ಕ್ಲಾಸು ಮುಸಿಮುಸಿ ನಕ್ಕಿ ಹ್ಞಾಂ…!. ಎಂದಿತ್ತು
ಚಿನ್ನೂ.. ಹಾಗೆ ಮಾಡಬಾರದು.. ಅಂದೆ
ತಪ್ಪೆಂದರೆ ತಪ್ಪಾದೀತೆಂದು
ಹಾಗೆ ಮಾಡಿಲ್ಲವೆಂದೆ ವಾದಿಸಿದ
ಅವನು ಇನ್ನೇನೊ ಒಪ್ಪಿಸುತ್ತಿರುವನಂತೆ ಕಂಡ
ಸರಿ ತಪ್ಪುಗಳ ಮಾನದಂಡಗಳಿಗೆ ನಾನು ಕೈಯಾಡಿಸತೊಡಗಿದೆ

ಟಾಮು ಜೆರ್ರೀ, ಓಗ್ಗೀ ಮತ್ತು ಕಾಕ್ರೋಚು
ರುಚಿ ಕಳೆದುಕೊಂಡ ಮೋಟು ಪತ್ಲೂ
ಈಗೇನಿದ್ದರೂ ಪಾವರ್ ರೇಂಜರ್ಸ್
ಟಿವಿ ನೋಡಿಯೆ ಡ್ಯಾನ್ಸು ಕರಾಟೆ
ಕಲಿವು ಎಂಥ ಭರಾಟೆ!
***
ಅದ್ಯಾವನ್ನೋ ಮಾಸ್ಟರ್‍ನ ಹುಡುಕಿ ಹ್ಹೂ.. ಹ್ಹಾ ಮಾಡಿ
ಇಷ್ಟೇತ್ತರ ಕಾಲೆತ್ತಿ ಪೋಟೊ ಕ್ಲಿಕ್ಕಿಸಿಕೊಂಡ ನನಗಾಗ ಕತ್ತೆ ವಯಸ್ಸು
ಹಸುಳೆಯ ಹಪಾಹಪಿ ತಣಿಸಲು
ಒಂದೊಮ್ಮೆ ಟಿವಿ ಸೋತು ಹೋಗಬಹುದು

ಹತ್ತು ಸಾಲಿನ ಪ್ರೇಮ ಪತ್ರವೆಂಬ ಗ್ರೀಟಿಂಗು
ಹಿಡಿದು ಅವಳ ಮುಂದೆ ನಿಂತಿದ್ದೆ
ಬಹುಶಃ ಮಂಡೆಯೂರಿದ್ದೆ
ಏನು ಹೇಳಿದೆನೊ ಇಲ್ಲವೋ.. ಸ್ಮೃತಿ ಅಷ್ಟೇ
ಯಾಮಾರಿದ ಮನಸ ತಹಬಂದಿಗೆ ತರಲು
ಹತ್ತೂರ ಗೆಳೆಯರು ಪಟ್ಟ ಹರಸಾಹಸವೊಂದು ಹರಿಕಥೆ

ಮಗನೀಗ.. ಅಂಗಳದಲ್ಲಿ ಗುಲಾಬಿ ಅರಳುವದನೆ ಕಾಯುತ್ತಿರುತ್ತಾನೆ
ಅವು ಮಿಸ್‍ಗೆ ತಲುಪುತ್ತಿಲ್ಲವೆಂಬ ಖಾತರಿ
ಮತ್ತೀಗ ಚುಮ್ಮೀ.. ಎಂಬ ಹೆಸರು ಚಾಲ್ತಿಗೆ ಬಂದಿದೆ
ರೈಟು ರಾಂಗು ಚೈಲ್ಡ್ ಸೈಕಾಲಜಿ ಗೆರೆ ಎಳೆದು ತೋರಿಸಿದೆ
ಎಲ್ಲ ಗೊತ್ತು ಬಿಡು ಪಪ್ಪಾ.. ಗೆರೆ ಎಳೆದಂತೆ ಹೇಳುತ್ತಿದ್ದಾನೆ ಮಗ

ಪಟಾಕಿ ಹೊಡೆಯ ಹೋಗಿ ಸುಟ್ಟುಕೊಂಡ ನೆನಪು
ಎಷ್ಟು ಬಾಕಿ ಇವೆ ಭಯ
ಹಂಗಿಲ್ಲದೆ ಹಚ್ಚುತ್ತಾನೆ ಸಾಲು ಸಾಲು ಸರ
ಪಟಾಕಿ
ಚಟ್ಟ ಚಟ್ಟ ಸಿಡಿಯಲು ಕಣ್ಣಲ್ಲಿ ನಕ್ಷತ್ರ ಚಟಾಕಿ
ಪಪ್ಪಾ.. ಅಷ್ಟೂ ಪಟಾಕಿ ಒಟ್ಟಿಗೆ ಸೇರಿದರೆ ಬಾಂಬು ಆಗುತ್ತಲ್ಲವೆ?
ಮಗನ ನೆಗೆತಕ್ಕೆ ಬೆಚ್ಚಿ ನೋಡಿದೆ
ಅವನ ಕಣ್ಣ ಆಳದಲ್ಲಿ ತಣ್ಣಗೆ ತೇಲುತ್ತಿರುವ ಕ್ರೌರ್ಯ

ಲಿಂಗರಾಜ ಸೊಟ್ಟಪ್ಪನವರ ಹಾವೇರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಅನೇಕ ಕಥೆಗಳು ಹಾಗೂ ಕವಿತೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಕೆಲವು ಬಹುಮಾನ ಪಡೆದಿವೆ.
ಕಣವಿ ಕಾವ್ಯ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ವಿಜಯಕರ್ನಾಟಕ ಯುಗಾದಿ ಕಥಾಸ್ಪರ್ಧೆಯಲ್ಲಿ(2021) ಪ್ರಥಮ ಬಹುಮಾನ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಫೆಲೊಷಿಪ್ ಪಡೆದುಕೊಂಡಿದ್ದಾರೆ
ಮಾರ್ಗಿ ಪ್ರಕಟಿತ ಕಥಾ ಸಂಕಲನವಾಗಿದ್ದು, ಮನ್ಸೂರ್ ಸಾಹೇಬನ ಕೇಗೆಲ್ ಎಕ್ಷಪರೀಮೆಂಟು (ಕಥಾ ಸಂಕಲನ) ಹಾಗೂ ಹರಿವ ನದಿಯೂ ಹಂಬಲದ ತಟವೂ- ಕವನ ಸಂಕಲನಗಳು ಪ್ರಕಟಣೆ ಹಂತದಲ್ಲಿವೆ.